ದೊಡ್ಡಹರವೆ ಗ್ರಾಮಕ್ಕೆ ಲಗ್ಗೆಯಿಟ್ಟ ಕಾಡಾನೆಗಳ ಹಿಂಡು

28/08/2020

ಮಡಿಕೇರಿ ಆ.28 : ಕುಶಾಲನಗರ ಸಮೀಪದ ಕೊಪ್ಪ ಗ್ರಾ.ಪಂ ವ್ಯಾಪ್ತಿಯ ದೊಡ್ಡಹರವೆ ಗ್ರಾಮಕ್ಕೆ ಲಗ್ಗೆಯಿಟ್ಟ ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಜೋಳದ ಬೆಳೆ ನಾಶಗೊಳಿಸಿದೆ.
ನಾಗರಹೊಳೆ ಅರಣ್ಯಕ್ಕೆ ಹೊಂದಿಕೊಂಡ ದೊಡ್ಡಹರವೆ ಗ್ರಾಮದಲ್ಲಿ 15 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಜೋಳದ ಫಸಲನ್ನು ತಿಂದು, ತುಳಿದು ನಾಶಗೊಳಿಸಿದೆ. ಈ ಭಾಗದ ಅರಣ್ಯದಲ್ಲಿ 30 ಅಧಿಕ ಕಾಡಾನೆಗಳಿದ್ದು ಗುಂಪು ಗುಂಪಾಗಿ ಜಮೀನಿಗೆ ದಾಳಿಯಿಡುತ್ತಿವೆ. ಅರಣ್ಯ ಇಲಾಖೆಯಿಂದ ಅಳವಡಿಸಿದ್ದ ಸೋಲಾರ್ ನೆಲಕಚ್ಚಿ ಎರಡು ವರ್ಷಗಳು ಕಳೆದಿವೆ ಎಂದು ರೈತರು ದೂರಿದ್ದಾರೆ. ಆನೆ ಕಂದಕ ಮಣ್ಣು ತುಂಬಿ ಕಿರಿದಾಗಿದ್ದು ಆನೆಗಳು ಸಲೀಸಾಗಿ ಗ್ರಾಮಗಳತ್ತ ನುಗ್ಗುತ್ತಿವೆ ಎಂದು ರೈತರಾದ ಅಶೋಕ್, ಆನಂದ್, ಜವರಪ್ಪ, ಹೊನ್ನಯ್ಯ, ಪಾಪಯ್ಯ, ರಂಗಶೆಟ್ಟಿ, ಮೋಟಯ್ಯ ಮತ್ತಿತರರು ಅಳಲು ತೋಡಿಕೊಂಡಿದ್ದಾರೆ. ಹುಣಸೂರು ವಲಯ ಅರಣ್ಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ. ಬೆಳೆನಾಶಕ್ಕೆ ಸೂಕ್ತ ಪರಿಹಾರ ಒದಗಿಸಿ ಸಮಸ್ಯೆಗೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ರೈತರು ಆಗ್ರಹಿಸಿದ್ದಾರೆ.