ಹೊರ ರಾಜ್ಯಗಳಿಗೆ ಬಸ್ ಸಂಚಾರ

26/08/2020

ಬೆಂಗಳೂರು ಆ.26 : ದೇಶಾದ್ಯಂತ ಲಾಕ್‍ಡೌನ್ ಸಡಿಲಗೊಂಡಿರುವುದರಿಂದ ಹೊರ ರಾಜ್ಯಗಳಿಗೆ ಬಸ್ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.
ಇತರೆ ರಾಜ್ಯಗಳಿಗೆ ಅದರಲ್ಲೂ ಮುಖ್ಯವಾಗಿ ಗೋವಾ, ಕೇರಳ, ತಮಿಳುನಾಡು, ಪಾಂಡಿಚೇರಿ, ತೆಲಂಗಾಣ ರಾಜ್ಯಗಳಿಗೆ ಪುನಃ ಬಸ್ ಸಂಚಾರ ಪ್ರಾರಂಭಿಸಲಾಗುವುದು ಎಂದು ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳು ಬಸ್ ಸಂಚಾರಕ್ಕೆ ಸಜ್ಜಾಗಿವೆ. ಆದರೆ ಪಕ್ಕದ ಈ ಎಲ್ಲಾ ರಾಜ್ಯಗಳಿಂದ ಇದಕ್ಕೆ ಹಸಿರು ನಿಶಾನೆ ದೊರೆಯಬೇಕಿದೆ. ನಂತರ ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್ ಸಂಚಾರ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.
ಪರಿಸ್ಥಿತಿ ಸುಧಾರಣೆಗೊಂಡ ನಂತರ ಮೊದಲ ಹಂತದಲ್ಲಿ ರಾಜ್ಯದಿಂದ ಆಂಧ್ರ ಪ್ರದೇಶಕ್ಕೆ ಸರ್ಕಾರಿ ಸಾರಿಗೆ ಬಸ್ ಸಂಚಾರ ಪ್ರಾರಂಭಿಸಲಾಗಿದೆ. ಸಾರ್ವಜನಿಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಗೋವಾ, ಕೇರಳ, ತಮಿಳುನಾಡು, ಪಾಂಡಿಚೇರಿ, ತೆಲಂಗಾಣ ರಾಜ್ಯಗಳಿಗೆ ಬಸ್ ಸಂಚಾರ ಪ್ರಾರಂಭಿಸುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುವಂತೆ ಕೋರಿ ನಮ್ಮ ಸಾರಿಗೆ ಇಲಾಖೆಯಿಂದ ಪತ್ರ ಬರೆಯಲಾಗಿದೆ ಎಂದಿದ್ದಾರೆ.