ತಿತಿಮತಿ ಹಾಡಿಯಲ್ಲಿ ದಿನಸಿ ಕಿಟ್ ವಿತರಣೆ : ಅರಣ್ಯ ಹಕ್ಕು ಕಾಯ್ದೆ ಕೊಡಗಿನಲ್ಲಿ ಅನುಷ್ಠಾನವಾಗುತ್ತಿಲ್ಲ : ಅರುಣ್ ಮಾಚಯ್ಯ

01/09/2020

ಪೊನ್ನಂಪೇಟೆ ಆ.31: ಅರಣ್ಯವಾಸಿಗಳಿಗೆ ಗೌರವದ ಬದುಕು ಕಟ್ಟಿಕೊಡುವ ಉದ್ದೇಶದಿಂದ ಮನಮೋಹನ್ ಸಿಂಗ್ ನೇತೃತ್ವದ ಅಂದಿನ ಕೇಂದ್ರ ಸರಕಾರ ಜಾರಿಗೆ ತಂದ ‘ಪರಿಶಿಷ್ಟ ಪಂಗಡ ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ ಕಾಯ್ದೆ-2006’ ಎಂಬ ಅರಣ್ಯ ಶಾಸನ ಕೊಡಗಿನಲ್ಲಿ ಅನುಷ್ಠಾನವಾಗುತ್ತಿಲ್ಲ ಎಂದು ಆರೋಪಿಸಿರುವ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಸಿ.ಎಸ್. ಅರುಣ್ ಮಾಚಯ್ಯ ಅವರು, ಈ ಅನ್ಯಾಯವನ್ನು ಪ್ರಶ್ನಿಸಿ ಗಿರಿಜನರಿಗೆ ನ್ಯಾಯ ಒದಗಿಸಬೇಕಾಗಿದ್ದ ಜನಪ್ರತಿನಿಧಿಗಳು ಇದೀಗ ಮೌನವಹಿಸಿರುವುದು ಜಿಲ್ಲೆಯ ಘೋರ ದುರಂತ ಎಂದು ಕಿಡಿಕಾರಿದ್ದಾರೆ.

‘ದಿ.ಎ.ಕೆ.ಸುಬ್ಬಯ್ಯನವರ ಮೊದಲ ವರ್ಷದ ಪುಣ್ಯಸ್ಮರಣೆ’ಯ ಅಂಗವಾಗಿ ಎ.ಕೆ.ಸುಬ್ಬಯ್ಯ-ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ತಿತಿಮತಿ ಸಮೀಪದ ಬಂಬುಕಾಡು ಗಿರಿಜನ ಹಾಡಿಯಲ್ಲಿ ನಡೆದ ದಿನಸಿ ಕಿಟ್ ಗಳ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಿರಿಜನರ ವಿರುದ್ಧ ಜಿಲ್ಲೆಯಲ್ಲಿ ಬಹುದೊಡ್ಡ ಷಡ್ಯಂತರ ಹಿಂದಿನಿಂದಲೂ ನಡೆಯುತ್ತಿದೆ. ಕೆಲ ಹಿರಿಯ ಅರಣ್ಯಾಧಿಕಾರಿಗಳು ಕೂಡ ಇದಕ್ಕೆ ಕೈಜೋಡಿಸಿದ್ದಾರೆ. ಇದರ ವಿರುದ್ಧ ಅಧಿಕಾರಿಗಳ ಚಳಿ ಬಿಡಿಸಿಬೇಕಾಗಿದ್ದ ಶಾಸಕರು ಮತ್ತು ಸಂಸದರು ಗಿರಿಜನರಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಗಿರಿಜನರು ಜಿಲ್ಲೆಯ ಸಂಪತ್ತು. ಇವರನ್ನು ಹೊರತುಪಡಿಸಿದ ಕೊಡಗನ್ನು ಊಹಿಸಲು ಕೂಡ ಸಾಧ್ಯವಿಲ್ಲ. ಆದರೆ ಅವರು ತಲೆತಲಾಂತರದಿಂದ ಪಾರಂಪರಿಕ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಗಿರಿಜನರಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದಲೇ ಅರಣ್ಯ ಹಕ್ಕು ಕಾಯ್ದೆ ಜಾರಿಗೊಂಡರೂ ಕೊಡಗಿನಲ್ಲಿ ಅದು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಕಾಡಿನಂಚಿನಲ್ಲಿ ವಾಸಿಸುವ ಗಿರಿಜನರ ಭೂಮಿಯನ್ನು ಸಕ್ರಮ ಮಾಡಿ ಅವರಿಗೆ ಅಲ್ಲೇ ಪುನರ್ವಸತಿ ಕಲ್ಪಿಸಬೇಕು ಎಂಬ ಕಾನೂನಿದ್ದರೂ ಅದು ಕೊಡಗಿನ ಗಿರಿಜನರಿಗೆ ಮರೀಚಿಕೆಯಾಗಿದೆ ಎಂದು ಹೇಳಿದ ಅರುಣ್ ಮಾಚಯ್ಯ ಅವರು, ಈ ಕಾಯ್ದೆ ಜಾರಿಗೆ ಬಂದು 13 ವರ್ಷ ಕಳೆದರೂ ಅದರ ಪ್ರಯೋಜನ ಕೊಡಗಿನ ಗಿರಿಜನರಿಗೆ ಇದುವರೆಗೂ ದೊರೆತಿಲ್ಲ. ಈ ಕಾಯಿದೆ ಅನುಷ್ಠಾನವಾಗಿದ್ದರೆ ಗಿರಿಜನರನ್ನು ಇಲ್ಲಿಂದ ಏಕೆ ಸ್ಥಳಾಂತರಿಸಲಾಯಿತು? ಅವರಿಗೆ ಕೊಡಗಿನಲ್ಲೇ ಏಕೆ ಪುನರ್ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಕಣ್ಣ ಮುಂದೆ ಇದೆಲ್ಲ ನಡೆಯುತ್ತಿದ್ದರೂ ಈ ಕುರಿತು ಸ್ಥಳೀಯ ಶಾಸಕರ ನಿಲುವೇನು ಎಂದು ಕೇಳಿದ್ದಾರೆ.

ತಿತಿಮತಿ ಸಮೀಪದ ದೇವಮಚ್ಚಿಯಿಂದ ಚೊಟ್ಟೆಪಾರೆ ಗಿರಿಜನ ಹಾಡಿಯವರೆಗೆ ಸುಮಾರು 174 ಕುಟುಂಬಗಳಿಗೆ ಅರಣ್ಯ ಹಕ್ಕು ಕಾಯ್ದೆಯಂತೆ ಅವರ ಭೂಮಿ ಮಂಜೂರಾತಿ ಕಡತಕ್ಕೆ ಅಂದಿನ ಕೇಂದ್ರ ಸರಕಾರ ಅನುಮೋದನೆ ನೀಡಿ ರಾಜ್ಯ ಸರಕಾರದ ವರದಿ ಕೇಳಿತು. ಆದರೆ ಕೆಲ ಭ್ರಷ್ಟ ಅರಣ್ಯ ಅಧಿಕಾರಿಗಳು ಇದಕ್ಕೆ ಅಡ್ಡಗಾಲು ಹಾಕಿದರು. ಅವರನ್ನು ಪ್ರಶ್ನಿಸುವ ಎದೆಗಾರಿಕೆ ಜನಪ್ರತಿನಿಧಿಗಳಿಗೆ ಇರಲಿಲ್ಲ ಎಂದು ದೂರಿದ ಅರುಣ್ ಮಾಚಯ್ಯ ಅವರು, ಅರಣ್ಯ ಹಕ್ಕು ಕಾಯ್ದೆ ಜಾರಿಯಲ್ಲಿದ್ದರೂ ಕೊಡಗಿನ ಬಹುತೇಕ ಗಿರಿಜನರು ತಮ್ಮ ಪಾರಂಪರಿಕ ಎಲ್ಲಾ ಹಕ್ಕುಗಳಿಂದ ದೂರವಿದ್ದಾರೆ. ಈ ಕಾರಣದಿಂದ ಗಿರಿಜನರು ಇಂದಿಗೂ ತಮ್ಮ ಪ್ರದೇಶದಲ್ಲಿ ವಿದ್ಯುತ್, ಅಂಗನವಾಡಿ, ಶಾಲೆ, ಆರೋಗ್ಯ ಕೇಂದ್ರ, ಸಮುದಾಯ ಭವನ ಮೊದಲಾದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.ಅಲ್ಲದೆ, ಗಿರಿಜನರ ಸ್ಥಳಾಂತರದ ಹುನ್ನಾರ ಇನ್ನೂ ನಿಂತಿಲ್ಲ. ಈ ಕುರಿತ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದೆ. ಇದನ್ನು ಪ್ರಶ್ನಿಸುವವರು ತಮ್ಮ ಮೌನ ಮುಂದುವರಿಸಿದರೆ ಕೊಡಗು ಜಿಲ್ಲೆ ಗಿರಿಜನರಿಂದ ಮುಕ್ತವಾಗಿಬಿಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರು, ಹಿರಿಯ ವಕೀಲರಾದ ಎ. ಎಸ್. ಪೊನ್ನಣ್ಣ ಅವರು ಮಾತನಾಡಿ, ಸಮಾಜದಲ್ಲಿ ಬಡತನ ಅನುಭವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ 6 ತಿಂಗಳಿಂದ ವ್ಯಾಪಕವಾಗಿ ಕಾಡುತ್ತಿರುವ ಕೊರೋನಾ ತಲ್ಲಣ ಜನತೆಯ ಬಡತನವನ್ನು ಮತ್ತಷ್ಟು ಹೆಚ್ಚು ಮಾಡುತ್ತಿದೆ. ಅದಕ್ಕಾಗಿ ಬಡವರಿಗೆ ಸಹಾಯ ಹಸ್ತದ ಅಗತ್ಯವಿದೆ. ಇದೀಗ ತಮಗೆ ಕೊಡಗಿನಲ್ಲಿ ಬಡವರ ಸೇವೆ ಸಲ್ಲಿಸಲು ಅವಕಾಶವೊಂದು ದೊರೆತಿದ್ದು, ತಮ್ಮ ಪೋಷಕರ ಆಶಯದಂತೆ ಬಡವರಿಗೆ ಕೈಲಾದ ಸಹಾಯ ಮಾಡಲಾಗುತ್ತಿದೆ. ತಂದೆ ದಿ.ಎ.ಕೆ. ಸುಬ್ಬಯ್ಯ ಅವರ ಕರ್ಮಭೂಮಿಯಾಗಿದ್ದ ತಮ್ಮ ಮಾತೃಜಿಲ್ಲೆಯಾದ ಕೊಡಗಿನಲ್ಲಿ ಸಂಕಷ್ಟ ಅನುಭವಿಸುತ್ತಿರುವ ಕುಟುಂಬಗಳಿಗೆ ಕಿಂಚಿತ್ತಾದರೂ ಸಹಾಯ ಮಾಡಬೇಕೆಂದು ದಿನಸಿ ಕೀಟ್ ಗಳನ್ನು ವಿತರಿಸಲಾಗುತ್ತಿದೆ. ಬಡವರ ಮತ್ತು ನೊಂದವರಿಂದ ಪುಣ್ಯ ಪಡೆಯುವುದೇ ಇದರ ಉದ್ದೇಶ. ದಿನಸಿ ಕೀಟ್ ಗಳನ್ನು ಕೊಡುವುದು ಮುಖ್ಯವಲ್ಲ. ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವವರ ಹೃದಯ ವೈಶಾಲ್ಯತೆ ಮುಖ್ಯವಾಗಿದೆ. ಇದು ತಮಗೆ ಹೆಚ್ಚು ತೃಪ್ತಿ ಮೂಡಿಸಿದೆ ಎಂದರಲ್ಲದೆ, ಜನರ ಈ ರೀತಿಯ ಮನೋಭಾವ ಮುಂದೆ ಮತ್ತಷ್ಟು ಜನಪರ ಕೆಲಸಗಳನ್ನು ಮಾಡಲು ಸ್ಪೂರ್ತಿ ಒದಗಿಸುತ್ತದೆ ಎಂದು ಮುಕ್ತ ನುಡಿಗಳನ್ನಾಡಿದರು.

ಜಿ.ಪಂ.ಸದಸ್ಯರಾದ ಪಂಕಜ ಅವರು ಮಾತನಾಡಿ, ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಮತ್ತಷ್ಟು ಬಡವರನ್ನಾಗಿಸಿದ ಕೊರೋನಾ ಸಾಂಕ್ರಾಮಿಕ ಸೋಂಕು ಸರಕಾರದ ಕೃಪಾಪೋಷಿತ ಯೋಜನೆಯಾಗಿದೆ. ದೇಶದಲ್ಲಿ ಸೋಂಕು ವ್ಯಾಪಕವಾಗಿ ಹರಡಲು ಸರಕಾರದ ನಿರ್ಲಕ್ಷ್ಯವೇ ಕಾರಣ. ವಿದೇಶದಲ್ಲಿದ್ದ ಬಹಳಷ್ಟು ಸಚಿವರ ಮತ್ತು ರಾಜಕಾರಣಿಗಳ ಮಕ್ಕಳನ್ನು ಭಾರತಕ್ಕೆ ಕರೆತರುವ ಉದ್ದೇಶದಿಂದ ವಿಮಾನ ನಿಲ್ದಾಣಗಳನ್ನು ಮುಚ್ಚಲು ವಿಳಂಬ ಮಾಡಿದರು. ಇದು ಭಾರತದಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಲು ಕಾರಣವಾಯಿತು. ಕೊರೊನಾದಿಂದ ಚೈನಾ ಅನುಭವಿಸಿದ ಯಾತನೆಯಿಂದ ಭಾರತ ಪಾಠ ಕಲಿಯುವ ಅವಕಾಶವಿದ್ದರೂ, ಕೇಂದ್ರ ಸರಕಾರ ಜನರ ಹಿತ ಕಾಪಾಡಲಿಲ್ಲ. ಆದ್ದರಿಂದ ಕೊರೋನಾ ಕೇಂದ್ರ ಸರಕಾರವೇ ಆಮದು ಮಾಡಿಕೊಂಡ ಸೋಂಕು ಎಂದು ಕಿಡಿಕಾರಿದರಲ್ಲದೆ, ಗಿರಿಜನರ ಗಟ್ಟಿ ಧ್ವನಿಯಾಗಿ ಪ್ರಾಮಾಣಿಕವಾಗಿ ಹೋರಾಟ ನಡೆಸುತ್ತಿದ್ದ ಎ.ಕೆ. ಸುಬ್ಬಯ್ಯನವರ ಜನಪರ ಕಾಳಜಿಯ ಆಶಯಗಳು ನಮ್ಮ ಮುಂದಿನ ಹೋರಾಟಕ್ಕೆ ಸ್ಪೂರ್ತಿಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಕೆಎಸ್ ಅವರ ಹಿರಿಯ ಪುತ್ರ ನರೇನ್ ಕಾರ್ಯಪ್ಪ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ತಿತಿಮತಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಜೆ.ವಿನಯ್ ಕುಮಾರ್, ತಿತಿಮತಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಕುಮಾರ್, ತಿತಿಮತಿ ವಲಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ನವೀನ್, ಕಾಂಗ್ರೆಸ್ ಹಿರಿಯ ಮುಖಂಡರಾದ ಡಾ.ಮಧ್ಯಸ್ಥ, ಪಕ್ಷದ ಪ್ರಮುಖರಾದ ವಿ.ಎಸ್. ಸತೀಶ್, ಮುಕ್ಕಾಟೀರ ಸಂದೀಪ್, ಕಡೇಮಾಡ ಕುಸುಮ ಜೋಯಪ್ಪ, ಎ.ಜೆ.ಬಾಬು, ಜಮ್ಮಡ ಸೋಮಣ್ಣ, ವಕೀಲ ಎಂ.ಎ. ಸಮೀರ್, ಆಲೀರ ಸಾದಲಿ, ಕೇಚಮಾಡ ಶಿವ ನಾಚಪ್ಪ, ಅಜ್ಜಿಕುಟ್ಟೀರ ಗಿರೀಶ್, ಪ್ರಶಾಂತ್, ಗಿರಿಜನ ಮುಖಂಡರಾದ ಚುಬ್ರು, ರಾಮು, ವಿರಾಜಪೇಟೆ ತಾಲೂಕು ಸ್ತ್ರೀಶಕ್ತಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ರಜಿನಿ ಮೊದಲಾದವರು ಪಾಲ್ಗೊಂಡಿದ್ದರು. ಜೆ.ರಾಮು ಸ್ವಾಗತಿಸಿದರು, ಮುಸ್ತಫ ವಂದಿಸಿದರು.

ಕಾರ್ಯಕ್ರಮದಲ್ಲಿ ತಿತಿಮತಿಯ ಸುತ್ತಮುತ್ತಲಿನ ವಿವಿಧ ಹಾಡಿಗಳ 200ಕ್ಕೂ ಹೆಚ್ಚು ಗಿರಿಜನರಿಗೆ ಮತ್ತು ತಿತಿಮತಿ ವ್ಯಾಪ್ತಿಯ ವಿವಿಧ ವರ್ಗದ ಬಡಜನತೆಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.