ಸರ್ಕಾರದ ವಿರುದ್ಧ ಸಿಪಿಐಎಂ ಪ್ರತಿಭಟನೆ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಮಡಿಕೇರಿ ಆ.28 : ಕೇಂದ್ರ ಮತ್ತು ರಾಜ್ಯ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತ ಕಮ್ಯುನಿಷ್ಟ್ ಪಕ್ಷ (ಮಾಕ್ರ್ಸ್‍ವಾದಿ) ಕೊಡಗು ಜಿಲ್ಲಾ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಪಕ್ಷ ಮಂಡಿಸಿರುವ 16 ಬೇಡಿಕೆಗಳನ್ನು ಒಪ್ಪಿ ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಎಲ್ಲಾ ಬಡ ಕುಟುಂಬಗಳಿಗೆ ತಕ್ಷಣದಿಂದ ಮುಂದಿನ ಆರು ತಿಂಗಳವರೆಗೆ ರೂ.7,500 ನಗದು ವರ್ಗಾವಣೆ ಮಾಡಬೇಕು, ತಲಾ 10 ಕೆ.ಜಿ. ಯಂತೆ ಉಚಿತ ಆಹಾರ ಧಾನ್ಯಗಳನ್ನು ವಿತರಣೆ ಮಾಡಬೇಕು, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ವಿಸ್ತರಿಸಿ ಕೂಲಿ ದರವನ್ನು ಏರಿಸಬೇಕು, ವರ್ಷದಲ್ಲಿ 200 ದಿನಗಳ ಕೆಲಸದ ಖಾತ್ರಿಯನ್ನು ಒದಗಿಸಬೇಕು, ನಗರ ಉದ್ಯೋಗ ಖಾತ್ರಿ ಕಾಯ್ದೆಯನ್ನು ತರಬೇಕು, ಎಲ್ಲಾ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆಯನ್ನು ಪ್ರಕಟಿಸಬೇಕು, ಅಂತರ ರಾಜ್ಯ ವಲಸೆ ಕೆಲಸಗಾರರ ಕಾಯ್ದೆ ತೆಗೆದುಹಾಕುವ ಪ್ರಸ್ತಾಪ ರದ್ದು ಮಾಡಬೇಕು, ಸಾರ್ವಜನಿಕ ಆರೋಗ್ಯಕ್ಕೆ ಕೇಂದ್ರಿಯ ವೆಚ್ಚವನ್ನು ಕನಿಷ್ಠ ಜಿಡಿಪಿಯ ಶೇ. 3ಕ್ಕೆ ಹೆಚ್ಚಿಸಬೇಕು, ಅಗತ್ಯ ವಸ್ತುಗಳ ಕಾಯ್ದೆಯನ್ನು ತೆಗೆದುಹಾಕುವ ಮತ್ತು ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಎಲ್ಲಾ ಸುಗ್ರೀವಾಜ್ಞೆಗಳನ್ನು ರದ್ದುಮಾಡಬೇಕು, ಈಗಿರುವ ಕಾರ್ಮಿಕ ಕಾನೂನುಗಳನ್ನು ರದ್ದು ಮಾಡುವ ಎಲ್ಲಾ ಪ್ರಸ್ತಾವಗಳನ್ನು ಹಿಂತೆಗೆದುಕೊಳ್ಳಬೇಕು, ಸಾರ್ವಜನಿಕ ವಲಯಗಳಲ್ಲಿನ ಉದ್ದಿಮೆಗಳ ಖಾಸಗೀಕರಣವನ್ನು ರದ್ದುಮಾಡಬೇಕು, ಸೋಂಕಿಗೆ ತುತ್ತಾಗಿರುವ ಕುಟುಂಬಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳ ಪ್ರಕಾರ ಹಣಕಾಸು ನೆರವು ಪ್ರಕಟಿಸಬೇಕು, ಪರಿಶಿಷ್ಟ ಜಾತಿ ಮತ್ತು ವಿಕಲಾಂಗರಿಗೆ ಮೀಸಲಾತಿಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು, ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು, ಹೆಚ್ಚುತ್ತಿರುವ ದಲಿತರ ಮೇಲಿನ ಹಿಂಸಾಚಾರ, ಮಹಿಳೆಯರ ವಿರುದ್ಧ ಕೌಟುಂಬಿಕ ಹಾಗೂ ಲೈಂಗಿಕ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಇ.ರಾ.ದುರ್ಗಾಪ್ರಸಾದ್, ಜಿಲ್ಲಾ ಸಮಿತಿ ಸದಸ್ಯ ಸಾಬು, ಮಹದೇವ, ಜೋಶಿ, ಕುಟ್ಟಪ್ಪ, ಶಾಖಾ ಕಾರ್ಯದರ್ಶಿ ಪಿ.ಆರ್.ಭರತ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
