ಕಾಫಿ ಬೆಳೆಗಾರರ ನಿರ್ಲಕ್ಷ್ಯ: ಬಿಜೆಪಿ ಪ್ರಮುಖ, ಜಿ.ಪಂ ಸದಸ್ಯ ವಿಜು ಸುಬ್ರಮಣಿ ಬೇಸರ

August 30, 2020

ಪೊನ್ನಂಪೇಟೆ, ಆ.30: ದೇಶದ ಕಾಫಿ ಉದ್ಯಮದ ಆರ್ಥಿಕತೆಗೆ ಬೆನ್ನೆಲುಬಾಗಿ ನಿರಂತರ ಕೊಡುಗೆ ನೀಡಿರುವ ಕೊಡಗಿನ ಕಾಫಿ ಬೆಳೆಗಾರರನ್ನು ನಿರ್ಲಕ್ಷಿಸುವ ಕೆಲವು ಅಧಿಕಾರಿಗಳ ಮನೋಸ್ಥಿತಿ ಖಂಡನಿಯ. ಯಾವುದೇ ಕಾರಣಕ್ಕೂ ಕಾಫಿ ಬೆಳೆಗಾರರನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಜಿಲ್ಲಾ ಪಂಚಾಯಿತಿಯ ಹಿರಿಯ ಸದಸ್ಯರಾದ ಮೂಕೊಂಡ ವಿಜು ಸುಬ್ರಮಣಿ ಅವರು ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಭಾರತ ದೇಶದಲ್ಲೇ ಕಾಫಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕೊಡಗು ಜಿಲ್ಲೆ ಇದೀಗ ಕೊರೋನ ಸಾಂಕ್ರಾಮಿಕ ಸೋಂಕಿನ ಭೀತಿಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದ ಕಾಫಿ ಬೆಳೆಗಾರರು ಸಮಸ್ಯೆಯನ್ನು ಎದುರಿಸುವಂತಾಗಿದೆ. ದೇಶದ ಒಟ್ಟು ಕಾಫಿ ಉತ್ಪಾದನೆಯ ಪೈಕಿ ಶೇ.30% ರಷ್ಟು ಕೊಡುಗೆಯನ್ನು ಕೊಡಗು ಜಿಲ್ಲೆ ನೀಡುತ್ತಿದೆ ಎಂಬುದು ಹೆಗ್ಗಳಿಕೆಯಾದರೂ, ಎಲ್ಲಾ ಹಂತದಲ್ಲೂ ಕಾಫಿ ಬೆಳೆಗಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿರುವ ವಿಜು ಸುಬ್ರಮಣಿ ಅವರು, ಕಳೆದ 3ವರ್ಷಗಳಿಂದ ಜಿಲ್ಲೆಯನ್ನು ನಿರಂತರವಾಗಿ ಕಾಡುತ್ತಿರುವ ಭೂಕುಸಿತ ಮತ್ತು ತೀವ್ರ ಮಳೆ-ಗಾಳಿ ಕಾಫಿ ಬೆಳೆಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಹೇಳಿದರು.
ಪ್ರಕೃತಿ ವಿಕೋಪದ ಆತಂಕದ ನಡುವೆ ಕಾಡಾನೆ ಸೇರಿದಂತೆ ವನ್ಯಪ್ರಾಣಿಗಳ ನಿರಂತರ ಹಾವಳಿ ಕೊಡಗಿನ ಕಾಫಿ ಮತ್ತು ಭತ್ತದ ಬೆಳೆಗಾರರನ್ನು ಮತ್ತಷ್ಟು ಹೈರಾಣಾಗಿಸಿದೆ. ಕಾಫಿ ಕೃಷಿಗೆ ಅಪಾರ ಪ್ರಮಾಣದ ಮಾನವ ಸಂಪನ್ಮೂಲ ಅಗತ್ಯವಿದ್ದು,  ತೋಟಗಳಲ್ಲಿ ವರ್ಷದ ಎಲ್ಲಾ ಋತುಮಾನಗಳಲ್ಲೂ ಕೆಲಸವಿದ್ದೇ ಇರುತ್ತದೆ. ಕಾಫಿಯ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯನ್ನೇ ಸಂಪೂರ್ಣವಾಗಿ ಅವಲಂಬಿಸಿರುವುದರಿಂದ ಮಾರಾಟ ಬೆಲೆಗಳಲ್ಲಿ ಉಂಟಾಗುವ ಏರುಪೇರಿನಿಂದ ಬೆಳೆಗಾರನಿಗೆ ದೊಡ್ಡ ಆರ್ಥಿಕ ಹೊಡೆತ ಬೀಳುತ್ತದೆ ಎಂದು ತಿಳಿಸಿದ ವಿಜು ಸುಬ್ರಮಣಿ ಅವರು, ಆದರೂ ಕಾಫಿ ಬೆಳೆಗಾರರ ಪುನಶ್ಚೇತನಕ್ಕಾಗಿ ನಿರೀಕ್ಷಿತ ಯೋಜನೆಗಳು ಜಾರಿಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಕಾಫಿ ತೋಟವೊಂದರ ನಿರ್ವಹಣಾ ವೆಚ್ಚವು ಮಿತಿ ಮೀರಿ ಏರಿಕೆಯಾಗುತ್ತಿದೆ. ಆದರೆ ಜಿಲ್ಲೆಯ ಪ್ರಮುಖ ಬೆಳೆಯಾದ ಕಾಫಿಯ ಬೆಲೆ ಮಾತ್ರ ಹಲವು ವರ್ಷಗಳಿಂದ ಏರಿಕೆಯನ್ನೇ ಕಂಡಿಲ್ಲ. ಇದರಿಂದ ಕಾಫಿ ಬೆಳೆಗಾರರು ತಮ್ಮ ತೋಟಗಳನ್ನು ಮುಂದಿನ ದಿನಗಳಲ್ಲಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ನಡುವೆ ಕಂದಾಯ ಇಲಾಖೆಯಲ್ಲಿ ಕಾಫಿ ಬೆಳೆಗಾರರ ಯಾವುದೇ ಸರಕಾರಿ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಕಂದಾಯ ಇಲಾಖೆಯ ಸಿಬ್ಬಂದಿಗಳು ಸರಿಯಾಗಿ ಜವಾಬ್ದಾರಿ ನಿರ್ವಹಿಸದೆ ಕಾಫಿ ಬೆಳೆಗಾರರನ್ನು ಕಚೇರಿಗಳಿಗೆ ಅಲೆಯುವಂತೆ ಮಾಡುತ್ತಿದ್ದಾರೆ. ಸೂಕ್ತ ದಾಖಲೆಗಳಿದ್ದರೂ  ಅನಗತ್ಯ ಕಾರಣಗಳ ನೆಪವೊಡ್ಡಿ ಕಂದಾಯ ಇಲಾಖೆಯ ಅಧಿಕಾರಿಗಳು ಬೆಳೆಗಾರರನ್ನು ಶೋಷಿಸುತ್ತಿದ್ದಾರೆ. ಜೊತೆಗೆ ತಾಂತ್ರಿಕ ಮಾರ್ಗದರ್ಶನ ನೀಡಬೇಕಾದ ಕಾಫಿ ಮಂಡಳಿ ಕೂಡ ಬೆಳೆಗಾರರಿಗಾಗಿ ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಇಂದು ಯಾವುದೇ ಇಲಾಖೆಗಳಲ್ಲಿ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಬೆಳೆಗಾರರ ಕೆಲಸವನ್ನು ನಿಗದಿತ ಸಮಯದಲ್ಲಿ ಮಾಡುತ್ತಿಲ್ಲ. ಇದರಿಂದ ಬಡ ರೈತನ ಕೆಲಸವು ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ಇದೀಗ ಸರಕಾರ ತನ್ನ ಹಲವು ಯೋಜನೆಗಳಿಗೆ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿದ್ದು,  ಮೊದಲೇ ಕೊಡಗು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಸರಿಯಾದ ಮೊಬೈಲ್ ನೆಟ್ವರ್ಕ್ ದೊರೆಯದೆ ವಿವಿಧ ಯೋಜನೆಗಳ ಮಾಹಿತಿಗಳನ್ನು ಮೊಬೈಲ್ ನಲ್ಲಿ ಅಪ್ಲೋಡ್ ಮಾಡಲು ಸಾಧ್ಯವಾಗದ ಹತಾಶೆಯಲ್ಲಿ ಕೊಡಗಿನ ರೈತರಿದ್ದಾರೆ ಎಂದು ಸಮಸ್ಯೆ ವಿವರಿಸಿರುವ ವಿಜು ಸುಬ್ರಮಣಿ ಅವರು, ಕಂದಾಯ ಇಲಾಖೆಯ ಅಧಿಕಾರಿಗಳು ಆಯಾ ಗ್ರಾಮಗಳ ಕಾಫಿ ತೋಟಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳದಲ್ಲೇ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಾಫಿ ಬೆಳೆಗಾರರ ಸಮಸ್ಯೆಯನ್ನು ಕಂದಾಯ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲಾಧಿಕಾರಿಗಳು ಕೂಡ ಈ ಕುರಿತು ವಿಶೇಷ ಗಮನ ಹರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿರುವ ವಿಜು ಸುಬ್ರಮಣಿ ಅವರು, ಕಾಫಿ ಬೆಳೆಗಾರರ ನಿರ್ಲಕ್ಷ ಮುಂದುವರಿದರೆ ಹೋರಾಟದ ಮಾರ್ಗ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರಲ್ಲದೆ, ನಿಗದಿತ ಅವಧಿಯಲ್ಲಿ ಬೆಳೆಗಾರರ ಸಮಸ್ಯೆ ಪರಿಹರಿಸಲು ಕಾಫಿ ಮಂಡಳಿ ಕೂಡ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಕಾನೂನುಬದ್ಧವಾದ ಕೊಡಗಿನ ಟಿಂಬರ್ ಉದ್ಯಮ ಸರ್ಕಾರಕ್ಕೆ ಅಪಾರ ಪ್ರಮಾಣದ ತೆರಿಗೆ ಸಂಗ್ರಹವಾಗುವ ಪ್ರಮುಖ ಮೂಲವಾಗಿದೆ. ವ್ಯಾಪಾರಸ್ಥರ, ಮರ ಕಾರ್ಮಿಕರ ಕುಟುಂಬ ಸೇರಿದಂತೆ ಕೊಡಗಿನಲ್ಲಿ 10 ಸಾವಿರ ಜನರು ಈ ಉದ್ಯಮವನ್ನು ಬದುಕಿಗಾಗಿ ಅವಲಂಬಿಸಿದ್ದಾರೆ. ಇದೀಗ ಮಳೆಗಾಲ ಕೊನೆಗೊಂಡರೂ ಟಿಂಬರ್ ಸಾಗಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡುತ್ತಿಲ್ಲ. ಮೊದಲೇ ಸಾಲದ ಹೊರೆಯಿಂದ ತತ್ತರಿಸಿರುವ ಈ ಉದ್ಯಮ ತೀವ್ರ ಸಂಕಷ್ಟವನ್ನು ಎದುರಿಸುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೊಡಗಿನಿಂದ ಟಿಂಬರ್ ಸಾಗಾಟಕ್ಕೆ ಕೂಡಲೇ ಅನುಮತಿ ನೀಡಿ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ವಿಜು ಸುಬ್ರಮಣಿ ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.