2019ನೇ ವರ್ಷದ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ

August 25, 2020

ಮಡಿಕೇರಿ ಆ.25 : ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿವರ್ಷದಂತೆ 2019 ನೆಯ ವರ್ಷದ ಪುಸ್ತಕ ಬಹುಮಾನ ಯೋಜನೆಗಾಗಿ ಕನ್ನಡ ಪುಸ್ತಕ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡುವ ಒಂದು ಕೃತಿಗೆ ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಸಲ್ಲಿಸುವ ಕೃತಿಗಳು 2019ರ ಜನವರಿ 1 ರಿಂದ ಡಿಸೆಂಬರ್ 31 ರೊಳಗೆ ಪ್ರಥಮ ಆವೃತಿಯಾಗಿ ಪ್ರಕಟವಾಗಿರುವ ಕೃತಿಗಳಾಗಿರಬೇಕು. ಕೃತಿಯಲ್ಲಿ ಪ್ರಥಮ ಮುದ್ರಣ 2019 ಎಂದು ಮುದ್ರಿತವಾಗಿರಬೇಕು.
ಕಾವ್ಯ (ವಚನಗಳು ಮತ್ತು ಹನಿಗವನಗಳು ಸೇರಿ), ನವಕವಿಗಳ ಪ್ರಥಮ ಕವನ ಸಂಕಲನ (ದೃಢೀಕರಣ ಪತ್ರದೊಂದಿಗೆ), ಕಾವ್ಯ ಹಸ್ತ ಪ್ರತಿ-30 ವರ್ಷ ಒಳಗಿರುವ ಯುವ ಕವಿಗಳು ತಮ್ಮ ಅಪ್ರಕಟಿತ ಪ್ರಥಮ ಕವನ ಸಂಕಲನದ ಹಸ್ತ ಪ್ರತಿಯನ್ನು ಕಳಿಸಿಕೊಡಬೇಕು.ಕಾದಂಬರಿ, ಸಣ್ಣಕತೆ, ನಾಟಕ, ಲಲಿತ ಪ್ರಬಂಧ (ಹರಟೆ ಮತ್ತು ವಿನೋದ ಸಾಹಿತ್ಯ ಸೇರಿ), ಪ್ರವಾಸ ಸಾಹಿತ್ಯ, ಜೀವನಚರಿತ್ರೆ/ ಆತ್ಮಕಥೆ, ಸಾಹಿತ್ಯ ವಿಮರ್ಶೆ (ಸಾಹಿತ್ಯ ಚರಿತ್ರೆ, ಸಾಹಿತ್ಯ ತತ್ವ, ಮತ್ತು ಸೌಂದರ್ಯ ಮೀಮಾಂಸೆ ಸೇರಿ), ಗ್ರಂಥ ಸಂಪಾದನೆ ( ಪ್ರಾಚೀನ ಕೃತಿಗಳ ಸಂಪಾದನೆ), ಮಕ್ಕಳ ಸಾಹಿತ್ಯ, ವಿಜ್ಞಾನ, ಸಾಹಿತ್ಯ (ಬೌತ, ರಸಾಯನ,ಗಣಿತ,ಪ್ರಾಣಿ,ಸಸ್ಯ, ಇಂಜಿನಿಯರಿಂಗ್, ವ್ಯೆದೈ, ಭೂ, ಖಗೋಳ, ಗೃಹ ವಿಜ್ಞಾನ, ಪರಿಸರ), ಮಾನವಿಕ (ಜಾನಪದ, ಇತಿಹಾಸ, ರಾಜಕೀಯ ಶಾಸ್ತ್ರ, ಸಮಾಜ ಶಾಸ್ತ್ರ, ಮಾನವ ಶಾಸ್ತ್ರ, ಮನಃಶಾಸ್ತ್ರ, ಭಾಷ ಶಾಸ್ತ್ರ, ಶಿಕ್ಷಣ, ವಾಣಿಜ್ಯ, ಕಾನೂನು, ಗ್ರಂಥ ಭಂಡಾರ ವಿಜ್ಞಾನ, ಸಮೂಹ ಸಂವಹನ, ಧಾರ್ಮಿಕ, ದಾರ್ಶನಿಕ,) ಸಂಶೋಧನೆ(ಕನ್ನಡ ಬಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಗಳಿಗೆ ಸಂಬಂಧಿಸಿದ ಸಂಶೋಧನೆ), ವೈಚಾರಿಕ/ಅಂಕಣ ಬರಹ.
ಅನುವಾದ 1(ಸೃಜನ/ ಸೃಜನೇತರ) ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿ. ಅನುವಾದ 2 (ಸೃಜನ/ ಸೃಜನೇತರ) ಕನ್ನಡದಿಂದ ಅನ್ಯ ಭಾಷೆಗೆ ಅನುವಾದಗೊಂಡ ಕೃತಿ. ಲೇಖಕರ ಮೊದಲ ಸ್ವತಂತ್ರ ಕೃತಿಗೆ ಬಹುಮಾನ:-2019ರಲ್ಲಿ ಪ್ರಕಟವಾದ ಹೊಸ ಬರಹಗಾರರ ಮೊದಲ ಸ್ವತಂತ್ರ ಕೃತಿಯೆಂದು ಖಾತರಿಪಡಿಸುವ ದೃಢೀಕರಣ ಪತ್ರ ಲಗತ್ತಿಸಬೇಕು. ಕನ್ನಡದಿಂದ ಇಂಗ್ಲಿಷಿಗೆ ಅನುವಾದ, ದಾಸ ಸಾಹಿತ್ಯಕ್ಕೆ ಸಂಬಂಧಿಸಿದ ಸೃಜನ/ ಸೃಜನೇತರ ಕೃತಿ.
ಬಹುಮಾನಕ್ಕಾಗಿ ಪರಿಗಣಿಸಲ್ಪಡದ ಕೃತಿಗಳೆಂದರೆ. ಮರುಮುದ್ರಣವಾದ ಪುಸ್ತಕಗಳಾಗಿರಬಾರದು, ಪಿಎಚ್‍ಡಿ ಪದವಿಗಾಗಿ ಸಿದ್ದಪಡಿಸಿದ ಸಂಶೋಧನಾ ಗ್ರಂಥಾಗಳಾಗಿರಬಾರದು, ಪಠ್ಯಪುಸ್ತಕಗಳಾಗಿರಬಾರದು, ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕೃತಿಯಾಗಿರಬಾರದು, ಈಗಾಗಲೇ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಒಟ್ಟಾರೆ ಮೂರು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳಾಗಿರಬಾರದು, ಒಂದು ಪ್ರಕಾರದಲ್ಲಿ ಒಂದು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳನ್ನು ಮತ್ತದೇ ಪ್ರಕಾರದಲ್ಲಿ ಮುಂದಿನ 3 ವರ್ಷದವರೆಗೆ ಪರಿಗಣಿಸುವುದಿಲ್ಲ, ಒಬ್ಬ ಲೇಖಕರಿಗೆ ಮೂರು ಬಾರಿ ಬೇರೆ ಬೇರೆ ಪ್ರಕಾರಗಳಲ್ಲಿ ಬಹುಮಾನ ಪಡೆಯುವ ಅವಕಾಶವಿದೆ.
ಈ ಅವಧಿಯಲ್ಲಿ ಪ್ರಕಟವಾದ ಪುಸ್ತಕಗಳ ತಲಾ 4 ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ರಿಜಿಸ್ಟರ್ಡ್ ಅಂಚೆ/ ಕೊರಿಯರ್ ಮೂಲಕ ಅಥವಾ ಖುದ್ದಾಗಿ 2020ರ ಸೆಪ್ಟೆಂಬರ್, 30 ರೊಳಗೆ ತಲುಪಿಸಬೇಕು. ಕಳುಹಿಸಲ್ಪಡುವ ಕೃತಿಯ ಮೇಲೆ ಯಾವ ಸಾಹಿತ್ಯ ಪ್ರಕಾರಕ್ಕೆ ಸೇರುತ್ತದೆ ಎನ್ನವುದನ್ನು ಸ್ಪಷ್ಟವಾಗಿ ಪುಸ್ತಕದ ಶೀರ್ಷಿಕೆ ಪುಟದಲ್ಲಿ ಬರೆದಿರಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಎನ್.ಕರಿಯಪ್ಪ ಅವರು ತಿಳಿಸಿದ್ದಾರೆ.