ಕೊಡಗು ಜಿಲ್ಲಾಡಳಿತದಿಂದ ಟಿ.ಜವರೇಗೌಡರಿಗೆ ಆತ್ಮೀಯ ಬೀಳ್ಕೊಡುಗೆ

26/08/2020

ಮಡಿಕೇರಿ ಆ.26 : ಜಿಲ್ಲೆಯಲ್ಲಿ ಕಳೆದ 2 ವರ್ಷಗಳ ಕಾಲ ಉಪ ವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರಿಗೆ ಬುಧವಾರ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು. ಹಾಗೆಯೇ ಜಿ.ಪಂ.ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಭನ್ವರ್ ಸಿಂಗ್ ಮೀನಾ ಹಾಗೂ ಉಪ ವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಈಶ್ವರ್ ಕುಮಾರ್ ಕಂಡು ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ನಗರದ ಜಿ.ಪಂ ಭವನದಲ್ಲಿ ಟಿ.ಜವರೇಗೌಡ ಅವರಿಗೆ ಶಾಲು ಫಲ ತಾಂಬೂಲ ನೀಡಿ ಇದೇ ವೇಳೆ ಗೌರವಿಸಲಾಯಿತು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಟಿ.ಜವರೇಗೌಡ ಅವರು ಬಯಲು ಸೀಮೆ ಹಾಗೂ ಕೊಡಗು ಜಿಲ್ಲೆಯಲ್ಲಿ ಕೆಲಸ ಮಾಡುವುದು ವಿಭಿನ್ನ. ಜಿಲ್ಲಾಧಿಕಾರಿಯವರ ಸಲಹೆ, ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು. ನನ್ನ ಯಶಸ್ಸಿನ ಹಿಂದೆ ಜಿಲ್ಲಾಧಿಕಾರಿಯವರ ಪಾತ್ರ ಹೆಚ್ಚಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಅವರು ಎಲ್ಲಾ ಹಂತದ ಅಧಿಕಾರಿಗಳಿಂದ ವಿಶ್ವಾಸದಿಂದ ಕೆಲಸ ಮಾಡಿಸುತ್ತಿದ್ದರು. ಇದನ್ನು ಮೆಚ್ಚಲೇಬೇಕು ಎಂದು ಅವರು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವುದು ಚಿಕ್ಕ-ಚೊಕ್ಕ ಕುಟುಂಬವಿದ್ದಂತೆ. ಸಹೋದರತೆ, ಆತ್ಮೀಯತೆಯಿಂದ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬಹುದು. ಪ್ರಕೃತಿ ವಿಕೋಪ, ಕೋವಿಡ್-19, ಚುನಾವಣೆ ಹೀಗೆ ಎಲ್ಲಾ ಸಂದರ್ಭದಲ್ಲಿ ಅಧಿಕಾರಿಗಳು ಒಟ್ಟುಗೂಡಿ ಒಂದು ಮನೆಯ ಸದಸ್ಯರಂತೆ ಕರ್ತವ್ಯ ನಿರ್ವಹಿಸುತ್ತಿದ್ದೆವು ಎಂದು ಅವರು ಹೇಳಿದರು.
2018 ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ 683 ಕುಟುಂಬಗಳಿಗೆ ಮನೆ ಹಂಚಿಕೆ ಮಾಡಿದ್ದು ವಿಶೇಷ ಎಂದು ಅವರು ತಿಳಿಸಿದರು. ಅಲ್ಲದೆ ಆಗುವುದೆಲ್ಲಾ ಒಳ್ಳೆಯದಕ್ಕೆ ಆಗುತ್ತಿದೆ. ಆಗಲಿರುವುದು ಒಳ್ಳೆಯದೇ ಆಗಲಿದೆ ಎಂದು ಟಿ.ಜವರೇಗೌಡ ಅವರು ವರ್ಣಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಪಂ.ನೂತನ ಸಿಇಒ ಭನ್ವರ್ ಸಿಂಗ್ ಮೀನಾ ಅವರು ಬೆಳಗಾವಿ ಜಿಲ್ಲೆಯಲ್ಲಿ ಪ್ರೊಬೆಷನರಿ ಹಾಗೂ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ 10 ತಿಂಗಳ ಕಾಲ ಉಪ ವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಅವರು ತಿಳಿಸಿದರು.
ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಕಂಡು ಅವರು ಸಾರ್ವಜನಿಕ ಸೇವೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗಬೇಕಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಉಪ ವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ.ಜವರೇಗೌಡ ಅವರಿಗೆ 1 ವರ್ಷದ ಹಿಂದೆಯೇ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಬಡ್ತಿಯಾಗಿತ್ತು. ಆದರೆ ಜಿಲ್ಲೆಯಲ್ಲಿನ ಪ್ರಕೃತಿ ವಿಕೋಪ ಸೇರಿದಂತೆ ವಿವಿಧ ಕಾರ್ಯಗಳಿಗಾಗಿ ಮತ್ತು ಪುನರ್ವಸತಿ ವಿಭಾಗದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಹೇಳಿದರು.
ಕೊರೊನ ಸಂದರ್ಭ ಹೊರ ರಾಜ್ಯದ ಕಾರ್ಮಿಕರನ್ನು ಸ್ವಂತ ರಾಜ್ಯಗಳಿಗೆ ಕಳುಹಿಸಿಕೊಡುವಲ್ಲಿ ಬಹಳಷ್ಟು ಶ್ರಮಿಸಿದ್ದಾರೆ ಎಂದು ಅವರು ಹೇಳಿದರು.
ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಮನೆ ಹಂಚಿಕೆ ಮಾಡುವಲ್ಲಿ ಟಿ.ಜವರೇಗೌಡ ಅವರು ಹೆಚ್ಚಿನ ಶ್ರಮ ವಹಿಸಿದ್ದಾರೆ. ಯಾವುದೇ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶೇ.90 ರಷ್ಟು ಪರಿಹಾರ ಕಂಡುಹಿಡಿಯುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಜಿ.ಪಂ.ಸಿಇಒ ಮತ್ತು ಉಪ ವಿಭಾಗಾಧಿಕಾರಿ ಅವರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಸ್ಥಳೀಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಅವರು ಮಾತನಾಡಿ ಟಿ.ಜವರೇಗೌಡ ಅವರು ಎರಡು ವರ್ಷಗಳ ಕಾಲ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಿ ಒಳ್ಳೆಯ ಹೆಸರು ಪಡೆದಿದ್ದಾರೆ. ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಅಧಿಕಾರಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಎಂದು ಗುಣಗಾನ ಮಾಡಿದರು.
ಐಟಿಡಿಪಿ ಇಲಾಖಾಧಿಕಾರಿ ಶಿವಕುಮಾರ್ ಅವರು ಮಾತನಾಡಿ ಟಿ.ಜವರೇಗೌಡ ಅವರು ಎಲ್ಲರ ಜೊತೆ ಆತ್ಮೀಯತೆಯಿಂದ ಒಡನಾಟ ಹೊಂದಿದ್ದರು ಎಂದು ಅವರು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್ ಮಚ್ಚಾಡೋ ಅವರು ಮಾತನಾಡಿ, ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯು ಸಮಸ್ಯೆಗಳನ್ನು ಇತ್ಯರ್ಥ ಪಡಿಸುತ್ತಿದ್ದರು ಎಂದು ಅವರು ಹೇಳಿದರು. ಭೂದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್ ಅವರು ಮಾತನಾಡಿದರು
ಜಿ.ಪಂ ಉಪಕಾರ್ಯದರ್ಶಿ ಗುಡೂರು ಭೀಮಸೇನ ಅವರು ಮಾತನಾಡಿ, ತಾಳ್ಮೆ, ಸಹನೆ, ಸಮಯ ಪ್ರಜ್ಞೆಯನ್ನು ಟಿ.ಜವರೇಗೌಡ ಅವರಲ್ಲಿ ಕಾಣಬಹುದಿತ್ತು ಎಂದು ಅವರು ಹೇಳಿದರು.
ಸೋಮವಾರಪೇಟೆ ತಾ.ಪಂ ಇಒ ಸುನೀಲ್ ಕುಮಾರ್ ಅವರು ಮಾತನಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ನಿವೇಶನ, ಕಸವಿಲೇವಾರಿಗೆ ಜಾಗ ಕೊಡಿಸುವಲ್ಲಿ ಶ್ರಮಿಸಿದ್ದಾರೆ ಎಂದು ಅವರು ಕೊಂಡಾಡಿದರು. ತಾ.ಪಂ ಇಒ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.