ಕೊಡ್ಲಿಪೇಟೆಯಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವ

25/08/2020

ಮಡಿಕೇರಿ ಆ. 25 : ಕೊಡ್ಲಿಪೇಟೆಯ ವೀರಭದ್ರೇಶ್ವರ ದೇವಾಲಯದಲ್ಲಿ ಭಾದ್ರಪದ ಮಾಸದ ಮೊದಲ ಮಂಗಳವಾರ ವೀರಭದ್ರೇಶ್ವರ ಸ್ವಾಮಿಯ ಜಯಂತೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ವೀರಶೈವ ಲಿಂಗಾಯತ, ಜಂಗಮ ಅರ್ಚಕರ ಸಂಘ, ವೀರ ಶೈವ ಲಿಂಗಾಯತ ಸಂಘಟನಾ ವೇದಿಕೆ, ಕೊಡ್ಲಿಪೇಟೆ ವೀರಭದ್ರೇಶ್ವರ ದೇವಾಲಯ ಸಮಿತಿ ಹಾಗೂ ವೀರಶೈವ ಸಮಾಜದ ಸಂಯುಕ್ತ ಆಶ್ರಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲು ಮಠದ ಮಹಾಂತ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿಗಳ ಸಾನಿಧ್ಯದಲ್ಲಿ ಮಹಾಮಾರಿ ಕೊರೋನಾ ನಿರ್ಮೂಲನೆಗಾಗಿ, ಪ್ರಾಕೃತಿಕ ವಿಕೋಪದಿಂದ ತತ್ತರಿಸುತ್ತಿರುವ ಕೊಡಗಿನ ರಕ್ಷಣೆಗಾಗಿ ಹಾಗೂ ಸುಭಿಕ್ಷಾ ಕೊಡಗು ನಿರ್ಮಾಣಕ್ಕಾಗಿ ಸಂಕಲ್ಪ ತೊಟ್ಟು ರುದ್ರಾಭಿಷೇಕ, ಅಷ್ಟೋತ್ತರ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು.
ಜಯಂತಿಯ ಅಂಗವಾಗಿ ಉದಯೋನ್ಮುಖ ಕಲಾವಿದ ದೀಪಕ್ ಅವರ ವೀರಗಾಸೆ ನೃತ್ಯ ಜನ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಉಪಾಧ್ಯಕ್ಷ ಸಿ.ವಿ. ಶಂಬುಲಿಂಗಪ್ಪ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್, ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ, ವೀರಶೈವ ಸಮಾಜದ ಅಧ್ಯಕ್ಷ ಯತೀಶ್, ತಾಲೂಕು ವೀರಶೈವ ಸಭಾ ಅಧ್ಯಕ್ಷ ಹಾಲಪ್ಪ, ಜಿಲ್ಲಾ ಮಹಾಸಭಾದ ಉಪಾಧ್ಯಕ್ಷರಾದ ಕಾಂತರಾಜ್, ಮಮತಾ ಸತೀಶ್, ಕಾರ್ಯದರ್ಶಿ ನಂಜಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಖಜಾಂಚಿ ಡಿ.ಬಿ.ಸೋಮಪ್ಪ, ಕಾರ್ಯದರ್ಶಿ ಜಯರಾಜು, ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷ ಮೋಹನ್ ಮೂರ್ತಿ, ಕಾರ್ಯದರ್ಶಿ ಸೋಮಶೇಖರ್ ಶಾಸ್ತ್ರಿ, ಪ್ರಮುಖರಾದ ಶಿಲ್ಪಿ ವರಪ್ರಸಾದ್, ಪಟೇಲ್ ವಿಶ್ವನಾಥ್ ಹಾಗೂ ಮತ್ತಿತರರು ಹಾಜರಿದ್ದರು.