ಕಾಡುಹಂದಿ ಬೇಟೆಗಾರನಿಂದ ಸಿಬ್ಬಂದಿ ಮೇಲೆ ದಾಳಿ : ಕಾಜೂರು ಗ್ರಾಮದಲ್ಲಿ ಘಟನೆ

26/08/2020

ಸೋಮವಾರಪೇಟೆ ಆ.26 : ಕಾಡುಹಂದಿ ಬೇಟೆಗಾರರನ್ನು ಬಂಧಿಸಲು ತೆರಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಆರೋಪಿ ಕತ್ತಿ ಬೀಸಿ, ಇಲಾಖೆಯ ಜೀಪನ್ನು ಹಾನಿಗೊಳಿಸಿರುವ ಘಟನೆ ಕಾಜೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಿ.ಜಿ.ವಸಂತ್ ಅಲಿಯಾಸ್ ರುದ್ರ ಬಂಧಿತ ಆರೋಪಿ. ಬೇಟೆ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಭೀಮಯ್ಯ ಅಲಿಯಾಸ್ ಮಣಿ, ಸುಬ್ರಮಣಿ ಅಲಿಯಾಸ್ ಕೂಸ ತಲೆಮರೆಸಿಕೊಂಡಿದ್ದಾರೆ.
ಕಾಜೂರು ಮೀಸಲು ಅರಣ್ಯದಲ್ಲಿ ಮೂವರು ಆರೋಪಿಗಳು ಕಾಡುಹಂದಿ ಬೇಟೆಯಾಡಿದ ಮಾಹಿತಿ ಪಡೆದ ಡಿ.ಆರ್.ಎಫ್.ಒ ಚಂದ್ರೇಶ್ ತಂಡ, ಮಂಗಳವಾರ ರಾತ್ರಿ 9 ಗಂಟೆಗೆ ಆರೋಪಿ ವಸಂತ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಸಾಂಬಾರು ಮಾಡಿದ ಮಾಂಸ ವಶಪಡಿಸಿಕೊಂಡು ವಸಂತ್‍ನನ್ನು ಬಂಧಿಸುವ ಸಂದರ್ಭ ಅರಣ್ಯ ರಕ್ಷಕ ಪ್ರಸಾದ್ ಮೇಲೆ ಕತ್ತಿ ಬೀಸಿದ್ದಾನೆ. ಪ್ರಸಾದ್ ತಪ್ಪಿಸಿಕೊಂಡಾಗ ಇಲಾಖೆಯ ಜೀಪ್‍ನ ಗ್ಲಾಸ್ ಒಡೆದು, ವಯರ್‍ಲೆಸ್ ಸಲಕರಣೆಯನ್ನು ಕಿತ್ತು ಎಸೆದಿದ್ದಾನೆ. ಕೂಡಲೆ ಕಾರ್ಯಪೃವೃತ್ತರಾದ ತಂಡ ಆರೋಪಿಯನ್ನು ಬಂಧಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಪಟ್ಟಣದ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಇನ್ನಿಬ್ಬರು ಆರೋಪಿಗಳ ವಿರುದ್ಧ ವನ್ಯಜೀವಿ ಕಾಯಿದೆ ಅನ್ವಯ ಪ್ರಕರಣ ದಾಖಲಾಗಿದೆ.