ಶೇ.95 ರಷ್ಟು ವಿದ್ಯುತ್ ಕಂಬಗಳ ಮರುಜೋಡಣೆ ಕಾರ್ಯ ಪೂರ್ಣ : ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ಮಾಹಿತಿ

29/08/2020

ಮಡಿಕೇರಿ ಆ.29 : ಜಿಲ್ಲೆಯಲ್ಲಿ ಈವರೆಗೆ ಭಾರಿ ಮಳೆ ಮತ್ತು ಗಾಳಿಯಿಂದಾಗಿ 3,218 ಕಂಬಗಳು ಮತ್ತು 75 ಟ್ರಾನ್ಸ್‍ಫಾರ್ಮರ್‍ಗಳಿಗೆ ಸಂಪೂರ್ಣ ಹಾನಿಯುಂಟಾಗಿತ್ತು. ಈ ನಿಟ್ಟಿನಲ್ಲಿ ಕಂಬಗಳು ಮತ್ತು ಟ್ರಾನ್ಸ್‍ಫಾರ್ಮರ್‍ಗಳ ಮರುಜೋಡಣೆ ಸವಾಲಿನ ಕಾರ್ಯವಾಗಿದ್ದು, ಈಗಾಗಲೇ ಶೇ.95 ರಷ್ಟು ಮರು ಜೋಡಣಾ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರಿ ಮಳೆ ಮತ್ತು ಗಾಳಿಯಿಂದಾಗಿ ಹಲವು ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‍ಫಾರ್ಮರ್‍ಗಳಿಗೆ ತೀವ್ರ ಹಾನಿಯುಂಟಾಗಿತ್ತು. ಈ ನಿಟ್ಟಿನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಸಮರ್ಪಕ ವಿದ್ಯುತ್ ಪೂರೈಸುವ ಸಲುವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‍ಫಾರ್ಮರ್‍ಗಳ ಜೋಡಣೆ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಸೋಮಶೇಖರ್ ಅವರು ತಿಳಿಸಿದರು.
ಮಡಿಕೇರಿ ತಾಲೂಕಿನಲ್ಲಿ 873 ಕಂಬಗಳು ಮತ್ತು 24 ಟ್ರಾನ್ಸ್‍ಫಾರ್ಮರ್‍ಗಳು, ಸೋಮವಾರಪೇಟೆಯಲ್ಲಿ 1020 ಕಂಬಗಳು ಮತ್ತು 22 ಟ್ರಾನ್ಸ್‍ಫಾರ್ಮರ್‍ಗಳು ಹಾಗೂ ವಿರಾಜಪೇಟೆ ತಾಲೂಕಿನಾದ್ಯಂತ 1325 ಕಂಬಗಳು ಮತ್ತು 29 ಟ್ರಾನ್ಸ್‍ಫಾರ್ಮರ್‍ಗಳು ಸಂಪೂರ್ಣವಾಗಿ ಹಾನಿಯಾಗಿದ್ದವು ಎಂದು ಅವರು ತಿಳಿಸಿದರು.
ಈ ಪೈಕಿ ಜಿಲ್ಲೆಯಾದ್ಯಂತ ಎಲ್ಲಾ ಟ್ರಾನ್ಸ್‍ಫಾರ್ಮರ್‍ಗಳ ದುರಸ್ತಿ ಮತ್ತು ಮರು ಜೋಡಣಾ ಕಾರ್ಯವು ಸಂಪೂರ್ಣವಾಗಿ ಮುಗಿದಿದ್ದು, ಮಡಿಕೇರಿ ತಾಲೂಕಿನಲ್ಲಿ 29, ಸೋಮವಾರಪೇಟೆ ತಾಲೂಕಿನಲ್ಲಿ 76 ಮತ್ತು ವಿರಾಜಪೇಟೆ ತಾಲೂಕಿನಲ್ಲಿ 24 ಕಂಬಗಳ ದುರಸ್ಥಿ ಮತ್ತು ಮರು ಜೋಡಣಾ ಕಾರ್ಯವು ಉಳಿದಿದೆ. ಮುಂಬರುವ ಒಂದು ವಾರದಲ್ಲಿ ಬಾಕಿ ಇರುವ ಕಂಬಗಳ ಜೋಡಣಾ ಕಾರ್ಯವನ್ನು ಮುಗಿಸಿ ಸಾರ್ವಜನಿಕರಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಮಳೆಗಾಲ ಸಂದರ್ಭ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಭಾರಿ ಗಾಳಿ ಮತ್ತು ಮಳೆಯಿಂದ ವಿದ್ಯುತ್ ಕಂಬಗಳ ಮೇಲೆಯೆ ಹಲವೆಡೆ ಮರಗಳು ಬಿದ್ದು ಸಮಸ್ಯೆ ಉಂಟಾಗಿತ್ತು ಎಂದು ಅವರು ಹೇಳಿದರು.
ಅಲ್ಲದೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ ಮಳೆ ಹಾನಿ ಸಂಬಂಧಿಸಿದಂತೆ ಹಲವು ಕ್ರಮ ಕೈಗೊಂಡಿದ್ದು, ಆ ನಿಟ್ಟಿನಲ್ಲಿ ಮಳೆಹಾನಿ ಸರಿಪಡಿಸಲು ಪ್ರತಿ ತಾಲೂಕಿಗೂ ಮುಖ್ಯ ನೋಡಲ್ ಅಧಿಕಾರಿ ಮತ್ತು ಹೋಬಳಿವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿ ಕ್ರಮ ವಹಿಸಲಾಯಿತು ಎಂದು ಅವರು ತಿಳಿಸಿದರು.
ಜಿಲ್ಲೆಯ ಚೆಸ್ಕಾಂ ಇಲಾಖೆಯ ಸಿಬ್ಬಂದಿಗಳು, ಎಂಜಿನಿಯರ್‍ಗಳು, ವಿವಿಧ ವಿಭಾಗಗಳ ಚೆಸ್ಕಾಂ ಸಿಬ್ಬಂದಿಗಳು ಮತ್ತು ಖಾಸಗಿ ಗುತ್ತಿಗೆದಾರರು ಸೇರಿದಂತೆ ಸುಮಾರು 500 ಜನ ಸಿಬ್ಬಂದಿಗಳು ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಜಿಲ್ಲಾಡಳಿತದ ಅಗತ್ಯ ಸಹಕಾರ ಮತ್ತು ನಿರ್ದೇಶನದೊಂದಿಗೆ ಶೀಘ್ರವಾಗಿ ಪರಿಹಾರ ಕಾರ್ಯ ಕೈಗೊಂಡು ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಯಿತು ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ಅವರು ಮಾಹಿತಿ ನೀಡಿದ್ದಾರೆ.