ಎ.ಕೆ. ಸುಬ್ಬಯ್ಯ ಅಭಿಮಾನಿ ಬಳಗದಿಂದ ವೇಬಿನಾರ್ ಮೂಲಕ ಎ.ಕೆ. ಸುಬ್ಬಯ್ಯ ನುಡಿನಮನ ಕಾರ್ಯಕ್ರಮ

26/08/2020

ಪೊನ್ನಂಪೇಟೆ, ಆ.26: ರಾಜ್ಯದ ರಾಜಕಾರಣದಲ್ಲಿ ಅಮರರಾಗಿರುವ ಎ.ಕೆ. ಸುಬ್ಬಯ್ಯನವರು ತಮ್ಮ ರಾಜಕೀಯ ಭವಿಷ್ಯವನ್ನು ಬಲಿಕೊಟ್ಟು ಸಾರ್ವಜನಿಕ ಹಿತ ಕಾಪಾಡಲು ಶ್ರಮಿಸಿದ ಮಹಾನ್ ವ್ಯಕ್ತಿತ್ವದವರು. ಯಾರ ಹಂಗಿಗೂ ಒಳಗಾಗದೆ ಸ್ವತಂತ್ರ ಚಿಂತನೆಯೊಂದಿಗೆ ಸುದೀರ್ಘ ವರ್ಷಗಳ ಕಾಲ ಜನನಾಯಕರಾಗಿ ಬದುಕಿದ ಎ. ಕೆ.ಸುಬ್ಬಯ್ಯ ಅವರ ಮಾತಿನ ಮೌಲ್ಯ ಅವರ ನಿಧನದ ನಂತರ ಜನರಿಗೆ ಅರಿವಾಗುತ್ತಿದೆ ಎಂದು ಮಾಜಿ ಸ್ಪೀಕರ್ ಆಗಿರುವ ಶಾಸಕ ಕೆ.ಆರ್. ರಮೇಶ್ ಕುಮಾರ್ ಹೇಳಿದರು. 
ಆ. 27 ರಂದು ನಡೆಯಲಿರುವ ಎ.ಕೆ. ಸುಬ್ಬಯ್ಯ ಅವರ ಪ್ರಥಮ ಪುಣ್ಯಸ್ಮರಣಾ ದಿನದ ಅಂಗವಾಗಿ ‘ಎ.ಕೆ. ಸುಬ್ಬಯ್ಯ ಅಭಿಮಾನಿ ಬಳಗ’ದ ವತಿಯಿಂದ ಮಂಗಳವಾರ ಸಂಜೆ ‘ಮರೆಯಲಾಗದ ಆದರ್ಶ ಎ.ಕೆ. ಸುಬ್ಬಯ್ಯ ಅವರು ಇಲ್ಲವಾದ ಒಂದು ವರ್ಷದ ಸಂದರ್ಭದಲ್ಲಿ ಶ್ರದ್ಧಾಂಜಲಿ’ ಎಂಬ ಹೆಸರಿನಲ್ಲಿ ವೇಬಿನಾರ್ ಮೂಲಕ ನಡೆದ ರಾಜ್ಯಮಟ್ಟದ ‘ನುಡಿನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರೂ ತೆಗೆದುಕೊಳ್ಳದಿದ್ದ ರಿಸ್ಕ್ ಅನ್ನು  ಏಳುಬೀಳುಗಳ ನಡುವೆ ನಿಭಾಯಿಸುತ್ತಿದ್ದ ಸುಬ್ಬಯ್ಯ ಅವರು ಸದಾ ಸಮಾಜದ ಹಿತವನ್ನು ಬಯಸುತ್ತಿದ್ದರು. ಅವರಲ್ಲಿದ್ದ ವೈಚಾರಿಕ ಸ್ಪಷ್ಟತೆ ಅವರನ್ನು ಮತ್ತಷ್ಟು ತೀಕ್ಷ್ಣವನ್ನಾಗಿಸಿತು. ಸ್ವಾರ್ಥರಹಿತ ರಾಜಕಾರಣದ ಪ್ರತೀಕವಾಗಿದ್ದ ಸುಬ್ಬಯ್ಯನವರು ಸತ್ಯವನ್ನು ಬಹಿರಂಗವಾಗಿ ಹೇಳಲು ಯಾರಿಗೂ ಹೆದರುತ್ತಿರಲಿಲ್ಲ. ಈ ರೀತಿಯ ತೀರಾ ಅಪರೂಪದ ವ್ಯಕ್ತಿತ್ವ ಸುಬ್ಬಯ್ಯನವರ ನಂತರ ಯಾರಲ್ಲೂ ಕಾಣುತ್ತಿಲ್ಲ ಎಂದು ವಿಷಾದಿಸಿದರು.
ಇದೀಗ ದೇಶದಲ್ಲಿ ಜನಾಂದೋಲನ ನಿಂತುಹೋಗಿದೆ. ವಿದ್ಯಾರ್ಥಿ,  ಕಾರ್ಮಿಕ, ರೈತ ಚಳುವಳಿಯನ್ನು ಇತ್ತೀಚಿನ ಕೆಲ ಸಮಯಗಳಿಂದ ದೇಶದಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ.  ನೊಂದವರ ಮತ್ತು ದಮನಿತರ ಧ್ವನಿಯಾಗಬೇಕಾಗಿದ್ದ ಮಾಧ್ಯಮಗಳು ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿ ಒಡೆತನದಲ್ಲಿ ಸಿಲುಕಿ ನರಳುತ್ತಿದ್ದು, ಜನಸಾಮಾನ್ಯರ ಜನಾಭಿಪ್ರಾಯ ಸ್ವತಂತ್ರವಾಗಿ ಹೊರಬರುತ್ತಿಲ್ಲ. ಒಂದು ರೀತಿಯ ಬೌದ್ಧಿಕ ದಾರಿದ್ರ್ಯ ಕಾಡುತ್ತಿದೆ. ಈ ಸಂದರ್ಭದಲ್ಲಿ ಎ.ಕೆ. ಸುಬ್ಬಯ್ಯ ಅವರ ಅಗತ್ಯವಿತ್ತು ಎಂದು ಪ್ರತಿಪಾದಿಸಿದ ರಮೇಶ್ ಕುಮಾರ್ ಅವರು, ತಮಗೆ ಆದರ್ಶರಾಗಿದ್ದ ಸುಬ್ಬಯ್ಯನವರು ಮಾರ್ಗದರ್ಶಕರೂ ಆಗಿದ್ದರು.  1978 ರಲ್ಲಿ ಪ್ರಥಮ ಬಾರಿಗೆ ವಿಧಾನಸಭೆಯ ಮೂಲಕ ಶಾಸನಸಭೆಗೆ ಬಂದ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಮನೆ ಮಾತಾಗಿದ್ದ ಸುಬ್ಬಯ್ಯನವರ ಗಾಂಭೀರ್ಯದ ಮಾತುಗಳನ್ನು ಕೇಳಲೆಂದೇ ವಿಧಾನಪರಿಷತ್ತಿಗೆ ಹೋಗಿ ಕುಳಿತುಕೊಳ್ಳುತ್ತಿದ್ದೆ ಎಂದು ಅಂದಿನ ದಿನಗಳನ್ನು ರಮೇಶ್ ಕುಮಾರ್ ಅವರು ಮೆಲುಕು ಹಾಕಿದರು.
ಸುಬ್ಬಯ್ಯನವರ ಆದರ್ಶಗಳು ನೆನಪು ಮಾಡಿಕೊಳ್ಳುವುದೇ ಅವರಿಗೆ ನೀಡುವ ಬಹುದೊಡ್ಡ ಗೌರವವಾಗಿದೆ. ಸುಬ್ಬಯ್ಯನವರು ಶಾರೀರಿಕವಾಗಿ ಇಂದು ನಮ್ಮೊಂದಿಗಿಲ್ಲದಿದ್ದರೂ ಹಲವರಿಗೆ ಅವರು ಸದಾ ಸ್ಫೂರ್ತಿಯಾಗಿರುತ್ತಾರೆ ಎಂದು ರಮೇಶ್ ಕುಮಾರ್ ಅವರು ಇದೇ ಸಂದರ್ಭದಲ್ಲಿ ಹೇಳಿದರು. 
ಹೆಸರಾಂತ ಸಂಸ್ಕೃತಿ ಚಿಂತಕರಾದ ಡಾ. ರಹಮತ್ ತರೀಕೆರೆ ಅವರು ಮಾತನಾಡಿ,  ರಾಜಕೀಯ, ಚಳುವಳಿ, ಚಿಂತನೆ, ವಿಚಾರವಾದ ಮೊದಲಾದ ವ್ಯಕ್ತಿತ್ವವನ್ನು ಒಳಗೊಂಡಿದ್ದ ಎ.ಕೆ. ಸುಬ್ಬಯ್ಯ ಅವರು, ಬಹುಮುಖ ಪ್ರತಿಭೆ ಉಳ್ಳವರಾಗಿದ್ದರು. ಆಳವಾದ ಅಧ್ಯಯನ ಶೀಲತೆ ಮತ್ತು ಸ್ವತಂತ್ರ ಚಿಂತನೆಯ ಮೂಲಕ ಅವರಲ್ಲಿದ್ದ ಪ್ರಭುತ್ವದ ವಿರುದ್ಧದ ಪ್ರತಿರೋಧ ಆಯಾಮ ಅವರನ್ನು ಉತ್ತಮ ಲೇಖಕರನ್ನಾಗಿಸಿತು. ಕನ್ನಡ ವಿಚಾರ ಸಾಹಿತ್ಯದಲ್ಲಿ ವಿಶೇಷ ಸ್ಥಾನ ಪಡೆದಿದ್ದ ಅವರ ಹಲವಾರು ಲೇಖನಗಳು ಹೃದಯವಂತಿಕೆ,  ಮಮಕಾರ ಮತ್ತು ಪಕ್ವತೆಯಿಂದ ಕೂಡಿರುತ್ತಿತ್ತು. ಲೋಹಿಯಾ ಮತ್ತು ಶಾಂತವೇರಿ ಗೋಪಾಲಗೌಡರ ಸ್ಥಾನದಲ್ಲಿದ್ದ ಸುಬ್ಬಯ್ಯನವರ ವಿಚಾರಧಾರೆ ಕನ್ನಡಿಗರನ್ನು ಬೆರಗುಗೊಳಿಸುತ್ತಿತ್ತು. ಅವರ ಬರಹದಲ್ಲಿ ಮಾತಿನ ಗುಣವೂ ಇರುತ್ತಿತ್ತು ಎಂದರಲ್ಲದೆ,  ವಿಚಾರ ಸಾಹಿತ್ಯದಲ್ಲಿ ಸುಬ್ಬಯ್ಯನವರು ವಿಶೇಷ ಛಾಪು ಮೂಡಿಸಿದರು ಎಂದು ಹೇಳಿದರು. 
ಭೂ ಚಳುವಳಿಯ ಹೋರಾಟಗಾರರಾದ ನೂರ್  ಶ್ರೀಧರ್ ಅವರು ಮಾತನಾಡಿ, ತಮ್ಮನ್ನು ಅಜ್ಞಾತವಾಸದಿಂದ ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಸುಬ್ಬಯ್ಯನವರು ನಿರ್ವಹಿಸಿದ ಪಾತ್ರ ಮಹತ್ವದ್ದಾಗಿತ್ತು. ನಮ್ಮ  ಹೊಸ ಮಾದರಿಯ ಜನಾಂದೋಲನಕ್ಕೆ ಅವರು ಪ್ರೇರಕರಾಗಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಕ್ಸಲರ ಪುನರ್ವಸತಿ ಯೋಜನೆಗೆ ಸಮಗ್ರ ತಿದ್ದುಪಡಿ ತರುವಲ್ಲಿ ಗೌರಿ ಲಂಕೇಶ್ ಮತ್ತು ಎಚ್.ಎಸ್. ದೊರೆಸ್ವಾಮಿ ಅವರೊಂದಿಗೆ ಸುಬ್ಬಯ್ಯನವರ ಪಾತ್ರವೇ ಪ್ರಧಾನವಾಗಿತ್ತು ಎಂದು ಸ್ಮರಿಸಿಕೊಂಡರು. 
‘ಬುಲೆಟ್’ ಮತ್ತು ‘ಬ್ಯಾಲೆಟ್’ ಗಿಂತ ‘ಮೂಮೆಂಟ್’ ಉತ್ತಮ ಆಯ್ಕೆ ಮಾರ್ಗ ಎಂಬ ನಮ್ಮ ನಿರ್ಧಾರಕ್ಕೆ ಸುಬ್ಬಯ್ಯನವರು ಪೂರ್ಣ ಬೆಂಬಲ ನೀಡಿದ್ದರು. ಚುನಾವಣೆಯಲ್ಲಿ ವಿರೋಧಿಗಳನ್ನು ಸೋಲಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರವಾಗುವುದಿಲ್ಲ. ಬದಲಿಗೆ ಜನಾಂದೋಲನದ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸುವುದು ಅತಿ ಮುಖ್ಯ ಎಂಬುದು ಸುಬ್ಬಯ್ಯನವರ ಪ್ರಮುಖ ಆಶಯವಾಗಿತ್ತು ಎಂದು ಅಭಿಪ್ರಾಯಪಟ್ಟ ನೂರು ಶ್ರೀಧರ್, ದಿಡ್ಡಳ್ಳಿ ಹೋರಾಟವನ್ನು ರಾಜ್ಯಕ್ಕೆ ಪರಿಚಯಿಸಿದ ಸುಬ್ಬಯ್ಯನವರು ಪ್ರತಿದಿನ ಅಂದಿನ ಹೋರಾಟಕ್ಕೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ಸ್ಮರಿಸಿದರಲ್ಲದೆ, ಎ.ಕೆ. ಎಸ್. ಕುರಿತು ಉತ್ತಮವಾದ ಸಾಕ್ಷ್ಯಚಿತ್ರವೊಂದನ್ನು ಹೊರತರಬೇಕಾಗಿದೆ. ಹೋರಾಟ ಮತ್ತು ವೈಚಾರಿಕ ಪರಂಪರೆಯ ಹೋರಾಟಗಾರರಿಗೆ ಮತ್ತು  ಮುಂದಿನ ಪೀಳಿಗೆಗೆ ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಅಭಿಪ್ರಾಯಪಟ್ಟರು. 

ಹಿರಿಯ ವಕೀಲರಾದ, ಸುಬ್ಬಯ್ಯ ಅವರ ಪುತ್ರ ಎ.ಎಸ್. ಪೊನ್ನಣ್ಣ  ಮಾತನಾಡಿ, ತಂದೆಯವರಲ್ಲಿ ಅಸ್ಪಷ್ಟತೆ ಮತ್ತು ಗೊಂದಲವನ್ನು ನಾನು ಎಂದೂ ಕಾಣಲಿಲ್ಲ. ಸಮಯಪಾಲನೆಗೆ ವಿಶೇಷ ಆದ್ಯತೆ ನೀಡುತ್ತಿದ್ದ  ಅವರು ಜೀವನದುದ್ದಕ್ಕೂ ಅವರು ನಂಬಿದ ತತ್ವ ಮತ್ತು ಮೌಲ್ಯಗಳಿಗೆ ಕಿಂಚಿತ್ತೂ ಧಕ್ಕೆಯಾಗದಂತೆ ನೋಡಿಕೊಂಡಿದ್ದರು. ಅಲ್ಲದೆ ಅದಕ್ಕೆ ನ್ಯಾಯ ಒದಗಿಸುವಲ್ಲಿ ವಿಶೇಷ ಆಸಕ್ತಿ ವಹಿಸುತ್ತಿದ್ದರು ಎಂದು ಹೇಳಿದರು. ಸುಬ್ಬಯ್ಯ ಅವರ ಕೊನೆಯ ದಿನಗಳನ್ನು ಪುತ್ರನಾಗಿ ಅವರೊಂದಿಗೆ ಆಸ್ಪತ್ರೆಯಲ್ಲಿ ಕಳೆದ ಸಂದರ್ಭವನ್ನು ಭಾವುಕತೆಯಿಂದ ವಿವರಿಸಿದ ಪೊನ್ನಣ್ಣ, ನಮ್ಮ ದೃಷ್ಟಿಯಲ್ಲಿ ಸುಬ್ಬಯ್ಯನವರಂತಹ ವಿಶೇಷ ವ್ಯಕ್ತಿತ್ವ ಹೊಂದಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸುಬ್ಬಯ್ಯನವರ ಸ್ಥಾನವನ್ನು ಸಮರ್ಥವಾಗಿ ತುಂಬುತ್ತಿದ್ದಾರೆ ಎಂದು ತಿಳಿಸಿದರು. 
ಖ್ಯಾತ ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರು ಮಾತನಾಡಿ, ಆರಂಭದಿಂದಲೇ ಜಯಪ್ರಕಾಶ್ ನಾರಾಯಣರಿಂದ  ಪ್ರಭಾವಿತರಾಗಿದ್ದ ಸುಬ್ಬಯ್ಯನವರು ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಎಂದೂ ನಡೆದುಕೊಂಡವರಲ್ಲ. ಮಾತಿಗೂ ಕೃತಿಗೂ ಅಂತರವೇ ಇಲ್ಲದಂತೆ 85 ವರ್ಷಗಳ ಕಾಲ ಸಾರ್ಥಕ ಬದುಕು ಸಾಗಿಸಿದ ಸುಬ್ಬಯ್ಯನವರು, ತಮ್ಮ ಚೊಚ್ಚಲ ಪುಸ್ತಕದಲ್ಲಿ ರಾಷ್ಟ್ರಕ್ಕೆ ಮುಂದೆ ಎದುರಾಗಬಹುದಾದ ಅಪಾಯವನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ ಎಂದು ಹೇಳಿದರು. 
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಸಂಚಾಲಕರಾದ ಕೆ.ಎಲ್. ಅಶೋಕ್ ಅವರು ಮಾತನಾಡಿ, ವಿಕೇಂದ್ರೀಕರಣ ಅಭಿವೃದ್ಧಿಯ ಬಗ್ಗೆ ಸದಾ ಚಿಂತಿಸುತ್ತ ನಿಜರೂಪದ ಜನಪರ ಪರಿಸರವಾದಿಯಾಗಿದ್ದ ಸುಬ್ಬಯ್ಯನವರ ಬದುಕಿನಲ್ಲಿ ಸಾರ್ಥಕತೆಯಿತ್ತು. ಪಶ್ಚಾತಾಪ ಎಂಬುವುದು ಅವರ ಅನುಭವದಲ್ಲೇ ಇರಲಿಲ್ಲ. ಕೊನೆಯವರೆಗೂ ಆಶಾವಾದಿಗಳಾಗಿ ಬದುಕಿದ ಸುಬ್ಬಯ್ಯನವರು ತಮ್ಮ ವಯೋಸಹಜ ಅನಾರೋಗ್ಯದಿಂದ ಸಾವು ಸಮೀಪಿಸುತ್ತಿರುವುದನ್ನು ಮೊದಲೇ ಮನಗಂಡು ಇದಕ್ಕೆ ಮಾನಸಿಕವಾಗಿ ಸಿದ್ಧರಾದರು. ಈ ಮೂಲಕ ಸಾವಿನಲ್ಲೂ ಎದೆಗಾರಿಕೆ ಪ್ರದರ್ಶಿಸಿದರು  ಎಂದು ಹೇಳಿದರು.
2 ಗಂಟೆಗಳ ಕಾಲ ನಡೆದ ಈ ವೇಬಿನಾರ್ ‘ನುಡಿನಮನ’ ದಲ್ಲಿ ರಾಜ್ಯಾದ್ಯಂತ ನೂರಾರು ಜನರು ಪಾಲ್ಗೊಂಡಿದ್ದರು. ಫೇಸ್ಬುಕ್ ಮೂಲಕ ಮೂಡಿಬಂದ ಇದರ ನೇರಪ್ರಸಾರವನ್ನು ಏಕಕಾಲಕ್ಕೆ 4000ಕ್ಕೂ ಹೆಚ್ಚು ಜನ ವೀಕ್ಷಿಸಿದರು. 
ವಿ.ಪಿ. ಶಶಿಧರ್ ಅವರು ಸ್ವಾಗತಿಸಿದರು. ಡಾ.ವಾಸು ಅವರು ನಿರೂಪಿಸಿದರು. ವಕೀಲ ಕೆ.ಆರ್. ವಿದ್ಯಾಧರ್ ಅವರು ವಂದಿಸಿದರು.