ಜಿಲ್ಲಾ ಮಟ್ಟದ ಕಂದಾಯಾಧಿಕಾರಿಗಳ ಸಭೆ : ನಿವೇಶನ ನೀಡುವಿಕೆಗೆ ಅಗತ್ಯ ಕ್ರಮ ವಹಿಸಲು ಜಿಲ್ಲಾಧಿಕಾರಿ ಸೂಚನೆ

27/08/2020

ಮಡಿಕೇರಿ ಆ.27 : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಕಂದಾಯಾಧಿಕಾರಿಗಳ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಅವರು, ನಿವೇಶನ, ಕಸ ವಿಲೇವಾರಿ, ಸ್ಮಶಾನ ಇತ್ಯಾದಿ ಅಗತ್ಯತೆಗಳ ಸಂಬಂಧ ಶೀಘ್ರವೇ ಸರ್ವೇ ಕಾರ್ಯ ಮುಗಿಸಿ ಸಂಬಂಧಪಟ್ಟ ಇಲಾಖೆಗಳಿಗೆ ನಿವೇಶನ ನೀಡುವಿಕೆಗೆ ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದಾಗಿ ಮನೆಗಳಿಗೆ ನೀರು ತುಂಬಿ ಗೃಹೋಪಯೋಗಿ ಸಲಕರಣೆಗಳು ಹಾನಿಯಾಗಿದ್ದಲ್ಲಿ ಅದರ ನಿರ್ವಹಣೆಗಾಗಿ ಸರ್ಕಾರದ ನಿಯಮಾನುಸಾರ 10 ಸಾವಿರ ರೂ.ಗಳನ್ನು ಫಲಾನುಭವಿಗಳಿಗೆ ತಲುಪಿಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು. ಅಲ್ಲದೇ ಜಾನುವಾರುಗಳು ಸಹ ಪ್ರಕೃತಿ ವಿಕೋಪದಿಂದಾಗಿ ಸಾವನ್ನಪ್ಪಿದ್ದು ನಿಯಮಾನುಸಾರ ಪರಿಹಾರವನ್ನು ಸಂಬಂಧಪಟ್ಟವರಿಗೆ ನೀಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚನೆ ನೀಡಿದರು.
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಅರುಂಧತಿ ಅವರು ಮಾತನಾಡಿ ಅಂಗನವಾಡಿಗಳ ನಿರ್ಮಾಣಕ್ಕೆ ನಿವೇಶನಗಳ ಅಗತ್ಯವಿದೆ. ಕೆಲವು ನಿವೇಶನಗಳು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸೂಕ್ತವಾಗಿಲ್ಲ ಎಂದು ವರದಿ ನೀಡಲಾಗಿದೆ. ಈ ಸಂಬಂಧ ಬದಲಿ ಜಾಗ ಗುರುತಿಸುವಿಕೆಯ ಕಾರ್ಯವಾಗಬೇಕು ಎಂದು ಅವರು ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಯಾವ ಹೋಬಳಿಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನಿವೇಶದ ಅಗತ್ಯವಿದೆಯೋ ಅಂತಹ ಗ್ರಾ.ಪಂನಿಂದ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು. ಅಲ್ಲದೆ ಅಂಗನವಾಡಿಗಳ ನಿರ್ಮಾಣ ಸಂಬಂಧ ಶೀಘ್ರವೆ ಸರ್ವೇ ಕಾರ್ಯ ಮುಗಿಸಬೇಕು ಎಂದು ಸಂಬಂಧಪಟ್ಟ ಕಂದಾಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ಅಲ್ಪ ಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ನಿಂಗರಾಜಪ್ಪ ಅವರು ಮಾತನಾಡಿ, ಹಿಂದುಳಿದ ವರ್ಗಗಗಳ ಇಲಾಖೆಯ 4 ವಸತಿ ನಿಲಯಗಳ ನಿರ್ಮಾಣಕ್ಕಾಗಿ ನಿವೇಶನ ಬೇಕಿದೆ. ಮಡಿಕೇರಿಯಲ್ಲಿ 3 ಮತ್ತು ಕುಶಾಲನಗರದಲ್ಲಿ 1 ಹಾಸ್ಟೆಲ್ ನಿರ್ಮಾಣ ಮಾಡಲು ನಿವೇಶನದ ಅಗತ್ಯತೆ ಇದೆ ಎಂದು ಅವರು ಹೇಳಿದರು.
ಈ ಸಂಬಂಧ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಹಾಸ್ಟೆಲ್ ನಿರ್ಮಾಣಕ್ಕಾಗಿ ಲಭ್ಯವಿರುವ ನಿವೇಶನದ ಬಗ್ಗೆ ಮಾಹಿತಿ ಪಡೆದರು. ಅಲ್ಲದೇ ಈ ನಿವೇಶನಗಳಿಗೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಯವರು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಅಲ್ಲದೆ ಕಸ ವಿಲೇವಾರಿ ಘಟಕಗಳ ನಿರ್ಮಾಣ ಸಂಬಂಧ ಮಾತನಾಡಿದ ಜಿಲ್ಲಾಧಿಕಾರಿ ಅವರು ಜಿಲ್ಲೆಯ 104 ಗ್ರಾ.ಪಂಗಳಿಗೆ ಘನ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣ ಸಂಬಂಧ ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ರಾಜ್ಯದಲ್ಲಿಯೇ ಜಿಲ್ಲೆಯ ಎಲ್ಲಾ ಗ್ರಾ.ಪಂಗಳಲ್ಲಿಯೂ ಘನ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣ ಸಂಬಂಧ ಆಡಳಿತಾತ್ಮಕ ಅನುಮೋದನೆ ದೊರೆತ ಜಿಲ್ಲೆ ಕೊಡಗು ಆಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಕಸ ವಿಲೇವಾರಿ ಘಟಕಗಳ ನಿರ್ಮಾಣ ಸಂಬಂಧ ಅಗತ್ಯ ನಿವೇಶನಗಳನ್ನು ನೀಡುವ ಕಾರ್ಯವಾಗಬೇಕು ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ಹೇಳಿದರು.
ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಶಿವಕುಮಾರ್ ಅವರು ಮಾತನಾಡಿ, ತಿತಿಮತಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಆದಿವಾಸಿ ಭವನ ನಿರ್ಮಾಣ ಸಂಬಂಧ ಸೂಕ್ತ ನಿವೇಶನದ ಅಗತ್ಯತೆ ಇದೆ ಎಂದು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿವೇಶನವನ್ನು ನೀಡುವಂತೆ ಸೂಚಿಸಿದರು. ಅಲ್ಲದೆ ಆದಿವಾಸಿಗಳ ಹಕ್ಕು ಪತ್ರ ವಿತರಣೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡುವಂತೆ ಅವರು ಸೂಚಿಸಿದರು.
ರೈತರಿಂದ ಬೆಳೆ ಸಮೀಕ್ಷೆ ಕಾರ್ಯವು ರಾಜ್ಯಾದ್ಯಂತ ನಡೆಯುತ್ತಿದ್ದು, ಮುಂದಿನ ಒಂದು ವಾರದ ಒಳಗಾಗಿ ಬೆಳೆ ಸಮೀಕ್ಷೆಯಲ್ಲಿ ಪ್ರಗತಿ ಸಾಧಿಸಿ. ಈ ಸಂಬಂಧ ಅಗತ್ಯ ತಯಾರಿಗಳೊಂದಿಗೆ ಕಾರ್ಯನಿರ್ವಹಿಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿನ ಹೋಂಸ್ಟೇಗಳ ಸಂಬಂಧ ಮಾಹಿತಿ ನೀಡಿದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಅವರು ಜಿಲ್ಲೆಯಲ್ಲಿ 844 ಅಧಿಕೃತ ಹೋಂಸ್ಟೇಗಳಿದ್ದು, 350 ಅನಧಿಕೃತ ಹೋಂಸ್ಟೇಗಳಿದೆ. ಅಲ್ಲದೇ ಅನಧಿಕೃತ ಹೋಂಸ್ಟೇಗಳಿಗೆ ನಿಯಮಾನುಸಾರ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಅವರು ಮುಂದಿನ ಸಭೆಯಲ್ಲಿ ಹೋಬಳಿವಾರು ಹೋಂಸ್ಟೇ ವಿವರವನ್ನು ಸಮರ್ಪಕ ರೀತಿಯಲ್ಲಿ ಸಲ್ಲಿಸುವಂತೆ ಸೂಚಿಸಿದರು.
ಹೋಂಸ್ಟೇಗಳನ್ನು ನೋಂದಾವಣಿ ಮಾಡುವ ಸಂಬಂಧ ಅರ್ಜಿ ಸಲ್ಲಿಸಿದ ಹೋಂಸ್ಟೇಗಳ ಸ್ಥಳ ಪರಿಶೀಲನೆ ಮಾಡಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಿಗೆ ನೇರವಾಗಿ ವರದಿಯನ್ನು ಸಲ್ಲಿಸುವಂತೆ ಉಪ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು
ಅಲ್ಲದೇ ತಹಶೀಲ್ದಾರರು ಮತ್ತು ಕಂದಾಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ನಿವೇಶನ, ಕಸ ವಿಲೇವಾರಿ, ಸ್ಮಶಾನ ಇತ್ಯಾದಿ ಅಗತ್ಯ ವಿಚರಗಳಿಗೆ ಸಂಬಂಧಿಸಿದಂತೆ ಸೂಕ್ತ ಮಾಹಿತಿಯನ್ನು ನೀಡಬೇಕು. ಯಾವುದೇ ಕಾರಣಕ್ಕೂ ಸಹ ತಡ ಮಾಡದೆ ನಿಯಮಾನುಸಾರ ಕಡತಗಳ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ತಹಶೀಲ್ದಾರರು, ತಾ.ಪಂ ಇಒಗಳು, ಕಂದಾಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಇತರರು ಇದ್ದರು.