ಸೆ.5 ರಂದು ವಿರಾಜಪೇಟೆಯಲ್ಲಿ ರಕ್ತದಾನ ಶಿಬಿರ

01/09/2020

ಮಡಿಕೇರಿ ಆ.31 : ಕೊಡಗು ಬ್ಲಡ್ ಡೋನರ್ಸ್ ಮತ್ತು ಶಿವರಾಮೇಗೌಡರ ಬಣದ ಸಂಯುಕ್ತಾಶ್ರಯದಲ್ಲಿ ಸೆ.5 ರಂದು ವಿರಾಜಪೇಟೆಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್, ಅಂದು ಬೆಳಗ್ಗೆ 10 ಗಂಟೆಗೆ ವಿರಾಜಪೇಟೆ ದೊಡ್ಡಟ್ಟಿ ಚೌಕಿಯ ಶ್ರೀಕೃಷ್ಣ ಕಂಫÀಟ್ರ್ಸ್ ಸಭಾಂಗಣದಲ್ಲಿ ಶಿಬಿರ ನಡೆಯಲಿದೆ ಎಂದರು.
ಕೋವಿಡ್ ಆತಂಕದಿಂದ ರಕ್ತದಾನ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು, ಜಿಲ್ಲೆಯ ರಕ್ತ ನಿಧಿ ಕೇಂದ್ರ್ರದಲ್ಲಿ ರಕ್ತದ ಕೊರತೆ ಎದುರಾಗಿದೆ. ಆದ್ದರಿಂದ ಯಾರೂ ಯಾವುದೇ ಆತಂಕಕ್ಕೆ ಒಳಗಾಗದೆ ರಕ್ತದಾನ ಮಾಡಿ ಜೀವಗಳನ್ನು ಉಳಿಸುವಂತೆ ಮನವಿ ಮಾಡಿದರು. ಜ್ವರ, ಕೆಮ್ಮು, ಶೀತ ಇರುವ ರಕ್ತದಾನಿಗಳು ಶಿಬಿರಕ್ಕೆ ಬರುವುದು ಬೇಡವೆಂದು ತಿಳಿಸಿದರು.
ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಕಾರ್ಯದರ್ಶಿ ಮೈಕೆಲ್ ವೇಗಸ್, ಸಂಸ್ಥೆಯು ಕಳೆÀದ ಒಂದೂವರೆ ವರ್ಷದಿಂದ ವಾಟ್ಸ್ ಅಪ್ ಗ್ರೂಪ್‍ಗಳ ಮೂಲಕವೇ ರಕ್ತದಾನಿಗಳನ್ನು ಕಲೆ ಹಾಕುವ ಕೆಲಸ ಮಾಡಿ ಅನೇಕ ಜೀವಗಳನ್ನು ಉಳಿಸುವ ಪ್ರಯತ್ನ ಮಾಡಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲೆ ಮಾತ್ರವಲ್ಲದೆ ದಕ್ಷಿಣ ಕನ್ನಡ, ಮೈಸೂರು, ಉತ್ತರ ಕನ್ನಡ ಸೇರಿದಂತೆ ಇತರ ಜಿಲ್ಲೆಗಳ ರಕ್ತದಾನಿಗಳನ್ನು ಕೂಡ ಸಂಪರ್ಕಿಸಿ ರಕ್ತ ಪೂರೈಸುವ ಕಾರ್ಯ ಮಾಡಲಾಗುತ್ತಿದೆ. ಒಂದು ಸಾವಿರಕ್ಕು ಅಧಿಕ ರಕ್ತ ದಾನಿಗಳ ಸಂಪರ್ಕ ಸಂಸ್ಥೆಗೆ ಇದ್ದು, ಸಂಸ್ಥೆಯ ಕಾರ್ಯಕ್ಕೆ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದರು.
ಸಹ ಕಾರ್ಯದರ್ಶಿ ಪಿ.ಪಿ.ಸುಕುಮಾರ್ ಮಾತನಾಡಿ, ವಿರಾಜಪೇಟೆ ಠಾಣಾಧಿಕಾರಿ ಹೆಚ್.ಎಸ್.ಬೋಜಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ತಹಶೀಲ್ದಾರ್ ಕೆ.ಎಸ್. ನಂದೀಶ್ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ ಎಂದರು.
ರಕ್ಷಣಾ ವೇದಿಕೆಯ ಸದಸ್ಯರು ಸೇರಿದಂತೆ ಸಾರ್ವಜನಿಕರು ಕೂಡ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬಹುದಾಗಿದೆ. ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ತಮ್ಮ ಹೆಸರನ್ನು ಈ ಕೆಳಕಂಡ ಮೊಬೈಲ್ ಸಂಖ್ಯೆಗಳ ಮೂಲಕ ನೋಂದಾಯಿಸಿಕೊಳ್ಳುವುದು ಕಡ್ಡಾಯವೆಂದು ತಿಳಿಸಿದರು. ಮೊಬೈಲ್ ಸಂಖ್ಯೆಗಳು- 9740797394, 9036999959, 9731898768.
ಸುದ್ದಿಗೋಷ್ಠಿಯಲ್ಲಿ ಬ್ಲಡ್ ಡೋನರ್ಸ್ ಸಂಸ್ಥೆಯ ಅಧ್ಯಕ್ಷ ಹೆಚ್.ಆರ್.ವಿನು, ರಕ್ಷಣಾ ವೇದಿಕೆಯ ವಿರಾಜಪೇಟೆ ನಗರ ಘಟಕದ ಉಪಾಧ್ಯಕ್ಷ ಫೈಝಲ್ ಹಾಗೂ ಕಾರ್ಯದರ್ಶಿ ಅವಿನಾಶ್ ರವೀಂದ್ರ ಉಪಸ್ಥಿತರಿದ್ದರು.