ಹುಲಿ ಉಗುರಿಗಾಗಿ ಕಲ್ಲಹಳ್ಳ ಅರಣ್ಯದಲ್ಲಿ ಹುಲಿ ಬೇಟೆ : ಓರ್ವ ಆರೋಪಿಯ ಬಂಧನ : ಮೂವರಿಗಾಗಿ ಕಾರ್ಯಾಚರಣೆ
ಮಡಿಕೇರಿ,ಆ.27: ಕೊಡಗು-ಹುಣಸೂರು ಅರಣ್ಯ ಗಡಿ ಭಾಗದಲ್ಲಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನದ ಕಲ್ಲಹಳ್ಳ ಎಂಬ ಅರಣ್ಯದಲ್ಲಿ ರಾಷ್ಟ್ರೀಯ ಪ್ರಾಣಿ ಹುಲಿಯೊಂದನ್ನು ಬೇಟೆಯಾಡಿ ಕೊಲ್ಲಲಾಗಿದೆ. ಮಾತ್ರವಲ್ಲದೇ ಬೇಟೆಗಾರರು ಹುಲಿಯ ಉಗುರಿಗಾಗಿ ಅದರ ಕಾಲುಗಳನ್ನೇ ಕತ್ತರಿಸಿ ಕೊಂಡೊಯ್ಡ ಅಮಾನವೀಯ ಘಟನೆ ನಡೆದಿದೆ. ಈ ಕೃತ್ಯದಿಂದಾಗಿ ಬಾಳೆಲೆ ಗ್ರಾಮಕ್ಕೆ ಕಪ್ಪು ಚುಕ್ಕೆಗೆ ತಗುಲಿದಂತಾಗಿದ್ದು, ಆರೋಪಿಗಳ ವಿರುದ್ದ ಗ್ರಾಮಸ್ಥರೇ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ತಲೆ ಮರೆಸಿಕೊಂಡ ಇತರ 3 ಮಂದಿಗಾಗಿ ಪೊಲೀಸರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಘಟನೆ ಹಿನ್ನಲೆ:
ಮಂಗಳವಾರ ಸಂಜೆ ವೇಳೆ ಕಲ್ಲಹಳ್ಳ ಅರಣ್ಯ ವ್ಯಾಪ್ತಿಯಲ್ಲಿ ಸುಮಾರು 8 ವರ್ಷ ಪ್ರಾಯದ ಹುಲಿಯನ್ನು ರಾತ್ರಿ ವೇಳೆ ಗುಂಡು ಹೊಡೆದು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿತ್ತು. ಮಾತ್ರವಲ್ಲದೇ ಹುಲಿಯ ಮೃತದೇಹವನ್ನು ಪರಿಶೀಲಿಸಿದ ಸಂದರ್ಭ ಹುಲಿಯ ಉಗುರಿಗಾಗಿ ಅದರ ನಾಲ್ಕು ಕಾಲುಗಳನ್ನೇ ಕತ್ತರಿಸಿ ಕೊಂಡೊಯ್ದಿರುವುದು ಪತ್ತೆಯಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಇದನ್ನು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದರು. ಈ ಹಿನ್ನಲೆಯಲ್ಲಿ ಬಂಡೀಪುರದಿಂದ ಕರೆತರಲಾದ ಶ್ವಾನಪಡೆಯ “ರಾಣಾ” ಎಂಬ ಅರಣ್ಯ ಇಲಾಖೆಯ ಶ್ವಾನದ ಸಹಾಯದಿಂದ ಆರೋಪಿಗಳ ಸುಳಿವು ಕಲೆ ಹಾಕಲು ಪ್ರಯತ್ನಿಸಲಾಯಿತು.
ಈ ಸಂದರ್ಭ ಅರಣ್ಯದ ಅಂಚಿನಲ್ಲಿರುವ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಸಂತೋಷ್ ಎಂಬಾತನ ಮನೆಯೂ ಇದ್ದು, ರಾಣಾ ಮೊದಲು ಈ ಮನೆಗೆ ತೆರಳಿತ್ತು. ಸಂಶಯಗೊಂಡ ಅರಣ್ಯ ಸಿಬ್ಬಂದಿಗಳು ಮನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ಸಂದರ್ಭ 1.5 ಕೆ.ಜಿ. ಜಿಂಕೆ ಮಾಂಸ ಇರುವುದು ಕೂಡ ಕಂಡು ಬಂದಿದೆ. ತಕ್ಷಣವೇ ಆತನನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದ್ದರು. ಆರೋಪಿಯನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ ಸಂದರ್ಭ ಹುಲಿ ಬೇಟೆ ಪ್ರಕರಣದಲ್ಲಿ ಒಟ್ಟು 4 ಮಂದಿ ಪಾಲ್ಗೊಂಡಿರುವುದು ಬಯಲಾಗಿದೆ. ಬಳಿಕ ಇತರ ಮೂವರು ಆರೋಪಿಗಳಾದ ಹೆಚ್. ರಂಜು, ಕೆ. ಶಶಿ ಹಾಗೂ ಕೆ. ಶರಣು ಅವರುಗಳ ಮನೆಗಳಿಗೆ ತೆರಳಿದ ರಾಣಾ ಅವರ ಮನೆಯಲ್ಲಿ ಬಚ್ಚಿಟ್ಟಿದ್ದ ಹುಲಿಯ 4 ಕಾಲುಗಳು, ಬಂದೂಕಿನ ಕಾಡತೂಸು(ಗುಂಡುಗಳು)ಗಳನ್ನೂ ಕೂಡ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳು ತಲೆ ಮರೆಸಿಕೊಂಡು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರ ಸಹಾಯದಿಂದ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಅರಣ್ಯ ಇಲಾಖೆಯ ಶ್ವಾನ “ರಾಣಾ”ನ ಚಾಣಕ್ಷತೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹುಲಿ ಕೊಂದ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಶಿಕ್ಷಿಸುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ರಾಜ್ಯ ವನ್ಯಜೀವಿ ವಿಭಾಗದ ಪ್ರದಾನ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ ಅಜಯ್ ಮಿಶ್ರಾ, ಪ್ರಾಜೆಕ್ಟ್ ಟೈಗರ್ ಎಸಿಸಿಎಫ್ ಜಗತ್ ರಾಮ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಸೇರಿದಂತೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು, ಆರ್‍ಆರ್‍ಟಿ ತಂಡದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.


