ವನ್ಯಜೀವಿ ಉಪಟಳದ ವಿರುದ್ಧ ಕ್ರಮಕ್ಕೆ ಒತ್ತಾಯ

01/09/2020

ಮಡಿಕೇರಿ ಆ.31 : ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಭೂ ಕಾಯ್ದೆ ತಿದ್ದುಪಡಿ ಆದೇಶ ಕೊಡಗಿನ ರೈತರಿಗೆ ಮಾರಕವಾಗಿದ್ದು, ಇದನ್ನು ತಕ್ಷಣ ರದ್ದುಪಡಿಸಬೇಕು ಮತ್ತು ವನ್ಯಜೀವಿ ಉಪಟಳದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಮ್ಮತ್ತಿ ರೈತ ಸಂಘ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕಾವಡಿಚಂಡ ಯು.ಗಣಪತಿ, ಕೊಡಗಿನ ರೈತರು ಹಾಗೂ ಬೆಳೆಗಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದೀಗ ಭೂ ತಿದ್ದುಪಡಿ ಕಾಯ್ದೆಯಿಂದ ಮತ್ತೊಂದು ಆತಂಕವನ್ನು ಎದುರಿಸುವ ಎಲ್ಲಾ ಸಾಧ್ಯತೆಗಳಿದೆ. ಸರ್ಕಾರ ತಕ್ಷಣ ಈ ಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಜಿಲ್ಲೆಯ ಶಾಸಕರುಗಳು ನಿರಂತರವಾಗಿ ಗೆದ್ದು ಬರುತ್ತಿದ್ದರು ಅವರಿಗೆ ಸಚಿವ ಸ್ಥಾನ ದೊರೆಯದೆ ಹೊರ ಜಿಲ್ಲೆಯವರು ಜಿಲ್ಲಾ ಉಸ್ತುವಾರಿ ಸಚಿವರುಗಳಾಗುತ್ತಿದ್ದಾರೆ. ಈ ಕಾರಣದಿಂದಲೇ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು. ಬಿಜೆಪಿಯ ಶಾಸಕರುಗಳನ್ನು ಜಿಲ್ಲೆಯ ಜನ ಗೆಲ್ಲಿಸುತ್ತಲೇ ಬರುತ್ತಿದ್ದಾರೆ. ಆದರೆ, ಸಚಿವ ಸಂಪುಟ ರಚನೆಯ ಸಂದರ್ಭ ಕೇಂದ್ರದ ನಾಯಕರುಗಳು ಹಾಗೂ ಸಂಘ ಪರಿವಾರದವರು ಹಸ್ತಕ್ಷೇಪ ಮಾಡಿ ಜಿಲ್ಲೆಯ ಶಾಸಕರುಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಇತ್ತೀಚೆಗೆ ಕಂದಾಯ ಇಲಾಖೆ ಬೆಳೆÉ ಸಮೀಕ್ಷೆಯನ್ನು ರೈತರೆ ಮಾಡಬೇಕೆಂದು ತಿಳಿಸಿದ್ದು, ಇದು ಹಾಸ್ಯಾಸ್ಪದ ಆದೇಶವಾಗಿದೆ. ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದು, ಬಹುತೇಕ ರೈತರು ಮೊಬೈಲ್ ಫೋನ್‍ನ ಬಳಕೆಯನ್ನು ತಿಳಿಯದ ಮುಗ್ದರಾಗಿದ್ದಾರೆ. ಆದ್ದರಿಂದ ಕಂದಾಯ ಇಲಾಖೆಯ ಮೂಲಕವೇ ಬೆಳೆ ಸಮೀಕ್ಷೆ ಆಗಬೇಕೆಂದು ಗಣಪತಿ ಒತ್ತಾಯಿಸಿದರು.
ವಿದ್ಯುತ್ ಇಲಾಖೆಯಿಂದ ಜಿಲ್ಲೆಯ ರೈತರು ಹಾಗೂ ಬೆಳೆಗಾರರಿಗೆ ತೊಂದರೆಯಾಗುತ್ತಿದೆ. ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಯಂತೆ ಕೃಷಿಗೆ 10 ಹೆಚ್.ಪಿ. ಮೋಟಾರ್‍ವರೆಗೆ ಶುಲ್ಕ ವಿನಾಯ್ತಿ ನೀಡಬೇಕು. ಇಷ್ಟು ವಿದ್ಯುತ್ತನ್ನು ಬಳಸದಿದ್ದರು ಮಾಸಿಕ 250 ರಿಂದ 500 ರೂ. ವರೆಗೆ ಬರುತ್ತಿರುವ ಬಿಲ್ಲನ್ನು ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ. ಅಲ್ಲದೆ ಗೃಹ ಬಳಕೆಯ ವಿದ್ಯುತ್‍ಗೂ ದುಪ್ಪಟ್ಟು ಶುಲ್ಕವನ್ನು ವಿಧಿಸಲಾಗುತ್ತಿದೆ ಎಂದು ಗಣಪತಿ ಅಸಮಾಧಾನ ವ್ಯಕ್ತಪಡಿಸಿದರು.
::: ಕಾಡು ಹಂದಿಗೆ ಗುಂಡು :::
ಕಳೆದ ನಾಲ್ಕೈದು ವರ್ಷಗಳಿಂದ ಕೊಡಗು ಜಿಲ್ಲೆಯಾದ್ಯಂತ ವನ್ಯಜೀವಿಗಳ ಉಪಟಳ ಮಿತಿ ಮೀರಿದ್ದು, ಗ್ರಾಮಸ್ಥರು, ರೈತರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಆತಂಕದಲ್ಲೆ ದಿನ ದೂಡುವ ಪರಿಸ್ಥಿತಿ ಇದೆ. ಹಲವು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಕ್ರಮಕ್ಕಾಗಿ ಒತ್ತಾಯಿಸಿ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಕಾಡು ಹಂದಿಗಳ ಹಾವಳಿಯೂ ಹೆಚ್ಚಾಗಿದ್ದು, ತೋಟದಲ್ಲಿ ಬೆಳೆದ ಗೆಡ್ಡೆ ಗೆಣಸುಗಳನ್ನು ನಾಶ ಪಡಿಸುತ್ತಿವೆ. ಅಲ್ಲದೆ, ಕೆಲವೇ ತಿಂಗಳಲ್ಲಿ ಕಟಾವಿಗೆ ಬರಬಹುದಾದ ಭತ್ತದ ಗದ್ದೆಗೂ ದಾಳಿ ಇಡುತ್ತಿರುವ ಹಂದಿಗಳು ಕೃಷಿಯನ್ನು ಸಂಪೂರ್ಣವಾಗಿ ಹಾನಿ ಮಾಡುತ್ತಿವೆ. ಆದ್ದರಿಂದ ಕಾಡು ಹಂದಿಗಳಿಗೆ ಗುಂಡು ಹೊಡೆಯಲು ಅನುಮತಿ ನೀಡಬೇಕೆಂದು ಗಣಪತಿ ಮನವಿ ಮಾಡಿದರು.
ದಕ್ಷಿಣ ಕೊಡಗಿನಲ್ಲಿ ಹುಲಿ ಮತ್ತು ಚಿರತೆಗಳ ಹಾವಳಿ ನಿರಂತರವಾಗಿದ್ದು, ತಕ್ಷಣ ಅರÀಣ್ಯ ಇಲಾಖೆÉ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ತಪ್ಪಿದಲ್ಲಿ ಕೊಡಗಿನ ರೈತರನ್ನು ಒಗ್ಗೂಡಿಸಿ ತೀವ್ರ ರೀತಿಯ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಗಣಪತಿ ಎಚ್ಚರಿಕೆ ನೀಡಿದರು.
ಸಂಘದ ಸಂಚಾಲಕ ಕೇಚಂಡ ಕುಶಾಲಪ್ಪ ಮಾತನಾಡಿ, ಸರ್ಕಾರಗಳು ಮೊದಲು ರೈತರ ಹಿತವನ್ನು ಕಾಯಲಿ ಎಂದು ಒತ್ತಾಯಿಸಿದರು. ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಪ್ರಾಣಿಗಳಿಗೆ ಬೆಲೆ ಇದೆಯೇ ಹೊರತು ಮನುಷ್ಯರಿಗೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಮನೆಯಪಂಡ ಜಿ.ಪೊನ್ನಪ್ಪ, ಸದಸ್ಯರುಗಳಾದ ಮಾಚಿಮಂಡ ಸುರೇಶ್ ಅಯ್ಯಪ್ಪ ಹಾಗೂ ಪಳೆಯತಂಡ ಹರಿ ಉಪಸ್ಥಿತರಿದ್ದರು.