ಎ.ಕೆ.ಸುಬ್ಬಯ್ಯ-ಪೊನ್ನಮ್ಮ ದತ್ತಿ ಸಂಸ್ಥೆಯಿಂದ 4600 ಕಿಟ್ ವಿತರಣೆ : ಬಡವರ ಸಂಕಷ್ಟಕ್ಕೆ ಎ.ಎಸ್.ಪೊನ್ನಣ್ಣ ಸ್ಪಂದನೆ

ಪೊನ್ನಂಪೇಟೆ ಆ.29: ಕೊರೊನಾ ಮಹಾಮಾರಿ ವಿಶ್ವವ್ಯಾಪಿಯಾಗಿದ್ದು ರಾಜ್ಯದಲ್ಲಿಯೂ ಶ್ರೀ ಸಾಮಾನ್ಯರನ್ನು ಭಯ ಭೀತಗೊಳಿಸಿದೆ. ಬಡ, ಮಧ್ಯಮ ವರ್ಗದವರ, ಆದಿವಾಸಿಗಳ ಕಷ್ಟ ಆಲಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ದಿನಸಿ ‘ಕಿಟ್’ ನೀಡಲಾಗುತ್ತಿದೆ. ಮುಂದೆಯೂ ಜಿಲ್ಲೆಯ ಜನತೆಯ ಕಷ್ಟ ಕಾರ್ಪಣ್ಯಗಳಿಗೆ ಎ.ಕೆ.ಸುಬ್ಬಯ್ಯ-ಪೊನ್ನಮ್ಮ ಶೈಕ್ಷಣಿಕ ಮತ್ತು ದತ್ತಿ ಸಂಸ್ಥೆ ವತಿಯಿಂದ ಸಹಕಾರ ನೀಡಲಾಗುವದು. ಈವರೆಗೆ ಸುಮಾರು ರೂ.40 ಲಕ್ಷ ಅಂದಾಜು ವೆಚ್ಚದಲ್ಲಿ ಒಟ್ಟು 4600 ಆಹಾರ ಕಿಟ್ ವಿತರಣೆ ಮಾಡಲಾಗಿದೆ ಎಂದು ಟ್ರಸ್ಟ್ ನ ಮುಖ್ಯಸ್ಥರಾದ, ಸರಕಾರದ ಮಾಜಿ ಆಡ್ವೋಕೇಟ್ ಜನರಲ್ ಹಾಗೂ ಹೈ ಕೋರ್ಟ್ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಹೇಳಿದರು.ಇಂದು ಮಾಲ್ಧಾರೆ ಗ್ರಾ.ಪಂ.ವ್ಯಾಪ್ತಿಯ ವಿವಿಧ ಹಾಡಿಗಳಲ್ಲಿ ಆದಿವಾಸಿಗಳು, ದೀನದಲಿತರು, ಅಲ್ಪ ಸಂಖ್ಯಾತವರ್ಗಗಳಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು.
ತಮ್ಮ ಪೋಷಕರಾದ ದಿ.ಎ.ಕೆ.ಸುಬ್ಬಯ್ಯ ಹಾಗೂ ಪೊನ್ನಮ್ಮ ಅವರುಗಳು ಮೊದಲಿನಿಂದಲೂ ಬಡ ಜನತೆಯ ಕಷ್ಟಕ್ಕೆ ಸ್ಪಂದಿಸುತ್ತಿದ್ದರು. ಜಿಲ್ಲೆಯ ಜನತೆಯ ಪರವಾಗಿಯೂ ಹಲವಷ್ಟು ಕಾನೂನು ಹೋರಾಟವನ್ನು ಮಾಡುತ್ತಾ ಬಂದವರು. ಕೋವಿಡ್-19 ರ ಸಂದಿಗ್ಧ ಕಾಲಘಟ್ಟದಲ್ಲಿ ನಮ್ಮ ದುಡಿಮೆಯ ಕೆಲವೊಂದು ಭಾಗದಲ್ಲಿ ಕೊಡಗಿನ ಜನತೆಗೆ ಏನಾದರೂ ಸಹಕಾರ ನೀಡಬೇಕೆಂದು ಉದ್ಧೇಶಿಸಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಇದಕ್ಕೆ ಬೇರೆ ಯಾವದೇ ಅರ್ಥ ಕಲ್ಪಿಸುವದು ಬೇಡ. ಎರಡು ಮೂರು ತಿಂಗಳು ಯಾವದೇ ಕೆಲಸವಿಲ್ಲದಿದ್ದರೆ, ಎಂತಹವರಿಗೂ ಕಷ್ಟವಾಗುತ್ತದೆ. ನಿಜವಾದ ಫಲಾನುಭವಿಗಳನ್ನು ಗುರುತಿಸುವಲ್ಲಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಮುಖರು ಶ್ರಮಿಸಿದ್ದಾರೆ. ರಾಜ್ಯ ಸರ್ಕಾರ ಕೋವಿಡ್ ಸಂದರ್ಭ ಜನರಿಗೆ ಉತ್ತಮ ಆರೋಗ್ಯ ಸೇವೆ ಹಾಗೂ ಸೀಲ್ ಡೌನ್ ಪ್ರದೇಶದಲ್ಲಿ ಆಹಾರ ಇತ್ಯಾದಿ ಅತ್ಯಗತ್ಯ ವಸ್ತು ಪೂರೈಸುವಲ್ಲಿಯೂ ವಿಫಲವಾಗಿದ್ದು, ಅಂತಹಾ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷದಲ್ಲಿದ್ದರೂ ದೀನ ದಲಿತರ ಸಂಕಷ್ಟಕ್ಕೆ ಸ್ಪಂದಿಸಿದೆ ಎಂದು ನುಡಿದರು. ಇಂದು ಮಾಲ್ಧಾರೆ ಗ್ರಾ.ಪಂ.ವ್ಯಾಪ್ತಿಯ ತಟ್ಟಳ್ಳಿ ಹಾಡಿ, ಕಲ್ಲಳ್ಳ ಗೇಟ್ ಹಾಡಿ, ದೊಡ್ಡಡ್ಲು ಹಾಡಿ, ಹಣ್ಣಿನ ತೋಟ, ಚೊಟ್ಟಪಾಳಿ ಕಾಲೋನಿ, ಮಾಲ್ಧಾರೆಯ ಆಸ್ಥಾನ ಎಂಬಲ್ಲಿನ ಹಾಡಿಗಳಿಗೆ ತೆರಳಿ ಸುಮಾರು 400 ದಿನಸಿ ಕಿಟ್ ವಿತರಿಸಲಾಯಿತು.
ವೀರಾಜಪೇಟೆ ನಗರದಲ್ಲಿ 650 ಕುಟುಂಬಗಳಿಗೆ ಕಿಟ್ ವಿತರಿಸಲಾಗಿದೆ. ತಾ.30ರಂದು ಗೋಣಿಕೊಪ್ಪಲು ಹಾಗೂ ಮುಂದೆ ಹಾತೂರು, ಕಿರುಗೂರು ಗ್ರಾಮಗಳಲ್ಲಿಯೂ ಕಿಟ್ ವಿತರಣಾ ಕಾರ್ಯಕ್ರಮ ಆಯೋಜಿಸುವುದಾಗಿ ಪೊನ್ನಣ್ಣ ಅವರು ಮಾಹಿತಿ ನೀಡಿದರು. *ಡಿವೈಎಸ್‌ಪಿ ಗಣಪತಿ ಕೇಸ್-ಕಾನೂನಿಗೆ ಜಯವಾಗಲಿ* ಮಡಿಕೇರಿಯಲ್ಲಿ ಆತ್ಮಹತ್ಯೆಗೆ ಶರಣಾದ ಡಿವೈಎಸ್‌ಪಿ ಗಣಪತಿ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ಅವರಿಗೆ ಸಮನ್ಸ್ ಜಾರಿಯಾಗಿದೆ. ಕಾನೂನು ವ್ಯಾಪ್ತಿಯಲ್ಲಿ ಇದೆಲ್ಲಾ ಸಾಮಾನ್ಯ. ಪ್ರಾಮಾಣಿಕವಾದ ತನಿಖೆ ನಡೆಯಲಿ. ನ್ಯಾಯಾಂಗದಲ್ಲಿ ವಿಶ್ವಾಸ ಮತ್ತು ಸತ್ಯಕ್ಕೆ ಜಯವಾಗಲಿ ಎಂದಷ್ಟೇ ನಾನು ಹೇಳಬಲ್ಲೆ ಎಂದು ಎ.ಎಸ್.ಪೊನ್ನಣ್ಣ ಅವರು ಇದೇ ಸಂದರ್ಭ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಅವರು ಮಾತನಾಡಿ, ದುರ್ಬಲ ವರ್ಗದ ನೆರವಿಗೆ ಎ.ಎಸ್.ಪೊನ್ನಣ್ಣ ಸಹೋದರರು ಮುಂದಾಗಿರುವದು ನಮಗೆ ಹೆಮ್ಮೆಯ ವಿಷಯವಾಗಿದೆ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಮಾಜಿ ತಾ.ಪಂ.ಸದಸ್ಯರಾದ ಜಾನ್‌ಸನ್ ಹಾಗೂ ಹುಂಡಿಯ ಹಂಸ ಅವರು ದಿ.ಎ.ಕೆ.ಸುಬ್ಬಯ್ಯ ಗುಣಗಾನ ಮಾಡಿದರು. ಇದೇ ಸಂದರ್ಭ ಚೊಟ್ಟೆಪಾಳಿ ಹಾಡಿಯಲ್ಲಿ ಮರದಿಂದ ಬಿದ್ದು ಸೊಂಟದ ಸ್ವಾಧೀನ ಕಳೆದುಕೊಂಡು ಕಳೆದ ಎರಡು ವರ್ಷಗಳಿಂದ ಹಾಸಿಗೆಯಲ್ಲಿಯೇ ಇರುವ ಮಹಮ್ಮದ್ ಎಂಬ ಯುವಕನನ್ನು ಪೊನ್ನಣ್ಣ ಭೇಟಿ ಮಾಡಿ ಸಾಂತ್ವನ ಹೇಳಿದರು. ಕಾರ್ಯಕ್ರಮದಲ್ಲಿ ದಿ.ಎ.ಕೆ.ಎಸ್.ಪುತ್ರ, ಕಾಂಗ್ರೆಸ್ ಪ್ರಮುಖರಾದ ಎ.ಎಸ್.ನರೇನ್ ಕಾರ್ಯಪ್ಪ,ಮಾಲ್ಧಾರೆ ಕಾಂಗ್ರೆಸ್ ವಲಯಾಧ್ಯಕ್ಷ ಶಾಜಿ, ಸಿದ್ಧಾಪುರ ಕ್ಷೇತ್ರ, ಬಾಡಗ ಬಾಣಂಗಾಲ ತಾ.ಪಂ.ಸದಸ್ಯೆ ಹೆಚ್.ಕೆ.ಚಿನ್ನಮ್ಮ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರಾದ ರಾಜೇಶ್ ಪದ್ಮನಾಭ, ಮಹಮ್ಮದ್ ರಫಿ, ವೀರಾಜಪೇಟೆ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಲೋಹಿತ್ ಗೌಡ, ಮಾಲ್ಧಾರೆಯ ಥೋಮಸ್,ಹುದಿಕೇರಿಯ ಅಜ್ಜಿಕುಟ್ಟೀರ ಗಿರೀಶ್,ಅಜ್ಜಿಕುಟ್ಟೀರ ಪ್ರಶಾಂತ್, ಕೇಶವ್ ಕಾಮತ್, ವೀರಾಜಪೇಟೆಯ ನರೇಂದ್ರ ಕಾಮತ್, ಬೆಂಗಳೂರು ವಕೀಲ ಪ್ರವೀಣ್ ಕಾಮತ್, ಜೆ.ಎಸ್.ಶಂಕರ್, ಉಮೇಶ್, ಮಹಾದೇವ, ಮಹಮ್ಮದ್ ಆಲಿ, ಅಬ್ದುಲ್ ರಜಾಕ್,ಲಲಿತಾ, ಹುಂಡಿಯ ಶಮೀರ್ ಮುಂತಾದವರು ಉಪಸ್ಥಿತರಿದ್ದರು.