ಕಟ್ಟಡ ಕುಸಿದು 11 ಮಂದಿ ಸಾವು

August 26, 2020

ರಾಯಗಡ ಆ.26 : ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮಹದ್ ನಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿತ ದುರಂತದಲ್ಲಿ ಅವಶೇಷಗಳಡಿಯಲ್ಲಿ ಮತ್ತೆ 9 ಮೃತದೇಹಗಳು ಪತ್ತೆಯಾಗಿದ್ದು ಇದರೊಂದಿಗೆ ಸಾವಿನ ಸಂಖ್ಯೆ 11ಕ್ಕೇರಿದೆ.
ಬಹುಮಹಡಿ ಕಟ್ಟಡ ಕುಸಿದು ಬೀಳುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚಣೆ ನಡೆಸಿದ್ದು, ಗಾಯಗೊಂಡಿದ್ದ 18 ಮಂದಿಯನ್ನು ರಕ್ಷಣೆ ಮಾಡಿದ್ದರು. ಕಟ್ಟಡದ ಅವಶೇಷಗಳ ಅಡಿಯಲ್ಲಿ ಇನ್ನೂ 60ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿರುವ ಶಂಕೆಗಳು ವ್ಯಕ್ತವಾಗಿದ್ದು, ಇದರಲ್ಲಿ 10 ವರ್ಷದ ಮಗು ಕೂಡ ಇದೆ ಎಂದು ಹೇಳಲಾಗುತ್ತಿದೆ.
ಕಟ್ಟಡಲ್ಲಿ 45 ಫ್ಲ್ಯಾಟ್ ಗಳಿದ್ದು, ಅವಶೇಷಗಳಡಿ ಸಿಲುಕಿಕೊಂಡಿದ್ದ 25 ಮಂದಿನ್ನು ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಇದೀಗ ಎನ್’ಡಿಆರ್’ಎಫ್ ಪಡೆಗಳು ಕೂಡ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಘಟನೆ ಸಂಬಂಧ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚಿಸಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.