ಮೃತ ಕೋವಿಡ್ ಸೋಂಕಿತನ ಅಂತ್ಯ ಸಂಸ್ಕಾರಕ್ಕೆ ಆಕ್ಷೇಪ : ಮಡಿಕೇರಿ ಪೊಲೀಸರ ಮಧ್ಯಸ್ಥಿಕೆ ಯಶಸ್ವಿ

27/08/2020

ಮಡಿಕೇರಿ ಆ.27 : ನಗರದ ಕೈಗಾರಿಕಾ ತರಬೇತಿ ಕೇಂದ್ರದ(ಐಟಿಐ) ಹಿಂಭಾಗ ಕಾಡುಪಾಲಾದ ಸ್ಥಿತಿಯಲ್ಲಿದ್ದ ಪುರಾತನ ಕ್ರೈಸ್ತ ಗೋರಿಗಳಿದ್ದ ಪ್ರದೇಶದಲ್ಲಿ ಕ್ರೈಸ್ತ ಸಮುದಾಯಕ್ಕೆ ಸೇರಿದ ಕೋವಿಡ್ ಸೋಂಕಿತನ ಮೃತದೇಹದ ಅಂತ್ಯ ಕ್ರಿಯೆ ನಡೆಸಲು ಕ್ರೈಸ್ತರು ಮುಂದಾದಾಗ ಸ್ಥಳೀಯ ನಿವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಇದು ಕ್ರೈಸ್ತ ಸ್ಮಶಾನವಲ್ಲದೆ ಇರುವುದರಿಂದ ಮತ್ತು ಸ್ವಾತಂತ್ರ್ಯ ಪೂರ್ವದ ಗೋರಿಗಳಿರುವುದರಿಂದ ಇಲ್ಲಿ ಶವ ಸಂಸ್ಕಾರ ಮಾಡಬಾರದೆಂದು ಕ್ರೈಸ್ತ ಸಮುದಾಯದ ಮನವೊಲಿಸಿ ಕಳುಹಿಸಿದರು.
ಕೊರೊನಾ ವೈರಸ್‍ನಿಂದ ಇಂದು ಕ್ರೈಸ್ತ ಸಮುದಾಯದ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಹಳೆಯ ಗೋರಿಗಳಿರುವ ಪ್ರದೇಶವನ್ನು ಕ್ರೈಸ್ತ ಸಮುದಾಯದ ಮುಖಂಡರು ಆಯ್ಕೆ ಮಾಡಿಕೊಂಡು ಕಾಡು ಕಡಿಯುವ ಮತ್ತು ಗುಂಡಿ ತೆಗೆಯುವ ಕಾರ್ಯದಲ್ಲಿ ತೊಡಗಿದ್ದರು.
ಈ ಮಾಹಿತಿ ತಿಳಿದ ಸುತ್ತಮುತ್ತಲ ಮನೆಗಳ ನಿವಾಸಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೊರೊನಾ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಇದು ಯೋಗ್ಯವಾದ ಸ್ಥಳವಲ್ಲ, ಇದಕ್ಕೆ ನಾವು ಅವಕಾಶ ನೀಡುವುದಿಲ್ಲವೆಂದು ತಿಳಿಸಿದರು.
ಸ್ಥಳಕ್ಕೆ ಆಗಮಿಸಿದ ಮಡಿಕೇರಿ ನಗರ ಠಾಣೆಯ ಪೊಲೀಸ್ ಅಧಿಕಾರಿಗಳು ಇಲ್ಲಿ ಬಹಳ ವರ್ಷಗಳ ಹಳೆಯ ಗೋರಿಗಳಿರುವುದರಿಂದ ಮತ್ತು ಜಮೀನು ಸರ್ಕಾರಕ್ಕೆ ಸೇರಿದ್ದಾಗಿರುವುದರಿಂದ ಇಲ್ಲಿ ಅಂತ್ಯ ಸಂಸ್ಕಾರ ಮಾಡಲು ಸಾಧ್ಯವಿಲ್ಲವೆಂದರು. ತಮ್ಮದೇ ಸಮುದಾಯದ ಸ್ಮಶಾನವಿರುವುದರಿಂದ ಅಲ್ಲಿ ಅಂತ್ಯ ಸಂಸ್ಕಾರ ಮಾಡುವಂತೆ ಮನವೊಲಿಸಿದರು.
ಕೊನೆಗೆ ಪೊಲೀಸರ ಸಲಹೆಯಂತೆ ಕ್ರೈಸ್ತರ ಸ್ಮಶಾನದಲ್ಲಿ ಮೃತ ಕೋವಿಡ್ ಸೋಂಕಿತನ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಕ್ರೈಸ್ತ ಸೇವಾ ಸಂಘದ ಅಧ್ಯಕ್ಷ ಕೆ.ಟಿ.ಬೇಬಿಮ್ಯಾಥ್ಯು, ನಗರ ಠಾಣಾ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮತ್ತಿತರರು ಹಾಜರಿದ್ದರು.