ಮನೆಹಳ್ಳಿ ಮಠದಲ್ಲಿ ವೀರಭದ್ರೇಶ್ವರ ಜಯಂತೋತ್ಸವ ಆಚರಣೆ

26/08/2020

ಮಡಿಕೇರಿ ಆ. 26 : ಕೊಡಗು ಜಿಲ್ಲಾ ವೀರಶೈವ ಜಂಗಮ ಅರ್ಚಕರ ಸಂಘ ಮತ್ತು ಪುರೋಹಿತರ ಸಂಘ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಮನೆಹಳ್ಳಿ ಮಠದಲ್ಲಿ ವೀರಭದ್ರೇಶ್ವರ ಜಯಂತೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.
ಕೊರೋನಾ ನಿವಾರಣೆ, ಪ್ರಾಕೃತಿ ವಿಕೋಪದಿಂದ ನಲುಗುತ್ತಿರುವ ಕೊಡಗು ಜಿಲ್ಲೆಯ ಸಂರಕ್ಷಣೆ ಹಾಗೂ ಸುಭಿಕ್ಷಾ ಕೊಡಗು ನಿರ್ಮಾಣಕ್ಕಾಗಿ ಸಂಕಲ್ಪ ಮತ್ತು ಲೋಕ ಕಲ್ಯಾಣ ಕಾರ್ಯಸಿದ್ದಿಗಾಗಿ ವೀರಭದ್ರಶ್ವರ ಜಯಂತೋತ್ಸವದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮನೆಹಳ್ಳಿ ಮಠದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾದೀಶ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ವೀರಶೈವ ಜಂಗಮ ಅರ್ಚಕರು, ಪುರೋಹಿತರು ವಿಶೇಷ ಪೂಜೆ ವಿಧಿ ವಿಧಾನ ನೆರವೇರಿಸಿದರು.
ಮಠದಲ್ಲಿ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವೀರಭದ್ರೇಶ್ವರ ಸ್ವಾಮಿ ಮನೆಹಳ್ಳಿ ಮಠದ ದೇವರ ಮೂರ್ತಿಯನ್ನು ಅಡ್ಡಪಲ್ಲಕಿಯಲ್ಲಿ ಉತ್ಸವ ನೆರವೇರಿಸಿದ ಬಳಿಕ ವಾಹನದಲ್ಲಿ ಕೂರಿಸಿ ದೇವರ ವಾದ್ಯಗೋಷ್ಠಿಯೊಂದಿಗೆ ಮಠದ ಮುಖ್ಯ ದ್ವಾರದ ವರೆಗೆ ಮೆರವಣಿಗೆ ನಡೆಸಲಾಯಿತು.
ನಂತರ ದೇವರ ಮೂರ್ತಿಯನ್ನು ಮಠದ ದೇವಾಸ್ಥಾನದಲ್ಲಿ ಇರಿಸಲಾಯಿತು. ದೇವರ ಉತ್ಸವ ಮತ್ತು ಮಠದ ದೇವಸ್ಥಾನದಲ್ಲಿ ನಡೆದ ಪೂಜ ವಿದಿವಿಧಾನ ಸಂದರ್ಭದಲ್ಲಿ ವೀರಗಾಸೆ ಕುಣಿತದೊಂದಿಗೆ ಲೋಕ ಕಲ್ಯಾಣ ಕಾರ್ಯಸಿದ್ದಿ ಗೆ ಮೆರಗು ನೀಡಲಾಯಿತು. ಭಕ್ತಾಧಿಗಳಿಗೆ ಅರ್ಚಕರು ಮಂತ್ರ ಸ್ಲೋಕಗಳನ್ನು ಸ್ಪಟಿಸುವ ಮೂಲಕ ಜಿಲ್ಲೆಗೆ ಯಾವುದೆ ವಿಘ್ನ ಬಾರದಂತೆ ಮಂತ್ರ ಘೋಷಿಸಿದರು.
ವೀರಭದ್ರೇಶ್ವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಮನೆಹಳ್ಳಿ ಮಠದೀಶ ಮಹಂತ ಶಿವಲಿಂಗ ಸ್ವಾಮೀಜಿ, ಕೊಡಗು ಜಿಲ್ಲಾ ವೀರಶೈವ ಅರ್ಚಕರ ಮತ್ತು ಪುರೋಹಿತ ಸಂಘದ ಕಾರ್ಯದರ್ಶಿ ಸೋಮಶೇಖರ ಶಾಸ್ತ್ರಿ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್, ತಾಲೋಕು ವೀರಶೈವ ಮಹಾಸಭಾ ಅಧ್ಯಕ್ಷ ಹಾಲಪ್ಪ, ಜಿಲ್ಲಾ ಮಹಾಸಭಾ ಉಪಾಧ್ಯಕ್ಷ ಜಿ.ಎಂ.ಕಾಂತರಾಜು ಮಹಾಸಭಾದ ಪ್ರಮುಖರಾದ ಜಯರಾಜ್, ಸರಳ ಬಸಪ್ಪ, ಡಿ.ಬಿ.ಸೋಮಪ್ಪ ಮುಂತಾದವರಿದ್ದರು.