ಮಾಜಿ ರಾಷ್ಟ್ರಪತಿ ಪ್ರಣಬ್ ರಿಗೆ ಜಿಲ್ಲಾ ಕಾಂಗ್ರೆಸ್ ನಿಂದ ಶ್ರದ್ಧಾಂಜಲಿ

01/09/2020

ಮಡಿಕೇರಿ ಸೆ.1 : ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ರಾಷ್ಟ್ರಪತಿ ದಿ.ಪ್ರಣಬ್ ಮುಖರ್ಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಪ್ರಣಬ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಪ್ರಣಬ್ ಮುಖರ್ಜಿ ಅವರು ಸ್ವಾತಂತ್ರ್ಯ ಹೋರಾಟವನ್ನು ಬಾಲ್ಯದಲ್ಲಿ ಕಂಡವರು. ಸಣ್ಣ ವಯಸ್ಸಿನಲ್ಲೇ ಜನಪ್ರತಿನಿಧಿಯಾಗಿ ರಾಜಕೀಯ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿದ್ದವರು ಎಂದು ಬಣ್ಣಿಸಿದರು.
ತಾವು ಸಚಿವರಾಗಿದ್ದ ಅವಧಿಯಲ್ಲಿ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಖರ್ಜಿ ಅವರು ಶಿಕ್ಷಕರಾಗಿ, ವಕೀಲರಾಗಿ, ಅಂಚೆ ಇಲಾಖೆ ನೌಕರರಾಗಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದು, ದೇಶದ ಇತಿಹಾಸದ ಪುಟದಲ್ಲಿ ಉಳಿದುಕೊಂಡಿದ್ದಾರೆ ಎಂದರು.
ಪ್ರಣಬ್ ಅವರ ನಾಯಕತ್ವದ ಗುಣಗಳನ್ನು ಕಾಂಗ್ರೆಸ್‍ನ ಪ್ರತಿಯೊಬ್ಬ ಕಾರ್ಯಕರ್ತ ಮೈಗೂಡಿಸಿಕೊಳ್ಳಬೇಕೆಂದು ಮಂಜುನಾಥ್ ಕುಮಾರ್ ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಮಾತನಾಡಿ, ಪ್ರಣಬ್ ಮುಖರ್ಜಿ ಅವರು ಕಾಂಗ್ರೆಸ್ ಪಕ್ಷದ ಧೀಮಂತ ನಾಯಕರಾಗಿದ್ದರು. ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ದೇಶದ ಬಲವನ್ನು ಹೆಚ್ಚಿಸಿದ ವ್ಯಕ್ತಿಯಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಈ ದೇಶಕ್ಕೆ ಅವರು ನೀಡಿದ ಕೊಡುಗೆ ದೊಡ್ಡದು ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಟಿ.ಪಿ.ರಮೇಶ್ ಮಾತನಾಡಿ, ರಾಷ್ಟ್ರಕಂಡ ಅಪ್ರತಿಮ ನಾಯಕ ಪ್ರಣಬ್ ಅವರು ಪ್ರಧಾನಿ ಪದವಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಮುಖ ಸ್ಥಾನಗಳನ್ನು ನಿಭಾಯಿಸಿದ್ದಾರೆ. ಪ್ರಧಾನಿ ಹುದ್ದೆ ಕೈತಪ್ಪಿದರೂ ರಾಜಕೀಯ ಆಸಕ್ತಿಯನ್ನು ಕಳೆದುಕೊಂಡಿರಲ್ಲಿಲ್ಲ. ಪಶ್ಚಿಮ ಬಂಗಾಳದಿಂದ ರಾಷ್ಟ್ರ ರಾಜಕಾರಣಕ್ಕೆ ಬಂದ, ಕೆಲವೇ ಮುತ್ಸದ್ಧಿಗಳಲ್ಲಿ ಮುಖರ್ಜಿಯೂ ಒಬ್ಬರು. ರಾಜಕೀಯ ಉತ್ತುಂಗಕ್ಕೆ ಏರಿದ ನಾಯಕರಲ್ಲಿ ಒಬ್ಬರಾಗಿದ್ದ ಪ್ರಣಬ್ ಅವರು ದೇಶದ ವಾಮನಮೂರ್ತಿ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಮುಖರಾದ ಕೆ.ಪಿ.ಚಂದ್ರಕಲಾ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಸಂಯೋಜಕ ಹೆಚ್.ಎಂ.ನಂದಕುಮಾರ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎ.ಯಾಕುಬ್, ಜಿಲ್ಲಾ ಎಸ್.ಟಿ. ಘಟಕದ ಮಾಜಿ ಅಧ್ಯಕ್ಷ ಕೆ.ಆರ್.ಚಂದ್ರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರಾ ಮೈನಾ, ಡಿಸಿಸಿ ಸದಸ್ಯ ಪುಷ್ಪ ಪೂಣಚ್ಚ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್, ಸಾಮಾಜಿಕ ಜಾಲತಾಣದ ಅಧ್ಯಕ್ಷ ಆರ್.ಪಿ.ಚಂದ್ರಶೇಖರ್, ನಗರ ಮಹಿಳಾ ಅಧ್ಯಕ್ಷರಾದ ಫ್ಯಾನ್ಸಿ ಪಾರ್ವತಿ, ಎಸ್.ಸಿ. ಘಟಕದ ಅಧ್ಯಕ್ಷ ಮುದ್ದುರಾಜು, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸದಾಮುದ್ದಪ್ಪ, ನಗರಸಭಾ ಮಾಜಿ ಸದಸ್ಯರಾದ ತಜಸ್ಸುಂ, ಪ್ರಮುಖರಾದ ಮುನೀರ್ ಮಾಚಾರ್, ಪುಲಿಯಂಡ ಜಗದೀಶ್, ಪ್ರಭುರೈ, ಉದಯಕುಮಾರ್, ಸ್ವರ್ಣಲತಾ, ಪ್ರೇಮ ಕೃಷ್ಣಪ್ಪ, ರಿಯಾಜ್, ಜುಲೇಕಾಬಿ, ಪ್ರಕಾಶ್ ಆಚಾರ್ಯ, ಚುಮ್ಮಿದೇವಯ್ಯ ಮತ್ತಿತರರು ಉಪಸ್ಥಿತರಿದ್ದರು.