ದಾಖಲೆಗಳು ಸರಿಯಾಗಿದ್ದರೆ ನಾರಾಯಣ ಆಚಾರ್ ಪುತ್ರಿಯರಿಗೆ ಮರು ಚೆಕ್ ವಿತರಣೆ : ತಹಶೀಲ್ದಾರ್ ಮಹೇಶ್ ಸ್ಪಷ್ಟನೆ

ಮಡಿಕೇರಿ ಆ.26 : ತಲಕಾವೇರಿಯಲ್ಲಿ ಬೆಟ್ಟ ಕುಸಿದು ಮೃತಪಟ್ಟ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಕುಟುಂಬಕ್ಕೆ ಸರ್ಕಾರ ನೀಡಿರುವ ಪರಿಹಾರದ ಮೊತ್ತದ ಹಣ ಪುತ್ರಿಯರ ಕೈ ಸೇರಲು ಬದಲಾದ ಹೆಸರು ಅಡಚಣೆಯಾಗಿದೆ.
ಇಬ್ಬರು ಪುತ್ರಿಯರು ತಮಗೆ ದೊರೆತ ಚೆಕ್ ನ್ನು ಹೆಸರು ಬದಲಾದ ಕಾರಣಕ್ಕಾಗಿ ಹಿಂತಿರುಗಿಸಿದ್ದು, ಬ್ಯಾಂಕ್ ಪಾಸ್ ಪುಸ್ತಕದ ಆಧಾರದ ಮೇಲೆ ಅವರುಗಳು ನೀಡಿರುವ ದಾಖಲಾತಿಗಳನ್ನು ಪರಿಶೀಲಿಸಿ ಚೆಕ್ ಮರು ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಡಿಕೇರಿ ತಾಲ್ಲೂಕು ತಹಶೀಲ್ದಾರ್ ಮಹೇಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾರದಾ ಆಚಾರ್ ಹಾಗೂ ನಮಿತಾ ಆಚಾರ್ ಎಂಬ ಹೆಸರಿಲ್ಲೇ ತಲಾ ಎರಡೂವರೆ ಲಕ್ಷ ರೂಪಾಯಿಗಳ ಚೆಕ್ ನ್ನು ಆ.15 ರಂದು ಪುತ್ರಿಯರಿಗೆ ವಿತರಿಸಲಾಗಿತ್ತು. ಆದರೆ ಪ್ರಸ್ತುತ ತಮ್ಮ ಹೆಸರು ಬದಲಾಗಿದ್ದು, ಪಾಸ್ ಪುಸ್ತಕದ ಹೆಸರಿನ ಆಧಾರದಲ್ಲಿ ಚೆಕ್ ನೀಡುವಂತೆ ಮನವಿ ಮಾಡಿ ಈ ಹಿಂದೆ ನೀಡಲಾಗಿದ್ದ ಚೆಕ್ ಗಳನ್ನು ಅವರುಗಳು ಹಿಂದಿರುಗಿಸಿದ್ದಾರೆÉ ಎಂದು ಸ್ಪಷ್ಟಪಡಿಸಿದರು.
ಪಾಸ್ ಪುಸ್ತಕ ಮತ್ತು ಹೆಸರು ಬದಲಾಗಿರುವ ಬಗ್ಗೆ ಪುತ್ರಿಯರು ದಾಖಲೆಗಳನ್ನು ನೀಡಿದ್ದು, ಇವುಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ ಮರು ಚೆಕ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ದುರಂತದಲ್ಲಿ ಮೃತರಾದ ಸಹಾಯಕ ಅರ್ಚಕ ರವಿಕಿರಣ್ ಎಂಬುವವರ ಪರಿಹಾರÀದ ಚೆಕ್ ನ್ನು ಅವರ ತಂದೆ ರಾಮಕೃಷ್ಣ ಅವರಿಗೆ ಹಾಗೂ ನಾರಾಯಣ ಆಚಾರ್ ಅವರ ಸಹೋದರ ಆನಂದತೀರ್ಥರ ಪರಿಹಾರದ ಚೆಕ್ ನ್ನು ಸಹೋದರಿ ಸುಶೀಲ ಅವರಿಗೆ ನೀಡಲಾಗಿದೆ ಎಂದು ಮಹೇಶ್ ಮಾಹಿತಿ ನೀಡಿದರು.
::: ಬದಲಾದ ಹೆಸರು :::
ಶಾರದಾ ಆಚಾರ್ ಅವರು ಶೆನೋನ್ ಫರ್ನಾಂಡಿಸ್ ಹಾಗೂ ನಮಿತಾ ಆಚಾರ್ ಅವರು ನಮಿತಾ ನಜೇರತ್ ಎಂಬ ಹೆಸರಿಗೆ ಚೆಕ್ ನೀಡಬೇಕು ಎಂದು ಜಿಲ್ಲಾಡಳಿತದ ಬಳಿ ಮನವಿ ಮಾಡಿಕೊಂಡಿದ್ದಾರೆ. ಇವರಿಬ್ಬರೂ ಅಂತರ್ ಧರ್ಮೀಯ ವಿವಾಹವಾಗಿರುವುದು ಇಲ್ಲಿ ಗಮನಾರ್ಹ.