ಆಮೆ ಮಾರಾಟ ಮಾಡಲು ಯತ್ನಿಸುತ್ತಿದ್ದವನ ಬಂಧನ

25/08/2020

ಮಡಿಕೇರಿ,ಆ.25: ವಿನಾಶದ ಅಂಚಿನಲ್ಲಿರುವ ನಕ್ಷತ್ರ ಆಮೆ ಮತ್ತು ಅಪರೂಪದ ಸಾದಾ ಆಮೆಯನ್ನು ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಿರಾಜಪೇಟೆ ತಾಲೂಕಿನ ಕೋಟೋಳಿ ಗ್ರಾಮದ ಬೊಯಿಕೇರಿ ನಿವಾಸಿ ಅಬ್ದುಲ್ ಹಮೀದ್ ಎಂ.ಯು.(33) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿ ಅಬ್ದುಲ್ ಹಮೀದ್ ಎಂಬಾತ 1 ನಕ್ಷತ್ರ ಆಮೆ ಮತ್ತು 1 ಅಪರೂಪದ ಸಾದಾ ಆಮೆಯನ್ನು ಮಾರಾಟ ಮಾಡಲು ಮಡಿಕೇರಿ-ವಿರಾಜಪೇಟೆಯ ರಾಜ್ಯ ಹೆದ್ದಾರಿಯ ಎಂ. ಬಾಡಗ ಎಂಬ ಸ್ಥಳದಲ್ಲಿ ಬಸ್ ಶೆಲ್ಟರ್‍ನಲ್ಲಿ ಕಾದು ಕುಳಿತಿದ್ದ. ಈ ಸಂದರ್ಭ ಸ್ಥಳಕ್ಕೆ ದಾಳಿ ನಡೆಸಿದ ಜಿಲ್ಲಾ ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆರೋಪಿಯನ್ನು ಮಾಲು ಸಹಿತ ಬಂಧಿಸಿದ್ದಾರೆ. ಆರೋಪಿಯ ವಿರುದ್ದ 1972 ವನ್ಯ ಜೀವಿ ಸಂರಕ್ಷಣಾ ಕಾಯಿದೆಯ ಸೆಕ್ಷನ್ 9, 39, 48(ಎ), 50 ಹಾಗೂ 51ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, 2 ಆಮೆಗಳನ್ನು ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.
ಅರಣ್ಯ ಸಂಚಾರಿ ದಳದ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ಸವಿ, ಸಿಬ್ಬಂದಿಗಳಾದ ಸುಬ್ರಮಣ್ಯ, ರಾಜೇಶ್, ರಾಘವೇಂದ್ರ, ಯೋಗೇಶ್ ಮತ್ತು ವಾಹನ ಚಾಲಕ ಮೋಹನ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಅಪರೂಪದ ಆಮೆಗಳನ್ನು ಕುಶಾಲನಗರದ ಕಾವೇರಿ ನಿಸರ್ಗ ಧಾಮಕ್ಕೆ ಬಿಡಲಾಗುತ್ತದೆ ಎಂದು ಅರಣ್ಯ ಇಲಾಖೆಯ ಮಡಿಕೇರಿ ವಲಯದ ವನ್ಯ ಜೀವಿ ವಿಭಾಗದ ಆರ್‍ಎಫ್‍ಓ ಸುಮಿತ್ರ ಅವರು ಮಾಹಿತಿ ನೀಡಿದ್ದಾರೆ.