ಇಬ್ಬರು ಪೊಲೀಸರನ್ನು ಕಾಡಿದ ಕೋವಿಡ್ : ತೊಂಭತ್ತುಮನೆ ಗ್ರಾಮದಲ್ಲಿ 14 ಮಂದಿಗೆ ಸೋಂಕು

28/08/2020

ಮಡಿಕೇರಿ ಆ.28 : ಕೊಡಗು ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕುಂದಚೇರಿ ಗ್ರಾಮದ ಚೆಟ್ಟಿಮಾನಿ ಪಂಚಾಯಿತಿ ಬಳಿಯ 6 ವರ್ಷದ ಬಾಲಕ ಮತ್ತು ಹಾಕತ್ತೂರು ಗ್ರಾ.ಪಂ ವ್ಯಾಪ್ತಿಯ ತೊಂಭತ್ತು ಮನೆ ಗ್ರಾಮದ 6 ಹಾಗೂ 16 ವರ್ಷದ ಬಾಲಕರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ತೊಂಭತ್ತು ಮನೆ ಗ್ರಾಮದಲ್ಲಿ ಇಂದು ಕೂಡ 7 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.
ಮಡಿಕೇರಿಯ ಇಬ್ಬರು ಪೊಲೀಸರಲ್ಲಿ ಕೋವಿಡ್ ಇರುವುದು ದೃಢಪಟ್ಟಿದೆ. ನಗರದ ಪೊಲೀಸ್ ವಸತಿ ಗೃಹದ 35 ವರ್ಷದ ಪುರುಷ ಪೊಲೀಸ್ ಸಿಬ್ಬಂದಿ ಹಾಗೂ ಇಗ್ಗುತ್ತಪ್ಪ ಬಡಾವಣೆಯ 45 ವರ್ಷದ ಪೊಲೀಸ್ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ರಾಘವೇಂದ್ರ ದೇವಾಲಯ ಸಮೀಪದ ಆರೋಗ್ಯ ಕಾರ್ಯಕರ್ತೆಯೊಬ್ಬರಲ್ಲೂ ಸೋಂಕು ದೃಢಪಟ್ಟಿದ್ದು ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆ ವೇಳೆಗೆ 21 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 32 ಸೇರಿದಂತೆ ಒಟ್ಟು 53 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1342 ಆಗಿದ್ದು, 1074 ಮಂದಿ ಗುಣಮುಖರಾಗಿದ್ದಾರೆ. 250 ಸಕ್ರಿಯ ಪ್ರಕರಣಗಳಿದ್ದು, 18 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 220 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.