ಆಧ್ಯಾತ್ಮಿಕ ಮಾರ್ಗದಿಂದಲೇ ಆಧುನಿಕ ದುಷ್ಟ ಶಕ್ತಿಗಳ ನಿರ್ಮೂಲನೆ ಸಾಧ್ಯ : ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯ

27/08/2020

ಮಡಿಕೇರಿ ಆ. 27 : ಆಧ್ಯಾತ್ಮಿಕ ಮಾರ್ಗದಿಂದಲೇ ಆಧುನಿಕ ದುಷ್ಟ ಶಕ್ತಿಗಳ ನಿರ್ಮೂಲನೆ ಆಗಬೇಕಾಗಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶಾರಾದ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ಕೋಟೆಯೂರು ಗ್ರಾಮದ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಜಂಗಮ ಅರ್ಚಕರ ಸಂಘ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗೂ ವೀರಭದ್ರೇಶ್ವರ ದೇವಾಲಯ ಸಮಿತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವೀರಭದ್ರೇಶ್ವರ ಜಯಂತ್ಯುತ್ಸವ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಹಲವು ಅವತಾರಗಳಲ್ಲಿ ಭಗವಂತ ಕಾಣಿಸಿಕೊಂಡಿದ್ದಾನೆ. ಅದರಲ್ಲಿ ವೀರಭದ್ರ ದೇವರು ಒಂದು ಅವತರವಾಗಿದೆ. ದೇಶದಲ್ಲಿ ಇಂದು ಅನೇಕ ದುಷ್ಟಶಕ್ತಿಗಳ ಉಪಟಳ ಕಾಣುತ್ತಿವೆ. ಅವುಗಳಿಗೂ ಸಹ ಆಧ್ಯಾತ್ಮಿಕ ಶಕ್ತಿಗಳಿಂದಲೇ ಅಂತ್ಯ ಕಾಣಬೇಕಾಗಿದೆ ಎಂದರು.
ಜಯಂತ್ಯುತ್ಸವ ಅಂಗವಾಗಿ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು. ಪೂಜಾ ಕಾರ್ಯದಲ್ಲಿ ಗ್ರಾಮದ ಜನತೆ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಈ ಸಂದರ್ಭ ಜಿಲ್ಲಾ ದೇವಾಲಯದ ಆವರಣದಲ್ಲಿ ತೆಂಗಿನ ಸಸಿಗಳನ್ನು ನೆಡಲಾಯಿತು. ದೇವಾಲಯ ಸಮಿತಿ ವತಿಯಿಂದ ಸದಾಶಿವ ಶ್ವಾಮೀಜಿಗಳಿಗೆ ಗುರುವಂದನೆ ಸಲ್ಲಿಸಿದರು.
ಈ ಸಂಧರ್ಭ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರಿಯ ಸಂಘಟನಾ ಕಾರ್ಯದರ್ಶಿ ಎಸ್, ಮಹೇಶ್, ಪರಿಷತ್ತಿನ ಜಿಲ್ಲಾ ಖಜಾಂಚಿ ಡಿ.ಸಿ ಸೋಮಪ್ಪ, ಕಾರ್ಯದರ್ಶಿ ಜಯಾರಾಜ್ ಅರ್ಚಕರ ಸಂಘದ ಕಾರ್ಯದರ್ಶಿ ಸೋಮಶೇಖರ್ ಶಾಸ್ತ್ರಿ, ದೇವಾಲಯ ಸಮಿತಿ ಅಧ್ಯಕ್ಷ ಕೆ.ಡಿ. ಚಂದ್ರಪ್ಪ, ಕಾರ್ಯದರ್ಶಿ ಎ.ಪಿ. ಸಂಜಯ್, ಸದಸ್ಯರುಗಳಾದ ದಿಲೀಪ್, ಲೋಕೇಶ್, ಭರತ್, ಶಾಂತಮಲ್ಲಪ್ಪ, ಧರ್ಮಪ್ಪ ಮತ್ತು ದಿನೇಶ್ ಮತ್ತಿತರರು ಇದ್ದರು.
ಗೌಡಳ್ಳಿಯಲ್ಲಿ ಪೂಜೆ : ಗೌಡಳ್ಳಿ ವೀರಭದ್ರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಗ್ರಾಮಸ್ಥರಾದ ಸುನಿಲ್, ಪ್ರಸನ್ನ, ರಾಜಪ್ಪ, ಪ್ರಕಾಶ್, ಕುಶಾಲಪ್ಪ ಇದ್ದರು.