ನೂರು ವರ್ಷದ ಇತಿಹಾಸ ಹೊಂದಿರುವ ಅಶ್ವತ್ಥಪುರದ ಶ್ರೀ ಸೀತಾರಾಮಚಂದ್ರ ದೇವಾಲಯ

August 26, 2020

ಶ್ರೀ ಸೀತಾರಾಮಚಂದ್ರ ದೇವಾಲಯವು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಅಶ್ವತ್ಥಪುರದಲ್ಲಿದೆ. ಈ ದೇವಾಲಯ ಒಂದು ನೂರು ವರ್ಷದಷ್ಟು ಇತಿಹಾಸವನ್ನು ಹೊಂದಿದೆ. ಶ್ರೀ ಶೃಂಗೇರಿ ಶಾರದ ಮಠದ ಪರಮ ಭಕ್ತರಾದ ದೇಶಸ್ಥ ಬ್ರಾಹ್ಮಣರು ಸೀತಾರಾಮಚಂದ್ರ ಮಂದಿರವನ್ನು ಅಧ್ಯಾತ್ಮಿಕ ಅರಿವು ಹಾಗೂ ಸಾಮಾಜಿಕ ಸಂಘಟನೆಗಾಗಿ ಹತ್ತೋಂಬತ್ತನೇ ಶತಮಾನದ ಆಧಿಭಾಗದಲ್ಲಿ ನಿರ್ಮಿಸಿದರು.ಶ್ರೀ ಬ್ರಹ್ಮಾಚೈತನ್ಯರ ಇಚ್ಚಾನುಸಾರ ಮಹಾರಾಜರ ಪರಮ ಶಿಷ್ಯರಾದ ಶ್ರೀ ಬ್ರಹ್ಮಾನಂದ ಗುರುಗಳವರು ಅಶ್ವತಪುರಕ್ಕೆ ಆಗಮಿಸಿ ಸೀತಾ ಲಕ್ಷ್ಮಣ ಸಹಿತ ಶ್ರೀ ರಾಮನ ಮೂರ್ತಿಯನ್ನು ರಾಕ್ಷಸನಾಮ ಸಂವತ್ಸರ ನಿಜ ವೈಶಾಖ ಶುದ್ಧ ಪಂಚಮಿಯ ದಿನ 1915ನೇ ಮೇ 19ರ ಬುಧವಾರದಂದು ಮಧ್ಯಾಹ್ನ ಹನ್ನೆರಡು ಗಂಟೆಯ ಅಭಿಜಿತ್ ಲಗ್ನ ಮುಹೂರ್ತದಲ್ಲಿ ಪ್ರತಿಷ್ಠಾಪಿಸಿದರು.

ವಾಸ್ತುಶಿಲ್ಪ
ದೇವಾಲಯವು ಪೂರ್ವಾಭಿಮುಖವಾಗಿದ್ದು ವಾಸ್ತುಶಿಲ್ಪದಲ್ಲಿ ಸರಳತೆಯನ್ನು ಹೊಂದಿದೆ. ಮುಖಮಂಟಪ ಮತ್ತು ಸಭಾಮಂಟಪಗಳನ್ನು ಹೊಂದಿದ್ದು, ಪಲ್ಲಕಿ ಉತ್ಸವಕ್ಕಾಗಿ ಪ್ರದಕ್ಷಿಣಪಥ ಹಾಗೂ ರಥೋತ್ಸವಕ್ಕಾಗಿ ಗುಡಿಯ ಹೊರಾಂಗಣದಲ್ಲಿ ರಥಪ್ರದಕ್ಷಿಣಪಥವಿದೆ. ದೇವಾಲಯದ ಹೊರಾಂಗಣದ ಬಲಭಾಗದಲ್ಲಿ ಮಹಾಗಣಪತಿಯ ಮಂದಿರ ಹಾಗೂ ಹಿಂಭಾಗದಲ್ಲಿ ವಿಶಾಲವಾದ ಕಲ್ಯಾಣ ಮಂಟಪ, ಅತಿಥಿಗೃಹವಿದೆ.ರಾಮ ಮಂದಿರದ ಎಡಭಾಗದಲ್ಲಿ ಶಂಕರ ಮಠದ ಕಟ್ಟಡವಿದೆ. ದೇವಾಲಯದ ಅನತಿ ದೂರದಲ್ಲಿ ಹನುಮ ಮಂದಿರ ಮತ್ತು ಗುರುಮಂದಿರಗಳನ್ನು ಸ್ಥಾಪಿಸಲಾಗಿದೆ.

ಉತ್ಸವಗಳು
ಶ್ರೀ ರಾಮ ನವಮಿಯು ದೇವಾಲಯದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವಾಗಿದ್ದು ಪ್ರತಿ ಚೈತ್ರ ಮಾಸದಲ್ಲಿ ಬಹಳ ವೈಭವದಿಂದ ಆಚರಿಸಲಾಗುತ್ತದೆ. ಶ್ರೀರಾಮ ನವಮಿ ಮಹೋತ್ಸವು ಹತ್ತು ದಿನಗಳ ಆಚಾರಣೆಯಾಗಿದ್ದು, ಪ್ರತಿವರ್ಷ ಚೈತ್ರ ಶುದ್ಧ ಪಾಡ್ಯದಿಂದ ಆರಂಭವಾಗಿ ಏಕಾದಶಿ ಪರ್ಯಂತ ನಡೆಯುತ್ತದೆ.ರಾಮೋತ್ಸವದ ಪ್ರತಿ ದಿನವು ನಸುಕಿನಲ್ಲಿ ಕಾಕಡರತಿ,ಪ್ರವಚನ,ಭಜನೆ,ಅನ್ನಸಂತರ್ಪಣೆ ಹಾಗೂ ರಾತ್ರಿ ಮನೋರಂಜನಾ ಕಾರ್ಯಕ್ರಮಗಳು ನಡೆಯುತ್ತವೆ. ವೈಶಾಖ ಮಾಸದ ಪಂಚಮಿಯಂದು ದೇವಾಲಯದ ಪ್ರತಿಷ್ಠಾಪನೋತ್ಸವವನ್ನು ನಡೆಸಲಾಗುವುದು. ಕಾರ್ತೀಕ ಮಾಸದ ಪ್ರತಿಪದೆಯಿಂದ ಅಮಾವಾಸ್ಯೆಯ ವರೆಗೆ ಒಂದು ತಿಂಗಳ ಕಾಲ ದೀಪೋತ್ಸವ ನಡೆಯುತ್ತದೆ. ದೇವಾಲಯದಲ್ಲಿ ವರ್ಷಕ್ಕೆ ನಾಲ್ಕು ಬಾರಿ ಎಂಟು ದಿನಗಳ ಅವಧಿಯ ಅಖಂಡ ಶ್ರೀರಾಮ ನಾಮ ಸಪ್ತಾಹವು ಅಹೋರಾತ್ರಿ ನಡೆಯುತ್ತದೆ.