ಸೆ.2 ರಂದು ಎಸ್‍ಎನ್‍ಡಿಪಿಯಿಂದ ಸಿದ್ದಾಪುರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ

29/08/2020

ಮಡಿಕೇರಿ ಆ.29 : ಸಿದ್ದಾಪುರದ ಶ್ರೀನಾರಾಯಣ ಧರ್ಮ ಪರಿಪಾಲನಾ (ಎಸ್.ಎನ್.ಡಿ.ಪಿ) ಯೋಗಂ ಕೊಡಗು ಯೂನಿಯನ್ ವತಿಯಿಂದ ಸೆ.2 ರಂದು 166ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಲಾಗುವುದು ಎಂದು ಯೂನಿಯನ್‍ನ ಅಧ್ಯಕ್ಷ ವಿ.ಕೆ.ಲೋಕೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 2 ರಂದು ಸಿದ್ದಾಪುರದ ಗುರುನಾರಾಯಣ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಕಾಫಿ ಬೆಳೆಗಾರ ಕೆ.ಆರ್. ರಾಜನ್ ಧ್ವಜಾರೋಹಣ ನೆರವೇರಿಸಲಿದ್ದು, ಸಭಾ ಕಾರ್ಯಕ್ರಮವನ್ನು ಮತ್ತೋರ್ವ ಬೆಳೆಗಾರ ಕಂಬಿಬಾಣೆಯ ಟಿ.ಕೆ.ಸಾಯಿಕುಮಾರ್ ಉದ್ಘಾಟಿಸಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಎಸ್.ಎನ್.ಡಿ.ಪಿ. ಯೋಗಂ ಕೊಡಗು ಯೂನಿಯನ್‍ನ ಮಾಜಿ ಉಪಾಧ್ಯಕ್ಷ ರಾಜೇಂದ್ರಬಾಬು, ಮಾಜಿ ಕಾರ್ಯದರ್ಶಿ ಎಂ.ವಿ.ಸಜೀವನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಕಾರ್ಯಕ್ರಮದಲ್ಲಿ ಶಾಖೆಯ ಹತ್ತು ಹಿರಿಯ ಸದಸ್ಯರನ್ನು ಸನ್ಮಾನಿಸಲಾಗುತ್ತಿದ್ದು, ಯೂನಿಯನ್‍ನ ಮಾಜಿ ಉಪಾಧ್ಯಕ್ಷ ಪಿ.ಕೆ.ಶ್ರೀಧರನ್, ಟಿ.ಆರ್. ಸೋಮನಾಥ್, ಪಿ.ಎನ್. ಸಹದೇವನ್, ನಿರ್ದೆಶಕರಾದ ಇ.ಎನ್. ಭರತ್‍ಕುಮಾರ್, ಟಿ.ಕೆ.ಸೋಮನ್, ಪಿ.ಎನ್. ಸುಕುಮಾರ, ಹಿರಿಯರಾದ ಪಿ.ಎನ್.ವಿಜಯಕುಮಾರ್, ಮಾಲ್ದಾರೆ ಎಸ್.ಎನ್.ಡಿ.ಪಿ. ಶಾಖೆಯ ಅಧ್ಯಕ್ಷ ಕೆ.ಎ. ಕುಟ್ಟಪ್ಪನ್, ಸುಳುಗೋಡು ಶಾಖೆಯ ಅಧ್ಯಕ್ಷ ಎನ್. ಗೋಪಾಲನ್, ಗೋಣಿಕೊಪ್ಪ ಶಾಖೆಯ ಕೆ.ಜೆ.ಜಯೇಂದ್ರನ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಪ್ರಸಕ್ತ ಸಾಲಿನಲ್ಲಿ ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಸಭೆಯಲ್ಲಿ ಸನ್ಮಾನಿಸಲಾಗುವುದು. ಬರಹಗಾರ್ತಿ ಕಾನತ್ತಿಲ್ ರಾಣಿ ಅರುಣ್ ಬರೆದಿರುವ ಮಹಾಗುರು, ಸಮಾಜಿಕ ಮತ್ತು ಧರ್ಮ, ಹರಿಕಾರ ಯುಗ ಪುರುಷ, ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಸಂದೇಶ ಪುಸ್ತಕವನ್ನು ಗಣ್ಯರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಲೋಕೇಶ್ ತಿಳಿಸಿದರು.
ಶ್ರೀನಾರಾಯಣ ಧರ್ಮ ಪರಿಪಾಲನಾ(ಎಸ್.ಎನ್.ಡಿ.ಪಿ) ಯೋಗಂ ಶಾಖೆಯು 1954ರಲ್ಲಿ ಆರಂಭವಾಗಿದ್ದು, 1993ರಲ್ಲಿ ಯೂನಿಯನ್ ಆಗಿ ಪರಿವರ್ತನೆಗೊಂಡು ಇಂದು ಕೊಡಗಿನಲ್ಲಿ 50 ಶಾಖೆಗಳಿವೆ. ಸುಮಾರು 18 ಸಾವಿರ ನೋಂದಾಯಿತ ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರತಿವರ್ಷ ಅದ್ಧೂರಿಯಾಗಿ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದ್ದು, ಈ ಬಾರಿ ಕೊರೋನಾ ಹಿನ್ನೆಲೆ ಸರ್ಕಾರದ ನಿಬಂಧನೆಗಳೊಂದಿಗೆ ಕಾರ್ಯಕ್ರವನ್ನು ಸರಳ ರೀತಿಯಲ್ಲಿ ಆಚರಿಸಲಾಗುವುದು. ಕಾರ್ಯಕ್ರಮಕ್ಕೆ ಹಾಜರಾಗುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಯೂನಿಯನ್‍ನ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಶಿವಪ್ರಸಾದ್, ನಿರ್ದೇಶಕರಾದ ಕೆ.ಆರ್.ಸತೀಶ್, ಎಂ.ಎ.ಆನಂದ್ ಹಾಗೂ ಪಿ.ಜಿ.ರಾಜಶೇಖರ್ ಉಪಸ್ಥಿತರಿದ್ದರು.