ಹಿರಿಯ ನಾಗರಿಕರಿಂದ ಅರ್ಜಿ ಆಹ್ವಾನ

August 29, 2020

ಮಡಿಕೇರಿ ಆ.29 : ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಹಿರಿಯ ನಾಗರಿಕರಿಗೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಒಂದು ಸಂಸ್ಥೆಗೆ ರಾಜ್ಯ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಅಕ್ಟೋಬರ್, 01 ರಂದು ರಾಜ್ಯಮಟ್ಟದಲ್ಲಿ ಆಚರಿಸುವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ (ಶಿಕ್ಷಣ, ಸಾಹಿತ್ಯ, ಕಲಾ ಕ್ಷೇತ್ರ, ಕಾನೂನು, ಪ್ರತಿಭೆ, ಕ್ರೀಡೆ ಸಮಾಜ ಸೇವೆ) ಗಣನೀಯ ಸೇವೆ ಸಲ್ಲಿಸಿದ ಹಿರಿಯ ನಾಗರಿಕರಿಗೆ 6 ವೈಯಕ್ತಿಕ ಪ್ರಶಸ್ತಿಗಳನ್ನು ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಒಂದು ಸಂಸ್ಥೆಗೆ ಪ್ರಶಸ್ತಿ ಸೇರಿ ಒಟ್ಟು 7 ಪ್ರಶಸ್ತಿಗಳನ್ನು ನೀಡಲಾಗುವುದು. ಈ ಯಾವುದಾದರೊಂದು ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಹಿರಿಯ ನಾಗರಿಕರು ಮತ್ತು ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಯವರು ಕೂಡಾ ಅರ್ಜಿ ಸಲ್ಲಿಸಬಹುದಾಗಿದೆ.
ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಚೈನ್‍ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ-571201 ಇಲ್ಲಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಎಲ್ಲಾ ದಾಖಲಾತಿಗಳೊಂದಿಗೆ ದ್ವಿ ಪ್ರತಿಯಲ್ಲಿ (ಲಗತ್ತಿಸುವ ದಾಖಲೆಗಳಿದ್ದಲ್ಲಿ ವಿವರಗಳನ್ನು ಸಂಕ್ಷಿಪ್ತವಾಗಿ ಅರ್ಜಿಯಲ್ಲಿ ವಿವರಿಸಬೇಕು) ಸೆಪ್ಟೆಂಬರ್, 07 ರೊಳಗೆ ಕಚೇರಿಗೆ ಸಲ್ಲಿಸುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ.08272-295829 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಂಪತ್ ಕುಮಾರ್ ಅವರು ತಿಳಿಸಿದ್ದಾರೆ.