ಸೋಮವಾರಪೇಟೆಯಲ್ಲಿ ಕೃಷಿಕ ಸಮಾಜದ ಸಭೆ : ಮಳೆಹಾನಿ ಪರಿಹಾರದ ಬಗ್ಗೆ ಚರ್ಚೆ

29/08/2020

ಸೋಮವಾರಪೇಟೆ ಆ.29 : ಸೋಮವಾರಪೇಟೆ ತಾಲ್ಲೂಕು ಕೃಷಿಕ ಸಮಾಜದ ಸಭೆ ಕೃಷಿ ಇಲಾಖೆಯ ಆವರಣದಲ್ಲಿ ಸಮಾಜದ ಅಧ್ಯಕ್ಷ ಎಸ್.ಪಿ.ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.
ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ, ಮಾಹಿತಿ ನೀಡಿದರು. ಈ ಬಾರಿ ಸುರಿದ ಮಳೆಯಿಂದ ಬೆಳೆಹಾನಿಗೆ ಸಂಬಂಧಪಟ್ಟಂತೆ 7,500 ಅರ್ಜಿಗಳು ಬಂದಿವೆ. ಬೆಳೆಹಾನಿ ಸಮೀಕ್ಷೆಯೂ ನಡೆಯುತ್ತಿದೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಶೋಭ ಮಾಹಿತಿ ನೀಡಿದರು. ಲಾಕ್‍ಡೌನ್ ಸಂದರ್ಭ ತರಕಾರಿ, ಹೂ ಬೆಳೆಗಾರರಿಗೆ ನಷ್ಟವಾಗಿದ್ದು, 2500ರಷ್ಟು ಅರ್ಜಿಗಳು ಬಂದಿದ್ದು, ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರದ ಅನುಮೋದನೆ ನಂತರ ಹಣ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಹತ್ತು ದಿನಗಳ ಕಾಲ ಧಾರಾಕಾರ ಮಳೆ ಸುರಿದಿದ್ದು, ತೋಟಗಳ ವೈಜ್ಞಾನಿಕ ನಿರ್ವಹಣೆಯಾಗಬೇಕಾಗಿದೆ ಎಂದು ಕಾಫಿ ಮಂಡಳಿಯ ಅಧಿಕಾರಿ ಲಕ್ಷ್ಮೀಕಾಂತ್ ಹೇಳಿದರು. ನಿಗದಿತ ಸಮಯದಲ್ಲಿ ಮಳೆಯಾಗುತ್ತಿಲ್ಲ ಈ ಕಾರಣದಿಂದ ರಾಸಾಯನಿಕ ಗೊಬ್ಬರ ಕೊಡುವುದು, ಶಿಲೀಂದ್ರ ನಾಶಕ ಹಾಗೂ ಕೀಟನಾಶಕಗಳನ್ನು ಸಿಂಪಡಿಸುವ ಸಮಯವನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಕಾಫಿ ಮಂಡಳಿಯಿಂದ ಶಿಫಾರಸ್ಸಾದ ತಳಿಗಳನ್ನೇ ಬೆಳೆದಾಗ ಮಾತ್ರ, ಉತ್ತಮ ಇಳುವರಿಯ ನಿರೀಕ್ಷೆ ಮಾಡಬಹುದು ಎಂದರು.
ಸಾಕು ಹಂದಿಗಳನ್ನು ಬಾಧಿಸುವ ಮಾರಣಾಂತಿಕ ಎಚ್1ಎನ್1 ರೋಗಕ್ಕೆ ಲಸಿಕೆ ಲಭ್ಯವಿದ್ದು, ಸ್ಥಳೀಯ ಪಶುವೈದ್ಯರನ್ನು ಭೇಟಿ ಮಾಡಬಹುದು. ಜಾನುವಾರುಗಳ ಕಾಲುಬಾಯಿ ರೋಗಕ್ಕೂ ಲಸಿಕೆ ಲಭ್ಯವಿದೆ. ಸೆಪ್ಟಂಬರ್ ತಿಂಗಳಲ್ಲಿ ಸಾಮೂಹಿಕ ಲಸಿಕೆ ಹಾಕುವ ಕಾರ್ಯಕ್ರಮವಿದೆ ಎಂದು ಪಶುವೈದ್ಯ ಇಲಾಖೆ ಉಪನಿರ್ದೇಶಕ ಬದಾಮಿ ಮಾಹಿತಿ ನೀಡಿದರು.
ರೈತರ ಬೆಳೆ ಸಮೀಕ್ಷೆ ಆಪ್ ಬಗ್ಗೆ ಕೃಷಿ ಸಹಾಯಕ ನಿರ್ದೆಶಕ ಡಾ.ರಾಜಶೇಖರ್ ಮಾಹಿತಿ ನೀಡಿದರು.
ಅತೀ ಹೆಚ್ಚು ಮಳೆ ಬೀಳುವ ಶಾಂತಳ್ಳಿ ಹೋಬಳಿ ಹಾಗೂ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಬೆಳೆಹಾನಿಯಾಗುತ್ತಿದ್ದು ಅಧಿಕಾರಿಗಳು ಬೆಳೆಹಾನಿ ಸಮೀಕ್ಷೆ ಮಾಡುವಾಗ ರೈತರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕು ಎಂದು ಅಧ್ಯಕ್ಷ ಎಸ್.ಪಿ.ಪೊನ್ನಪ್ಪ ಹೇಳಿದರು. ಲೋಕೋಪಯೋಗಿ ಇಲಾಖೆ, ಸಾಮಾಜಿಕ ಅರಣ್ಯ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಗೋವಿಂದರಾಜ್, ಕಾರ್ಯದರ್ಶಿ ಎಂ.ಪಿ.ರವಿ, ಖಜಾಂಚಿ ಯಡವನಾಡು ರಮೇಶ್, ಪದಾಧಿಕಾರಿಗಳಾದ ಮನುಮೇದಪ್ಪ, ಎಚ್.ಕೆ.ರಘು, ಪರಮೇಶ್, ಜೋಯಪ್ಪ, ಕಾಳಪ್ಪ, ಕೃಷಿ ಅಧಿಕಾರಿ ಡಾ.ಮುಕುಂದ ಇದ್ದರು.