ಮಡಿಕೇರಿಯಲ್ಲಿ ಎಕೆಎಸ್ ಸ್ಮರಣೆ : ಸುಬ್ಬಯ್ಯ ಶೋಷಿತರ ಗಟ್ಟಿ ಧ್ವನಿಯಾಗಿದ್ದರು : ಚೆಕ್ಕೇರ ಸೋಮಯ್ಯ ಶ್ಲಾಘನೆ

27/08/2020

ಮಡಿಕೇರಿ ಆ.27 : ಶೋಷಿತರ ಮತ್ತು ದಮನಿತರ ಪರ ಗಟ್ಟಿ ಧ್ವನಿಯಾಗಿ ನಿರಂತರ ಹೋರಾಟಗಳಿಂದಲೇ ನ್ಯಾಯ ಒದಗಿಸುವ ಕಾರ್ಯವನ್ನು ಮಾಡುತ್ತಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಅವರನ್ನು ಕೇವಲ ಹೋರಾಟಗಳಿಗೆ ಮಾತ್ರ ಸೀಮಿತಗೊಳಿಸಲಾಯಿತು ಎಂದು ಸುಬ್ಬಯ್ಯ ಅವರ ಒಡನಾಡಿ ಹಿರಿಯರಾದ ಚೆಕ್ಕೇರ ಸೋಮಯ್ಯ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಎ.ಕೆ.ಸುಬ್ಬಯ್ಯ ಅಭಿಮಾನಿ ಬಳಗದ ವತಿಯಿಂದ ಮಡಿಕೇರಿಯ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಸುಬ್ಬಯ್ಯ ಅವರ ಮೊದಲ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜೀವಭಯವಿದ್ದರೂ ತನ್ನನ್ನು ನಂಬಿದವರಿಗಾಗಿ ಮುನ್ನುಗ್ಗಿ ಹೋರಾಟ ನಡೆಸುತ್ತಿದ್ದ ಸುಬ್ಬಯ್ಯ ಅವರ ತತ್ವ ಸಿದ್ಧಾಂತಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಆರಂಭಿಸುತ್ತಿರುವುದು ಶ್ಲಾಘನೀಯವೆಂದರು.
ರಾಜಕೀಯ ಪಕ್ಷಗಳಿಗೆ ಮತ್ತು ಆಳುವವರಿಗೆ ವಿರೋಧ ಪಕ್ಷ ಎಂದರೇನು, ಅದರ ಜವಾಬ್ದಾರಿ ಹೇಗಿರಬೇಕು ಎನ್ನುವುದನ್ನು ತೋರಿಸಿಕೊಟ್ಟ ಸುಬ್ಬಯ್ಯ ಅವರು ಅನೇಕ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಿ ಕೊಡಗಿನ ರಕ್ಷಣೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ಮಾಡಿದ ಹೋರಾಟದ ಫಲವನ್ನು ಇತರರು ಪಡೆದುಕೊಳ್ಳುತ್ತಿದ್ದರು ಎಂದು ಸೋಮಯ್ಯ ಹೇಳಿದರು.
ಮಾತುಗಾರಿಕೆಯಿಂದಲೇ ಆಕರ್ಷಿತರಾಗಿದ್ದ ಸುಬ್ಬಯ್ಯ ಅವರೊಂದಿಗೆ ನನ್ನ ಒಡನಾಟ ಸುಮಾರು 60 ವರ್ಷಗಳಷ್ಟು ಹಳೆಯದು ಎಂದು ನೆನಪಿಸಿಕೊಂಡರು. ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಗೆ ಸುಬ್ಬಯ್ಯ ಅವರ ಶ್ರಮವೇ ಕಾರಣವೆಂದು ಅಭಿಪ್ರಾಯಪಟ್ಟರು.
ವಿಚಾರವಾದಿ ಸುಳ್ಯದ ಹಿಮಕರ್ ಮಾತನಾಡಿ, ಜನಪರ ಕಾಳಜಿಯನ್ನು ಹೊಂದಿರುವ ಎ.ಕೆ.ಸುಬ್ಬಯ್ಯ ಅವರು ಸಮಾಜಿಕ ಕಳಕಳಿಯೊಂದಿಗೆ ಧೈರ್ಯದಿಂದ ಹೋರಾಟ ನಡೆಸುತ್ತಿದ್ದ ಅಪರೂಪದ ವ್ಯಕ್ತಿ ಎಂದು ಬಣ್ಣಿಸಿದರು.
ಸುಬ್ಬಯ್ಯ ಅವರ ಜಾತ್ಯತೀತ ನಿಲುವುಗಳು, ಸಮಾಜಮುಖಿ ಚಿಂತನೆಗಳು, ದಲಿತ, ಶೋಷಿತರ ಪರವಾದ ಹೋರಾಟಗಳು ಮುಂದಿನ ಸಮಾಜಕ್ಕೆ ದಾರಿ ದೀಪವಾಗಬೇಕಿದೆ ಎಂದರು.
ಜನಪರ ಹೋರಾಟಗಾರ, ಚಿಂತಕ ಕಂದಕಲ್ ಶ್ರೀನಿವಾಸ್ ಮಾತನಾಡಿ, ಸುಬ್ಬಯ್ಯ ಅವರು ದೈಹಿಕವಾಗಿ ನಮ್ಮ ಮುಂದೆ ಇಲ್ಲದಿದ್ದರೂ ಅವರ ಜನಪರ ಚಿಂತನೆಗಳು ಇಂದಿಗೂ ಪ್ರಸ್ತುತ. ಪ್ರಜಾತಂತ್ರ ವ್ಯವಸ್ಥೆ ಮತ್ತು ಕಾನೂನಿನ ಚೌಕಟ್ಟಿನಡಿ ಮಾನವ ಪ್ರೇಮ, ಸಮಾನತೆಗಾಗಿ ನಡೆಸಿದ ಹೋರಾಟ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದರು.
ದಿಡ್ಡಳ್ಳಿ ಹೋರಾಟಗಾರ್ತಿ ಅನಿತ ಮಾತನಾಡಿ, ದಿಡ್ಡಳ್ಳಿ ಹೋರಾಟದ ಸಂದರ್ಭ ಅನೇಕ ಮಂದಿ ಬೀದಿ ಪಾಲಾಗಿದ್ದರು, ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಬಂದ ಸುಬ್ಬಯ್ಯ ಅವರ ಹೋರಾಟದ ಫಲವಾಗಿ ಇಂದು ನೆಲೆ ದೊರೆತ್ತಿದೆ ಎಂದರು. ಜಾತಿಯ ತಾರತಮ್ಯವಿಲ್ಲದೆ ಬುಡಕಟ್ಟು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದ ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಸುಬ್ಬಯ್ಯ ಅವರು ಇಂದು ಇದ್ದಿದ್ದರೆ ಮತ್ತಷ್ಟು ಆದಿವಾಸಿಗಳಿಗೆ ನಿವೇಶನ ದೊರೆಯುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಎ.ಕೆ.ಸುಬ್ಬಯ್ಯ ಅಭಿಮಾನಿ ಬಳಗದ ಪ್ರಮುಖ ವಿ.ಪಿ.ಶಶಿಧರ್ ಅವರು ಎಕೆಎಸ್ ಒಂದು ಜಾತಿಗೆ ಸೀಮಿತವಾಗಿರದ ವ್ಯಕ್ತಿಯಾಗಿದ್ದರು, ಅಲ್ಲದೆ ತುಳಿತಕ್ಕೊಳಗಾದವರ ಶಕ್ತಿಯಾಗಿದ್ದರು ಎಂದರು. ಅವರ ಜೀವನ ಮುಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದು, ಅಪ್ಪಟ್ಟ ಮನುಷ್ಯ ಪ್ರೀತಿಯನ್ನು ಹೊಂದಿರುವ ವ್ಯಕ್ತಿತ್ವ ಅವರದ್ದು ಎಂದು ಬಣ್ಣಿಸಿದರು.
ಸುಬ್ಬಯ್ಯ ಅವರ ಕನಸನ್ನು ಸಾಕಾರಗೊಳಿಸಿದಾಗ ಮಾತ್ರ ಅವರಿಗೆ ನೈಜ ಶ್ರದ್ಧಾಂಜಲಿ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟ ಶಶಿಧರ್ ‘ಎ.ಕೆ.ಸುಬ್ಬಯ್ಯ ಪ್ರತಿಷ್ಠಾನ’ವನ್ನು ಅಸ್ತಿತ್ವಕ್ಕೆ ತರುತ್ತಿದ್ದು, ಅದರ ಮೂಲಕ ವರ್ಷಂಪ್ರತಿ ಸ್ಮರಣೆ ಕಾರ್ಯಕ್ರಮವನ್ನು ರೂಪಿಸುವುದಾಗಿ ತಿಳಿಸಿದರು.
ಸಭಾ ಕಾರ್ಯಕ್ರಮದ ನಂತರ ವಿಚಾರವಾದಿ ಡಾ.ಶಿವಸುಂದರ ಅವರಿಂದ ‘ಪ್ರಸಕ್ತ ಭಾರತದ ಪ್ರಜಾಸತ್ತೆಯ ಸವಾಲುಗಳು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಿತು.
ಕೋಮು ಸೌಹಾರ್ದ ವೇದಿಕೆಯ ಪ್ರಮುಖರಾದ ಕೆ.ಎನ್.ಅಶೋಕ್, ಹಫೀಸ್ ಖಾನ್, ಸಮಾಜಿಕ ಹೋರಾಟಗಾರ ಡಿ.ನಿರ್ವಾಣಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್, ರಾಜ್ಯ ಸದಸ್ಯ ಅಮೀನ್ ಮೊಹಿಸಿನ್ ಮತ್ತಿತರ ಪ್ರಗತಿಪರ ಚಿಂತಕರು, ಹೋರಾಟಗಾರರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಜಿ.ಪಂ ಮಾಜಿ ಅಧ್ಯಕ್ಷರಾದ ದೀರ್ಘಕೇಶಿ ಶಿವಣ್ಣ ಸ್ವಾಗತಿಸಿ, ಅಭಿಮಾನಿ ಬಳಗದ ತೆನ್ನಿರಾ ಮೈನಾ ನಿರೂಪಿಸಿದರು, ಮನು ಶೆಣೈ ವಂದಿಸಿದರು.