ಮಳೆಹಾನಿ ಪರಿಹಾರ : ಸಾವಿರ ಕೋಟಿ ಬಿಡುಗಡೆಗೆ ಎಂಎಲ್‍ಸಿ ವೀಣಾಅಚ್ಚಯ್ಯ ಒತ್ತಾಯ

September 1, 2020

ಮಡಿಕೇರಿ ಸೆ.1 : ಪ್ರಸ್ತುತ ವರ್ಷ ಕೊಡಗು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಸುಮಾರು 5 ಸಾವಿರ ಕೋಟಿ ರೂ. ಗಳಷ್ಟು ನಷ್ಟವಾಗಿದೆ ಎಂದು ತಿಳಿದು ಬಂದಿದ್ದು, ತುರ್ತಾಗಿ ಜಿಲ್ಲೆಗೆ ಮಳೆಹಾನಿ ಪರಿಹಾರವಾಗಿ ಒಂದು ಸಾವಿರ ಕೋಟಿ ರೂ. ಗಳನ್ನು ಸರ್ಕಾರ ಬಿಡುಗಡೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಅವರು ಒತ್ತಾಯಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿರುಗಾಳಿ, ಮಳೆಯಿಂದ ಬೆಟ್ಟಗುಡ್ಡಗಳು ಕುಸಿದು ಸಾವು ನೋವುಗಳು ಸಂಭವಿಸಿದೆ. 500ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಬೆಟ್ಟ ಕುಸಿತದ ಪರಿಣಾಮ ಕಲ್ಲು, ಮಣ್ಣು, ಮರಗಳು ಕೊಚ್ಚಿ ಬಂದು ಗದ್ದೆ ಮತ್ತು ತೋಟಗಳನ್ನು ನಾಶಪಡಿಸಿವೆ. ಇನ್ನು ಮುಂದೆ ಕೃಷಿ ಕಾರ್ಯ ಮಾಡಲಾಗದಷ್ಟು ಕೃಷಿ ಭೂಮಿ ಹಾನಿಯಾಗಿದೆ. ಕಾಫಿ ತೋಟಗಳಲ್ಲಿ ಪ್ರವಾಹದ ನೀರು ಆವರಿಸಿ ಸಾಕಷ್ಟು ನಷ್ಟ ಉಂಟಾಗಿದೆ ಎಂದರು.
ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ಇದೇ ರೀತಿಯ ಸಂದಿಗ್ಧ ಪರಿಸ್ಥಿತಿ ಮುಂದುವರೆದಿದ್ದು, ರೈತರು, ಬೆಳೆಗಾರರು, ಗ್ರಾಮೀಣ ಜನರು ಸಾಕಷ್ಟು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತಾಪಿ ವರ್ಗ ಮುಂದಿನ ಜೀವನ ಹೇಗೆ ಎನ್ನುವ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಕೊಡಗು ಜಿಲ್ಲೆ ಪ್ರಾಕೃತಿಕವಾಗಿ ಇತರ ಜಿಲ್ಲೆಗಳಿಗಿಂತ ಭಿನ್ನವಾಗಿದ್ದು, ಇಲ್ಲಿನ ಕಷ್ಟ ನಷ್ಟಗಳು ನಿರೀಕ್ಷೆಗೂ ಮೀರಿದ್ದಾಗಿದೆ. ಆದ್ದರಿಂದ ತಕ್ಷಣ ಸರ್ಕಾರ 1 ಸಾವಿರ ಕೋಟಿ ರೂ. ಪರಿಹಾರವನ್ನು ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಕಳೆದ ವರ್ಷದ ಮಳೆಹಾನಿ ಪರಿಹಾರವನ್ನೇ ರಾಜ್ಯ ಸರ್ಕಾರ ಸಮರ್ಪಕವಾಗಿ ಬಿಡುಗಡೆ ಮಾಡಿಲ್ಲ. ನೊಂದ ಸಂತ್ರಸ್ತರಿಗೆ ಕನಿಷ್ಠ ಪರಿಹಾರವನ್ನು ಕೂಡ ನೀಡಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಅಧಿಕಾರದಲ್ಲಿದ್ದು, ಜಿಲ್ಲೆಯಲ್ಲಿ ಕೂಡ ಬಿಜೆಪಿ ಬೆಂಬಲಿತ ಜನಪ್ರತಿನಿಧಿಗಳೇ ಇರುವುದರಿಂದ ಹೆಚ್ಚಿನ ಮೊತ್ತದ ಪರಿಹಾರವನ್ನು ಕೊಡಗಿನ ಜನ ನಿರೀಕ್ಷಿಸುತ್ತಿದ್ದಾರೆ. ಜಿಲ್ಲೆಯ ಶಾಸಕರು ಹಾಗೂ ಸಂಸದರು ಸರ್ಕಾರದ ಮೇಲೆ ಒತ್ತಡ ಹೇರಿ ತುರ್ತಾಗಿ ಮೊದಲ ಹಂತದ ಪರಿಹಾರವನ್ನು ಬಿಡುಗಡೆ ಮಾಡಿಸಲಿ ಎಂದರು.
2018 ರಲ್ಲಿ ಅತಿವೃಷ್ಟಿ ಸಂಭವಿಸಿದಾಗ ಆಗ ಅಧಿಕಾರದಲ್ಲಿದ್ದ ಮೈತ್ರಿ ಸರ್ಕಾರ ಕಾಫಿ ತೋಟ ಮತ್ತು ಗದ್ದೆಗಳನ್ನು ಕಳೆದುಕೊಂಡವರಿಗೆ ಸುರಕ್ಷಿತವಾದ ಪರ್ಯಾಯ ಪ್ರದೇಶದಲ್ಲಿ ಜಮೀನು ನೀಡುವುದಾಗಿ ಭರವಸೆ ನೀಡಿತ್ತು. ಅಲ್ಲದೆ ವಿಶೇಷ ಅನುದಾನದ ಮೂಲಕ ಪರಿಹಾರ ಘೋಷಿಸುವ ಬಗ್ಗೆಯೂ ತಿಳಿಸಿದ್ದರು. ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಂಡ ಕಾರಣದಿಂದ ಈ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಆದರೆ ನಂತರ ಬಂದ ಬಿಜೆಪಿ ನೇತೃತ್ವದ ಸರ್ಕಾರ ಈ ಕಾರ್ಯವನ್ನು ಅನುಷ್ಠಾನಗೊಳಿಸಿ ಕೊಡಗಿನ ಜನರ ಸಂಕಷ್ಟಕ್ಕೆ ಸ್ಪಂದಿಸಬಹುದಾಗಿತ್ತು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದ್ದಾಗ ತಕ್ಷಣ ಪರಿಹಾರದ ಹಣ ಬಿಡುಗಡೆ ಮಾಡಿರುವುದಲ್ಲದೆ ಮಳೆಹಾನಿ ಸಂತ್ರಸ್ತರಿಗೆ ಕನಿಷ್ಟ 800 ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಆದರೆ ಈಗಿನ ಬಿಜೆಪಿ ನೇತೃತ್ವದ ಸರ್ಕಾರದಿಂದ ಜಿಲ್ಲೆಗೆ ಯಾವುದೇ ಲಾಭವಾಗಿಲ್ಲ. ಕಳೆದ ವರ್ಷದ ಮಳೆಹಾನಿ ಸಂತ್ರಸ್ತರಿಗೆ ಇಲ್ಲಿಯವರೆಗೆ ನಿವೇಶನ ಅಥವಾ ನೂತನ ವಸತಿ ಸೌಲಭ್ಯ ದೊರೆತ್ತಿಲ್ಲ. ತಲಾ 5 ಲಕ್ಷ ರೂಪಾಯಿಗಳಲ್ಲಿ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಇಲ್ಲಿಯವರೆಗೆ ನಿವೇಶನವನ್ನೇ ಗುರುತಿಸಿಲ್ಲ ಎಂದು ವೀಣಾಅಚ್ಚಯ್ಯ ಟೀಕಿಸಿದರು.
ನದಿ ದಡದ ಸಂತ್ರಸ್ತರಿಗಾಗಿ ಅವರೆಗುಂದ ಗ್ರಾಮದಲ್ಲಿ 3 ಎಕರೆ ಜಮೀನನ್ನು ಗುರುತಿಸಲಾಗಿತ್ತು. ಸಂತ್ರಸ್ತರು ಅಲ್ಲಿಗೆ ತೆರಳಲು ನಿರಾಕರಿಸಿದ ಹಿನ್ನೆಲೆ ಆ ಪ್ರಕರಣ ಹಾಗೇ ಉಳಿದಿತ್ತು. ಆದರೆ ಈಗ ಸಂತ್ರಸ್ತರು ತೆರಳಲು ಸಿದ್ಧರಾಗಿದ್ದರೂ ಆಡಳಿತ ವ್ಯವಸ್ಥೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಡಿಕೇರಿಯ ಚಾಮುಂಡೇಶ್ವರಿ ನಗರದ ಸಂತ್ರಸ್ತರಿಗೆ ಮನೆಗಳ ಹಂಚಿಕೆ ಸಂದರ್ಭ ತಾರತಮ್ಯ ಧೋರಣೆ ಅನುಸರಿಸಿರುವುದು ಕಂಡು ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಲಕಾವೇರಿಯಲ್ಲಿ ಭೂ ಕುಸಿತವಾದಾಗ ರಾಜ್ಯ ಕಂದಾಯ ಸಚಿವರು ಬಂದು ಹೋಗಿದ್ದಾರೆ ಅಷ್ಟೆ ಅಲ್ಲದೆ ಇಲ್ಲಿಯವರೆಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಸರ್ಕಾರದ ಪ್ರತಿನಿಧಿಗಳು ಕೊಡಗು ಜಿಲ್ಲೆಗೆ ಬಂದು ಹೋದರೆ ಸಾಲದು, ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ನೈಜ ಕಾಳಜಿಯನ್ನು ತೋರಬೇಕಾಗುತ್ತದೆ ಎಂದು ತಿಳಿಸಿದರು.
ಪ್ರತಿವರ್ಷ ಸುರಿಯುವ ಗಾಳಿ, ಮಳೆ ಅನಾಹುತದಿಂದ ರಸ್ತೆ, ತಡೆಗೋಡೆ, ಸೇತುವೆಗಳಿಗೆ ಹಾನಿಯಾಗುತ್ತಲೇ ಇದೆ. ಸರ್ಕಾರ ಎಚ್ಚೆತ್ತುಕೊಂಡು ಜನರ ಅನುಕೂಲಕ್ಕಾಗಿ ಸರ್ವಋತು ರಸ್ತೆಯನ್ನು ನಿರ್ಮಾಣ ಮಾಡಬೇಕು. ಕಳಪೆ ಕಾಮಗಾರಿಗೆ ಅವಕಾಶ ನೀಡದೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಿ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ವಾಣಿಜ್ಯ ಬೆಳೆಗಳಾದ ಕಾಫಿ, ಕರಿಮೆಣಸು ಹಾಗೂ ಏಲಕ್ಕಿ ಕೃಷಿಯಲ್ಲಿನ ನಷ್ಟಕ್ಕೆ ಕೇಂದ್ರ ಸರ್ಕಾರ ತಕ್ಷಣ ಪರಿಹಾರ ಪ್ರಕಟಿಸಬೇಕು. ಈ ವಿಚಾರದಲ್ಲಿ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಪ್ರಯತ್ನಿಸಬೇಕು ಎಂದು ವೀಣಾಅಚ್ಚಯ್ಯ ಹೇಳಿದರು.
ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ವನ್ಯ ಜೀವಿಗಳ ಹಾವಳಿಯಿಂದ ಆಗುತ್ತಿರುವ ಕಷ್ಟ ನಷ್ಟದ ಬಗ್ಗೆ ಮನವರಿಕೆ ಮಾಡಿಕೊಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಳಿಗೆ ಬೆಳೆಗಾರರ ನಿಯೋಗವನ್ನು ಕಾಂಗ್ರೆಸ್ ನೇತೃತ್ವದಲ್ಲಿ ಕರೆದೊಯ್ಯುವುದಾಗಿ ತಿಳಿಸಿದರು.
::: ಮಡಿಕೇರಿಯಲ್ಲಿ ಪಾಸಿಟಿವ್ ಮೈಸೂರಿನಲ್ಲಿ ನೆಗೆಟಿವ್ :::
ಕೋವಿಡ್ ಪ್ರಕರಣಗಳಲ್ಲಿ ಅನೇಕ ಗೊಂದಲಗಳಿದ್ದು, ಕೆಪಿಸಿಸಿಯ ಹಿರಿಯ ಉಪಾಧ್ಯಕ್ಷ ಮಿಟ್ಟುಚಂಗಪ್ಪ ಅವರಿಗೆ ಕೋವಿಡ್ ಪಾಸಿಟಿವ್ ಎಂದು ಮಡಿಕೇರಿ ಆಸ್ಪತ್ರೆಯಲ್ಲಿ ವರದಿ ನೀಡಲಾಗಿತ್ತು. ಆದರೆ ಮೈಸೂರಿನಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಎಂಎಲ್ ಸಿ ವೀಣಾಅಚ್ಚಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಂಕು ವ್ಯಾಪಿಸುವುದನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗುತ್ತಿದೆ ಎಂದು ಆರೋಪಿಸಿದರು.
ಕೋವಿಡ್ ಪ್ರಕರಣದ ವಿಚಾರದಲ್ಲಿ ಅನೇಕ ಗೊಂದಲಗಳಿದ್ದು, ಇದನ್ನು ಸರ್ಕಾರ ಬಗೆಹರಿಸಬೇಕಾಗಿದೆ. ಕೋವಿಡ್ ಸೋಂಕಿತರಿಗಾಗಿ ಖರ್ಚು ಮಾಡಲಾಗುತ್ತಿರುವ ಹಣದ ಬಗ್ಗೆ ಜಿಲ್ಲಾಡಳಿತ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು. ಸೋಂಕಿತರಿಗೆ ಮಾನಸಿಕ ಹಿಂಸೆ ನೀಡುವ ರೀತಿಯಲ್ಲಿರುವ ಕೆಲವು ನಿಯಮಗಳನ್ನು ಬದಲಾಯಿಸಬೇಕು ಎಂದರು.
ಕೊಡಗಿನ ಮುಖ್ಯ ಸಮಸ್ಯೆಗಳಾದ ರೈತರು ಬೆಳೆಯುವ ಕಾಫಿ, ಭತ್ತ ಕರಿ ಮೆಣಸು, ಅಡಿಕೆ, ಏಲಕ್ಕಿ ಮತ್ತಿತರ ಬೆಳೆಗಳಿಗೆ ಬೆಂಬಲ ಬೆಲೆ, ರಸಗೊಬ್ಬರಕ್ಕೆ ಸಹಾಯಧನ ದೊರೆಯಬೇಕು. ಬೆಳೆಗಾರರಿಗೆ ಅನುಕೂಲವಾಗುವಂತಹ ಮತ್ತು ಕಾಫಿಗೆ ಬೆಳೆಗೆ ಪೂರಕವಾದ ಯೋಜನೆಗಳನ್ನು ರೂಪಿಸಿದಲ್ಲಿ ಕಾರ್ಮಿಕ ವರ್ಗಕ್ಕೂ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ಹರಿಸಬೇಕು.
::: ಪ್ರತಾಪ್ ಸಿಂಹ ಎಲ್ಲಿದ್ದಾರೆ ? :::
ಕೊಡಗು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದ ಪ್ರತಾಪ್ ಸಿಂಹ ಅವರು ಎರಡನೇ ಬಾರಿಗೆ ಸಂಸದರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊಡಗಿನಲ್ಲಿ ದೊರೆತ ಅತ್ಯಧಿಕ ಮತಗಳಿಂದಲೇ ಗೆಲುವು ಸಾಧಿಸುತ್ತಿರುವ ಇವರು ಕೊಡಗಿಗೆ ಯಾವ ಕೊಡುಗೆಯನ್ನು ನೀಡಿದ್ದಾರೆ ಎನ್ನುವುದನ್ನು ಮೊದಲು ಬಹಿರಂಗ ಪಡಿಸಲಿ. ದಕ್ಷಿಣ ಕೊಡಗಿನ ಜನ ವನ್ಯಜೀವಿಗಳ ದಾಳಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ ಒಂದೇ ಒಂದು ದಿನ ಈ ಬಗ್ಗೆ ಕಾಳಜಿ ತೋರಿ ಕೇಂದ್ರದೊಂದಿಗೆ ವ್ಯವಹರಿಸುವ ಪ್ರಯತ್ನ ಮಾಡಿಲ್ಲ. ಗ್ರಾಮೀಣ ಜನರ, ರೈತರ ಹಾಗೂ ಬೆಳೆಗಾರರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿಲ್ಲ ಎಂದು ವೀಣಾಅಚ್ಚಯ್ಯ ಟೀಕಿಸಿದರು.
ಎರಡನೇ ಬಾರಿ ಸಂಸದರಾಗಿ ಆಯ್ಕೆಯಾದ ಸಂದರ್ಭ ಕೊಡಗಿನಲ್ಲಿ ಪ್ರತಿವಾರ ಹಾಜರಿದ್ದು ಜನರ ಸಮಸ್ಯೆಗಳನ್ನು ಆಲಿಸುವುದಾಗಿ ಮಡಿಕೇರಿಯ ಪತ್ರಿಕಾ ಭವನದಲ್ಲಿ ಭರವಸೆ ನೀಡಿದ್ದರು. ಆದರೆ ಈಗ “ಪ್ರತಾಪ್ ಸಿಂಹ” ಎಲ್ಲಿದ್ದಾರೆ ಎಂದು ಕೊಡಗಿನ ಜನ ಹುಡುಕಾಡುವ ಪರಿಸ್ಥಿತಿ ಬಂದೊದಗಿದೆ.
ನನಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ತಿಳುವಳಿಕೆ ಇಲ್ಲವೆಂದು ಈ ಹಿಂದೆ ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದರು. ಆದರೆ ಎಲ್ಲವನ್ನೂ ತಿಳಿದಿರುವ ಅವರು ಕೊಡಗಿನ ಜನತೆಗೆ ನೀಡಿರುವ ಕೊಡುಗೆಯಾದರೂ ಏನೆಂದು ಬಹಿರಂಗ ಪಡಿಸಲಿ. ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡವನ್ನು ನಿರ್ಮಿಸುವುಕ್ಕಾಗಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಈ ಕಟ್ಟಡದ ಪ್ರಗತಿ ಯಾವ ಹಂತದಲ್ಲಿದೆ ಎನ್ನುವುದನ್ನು ಮೊದಲು ತಿಳಿಸಲಿ ಎಂದು ಒತ್ತಾಯಿಸಿದರು.
ವೈಯುಕ್ತಿಕ ದೂಷಣೆ ಮಾಡುವುದನ್ನು ಸಂಸದರು ಮೊದಲು ಬಿಡಲಿ, ಹೆದ್ದಾರಿ, ರೈಲು ಮಾರ್ಗಗಳ ಯೋಜನೆಗಳಿಗೂ ಮೊದಲು ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದರು.
ಪ್ರಧಾನಿ ನರೇಂದ್ರಮೋದಿ ಅವರು ಲಾಕ್‍ಡೌನ್ ಹಾನಿಯಿಂದ ಆರ್ಥಿಕತೆಯನ್ನು ಮೇಲೆತ್ತಲು 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್‍ನ್ನು ಮೇ ತಿಂಗಳಿನಲ್ಲಿ ಘೋಷಣೆ ಮಾಡಿ ರೈತರು, ಶ್ರಮಿಕ ವರ್ಗ, ಸಣ್ಣ ಉದ್ದಿಮೆದಾರರು, ಕಾರ್ಮಿಕ ಹಾಗೂ ಮಧ್ಯಮ ವರ್ಗಕ್ಕೆ ಅನುಕೂಲ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು.
ಈ ವಿಶೇಷ ಆರ್ಥಿಕ ಪ್ಯಾಕೇಜ್ ನಿಂದ ಕೊಡಗಿನ ಎಷ್ಟು ಮಂದಿಗೆ ಲಾಭವಾಗಿದೆ ಎನ್ನುವುದನ್ನು ಸಂಸದ ಪ್ರತಾಪ್ ಸಿಂಹ ಅವರು ಮೊದಲು ಜಿಲ್ಲೆಯ ಜನರಿಗೆ ತಿಳಿಸಲಿ. ತೈಲೋತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಇದನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ ಕೇವಲ ಪ್ರಚಾರದಲ್ಲಷ್ಟೇ ಕಾಲಹರಣ ಮಾಡುತ್ತಿದೆ. ಪ್ರಧಾನಮಂತ್ರಿಗಳ ಈ ಬಾರಿಯ ಮನ್ ಕೀ ಬಾತ್ ಕಾರ್ಯಕ್ರಮವನ್ನು ಜನರು ತಿರಸ್ಕರಿಸಿದ್ದು, ಕೇಂದ್ರ ಸರ್ಕಾರದ ಆಡಳಿತ ವೈಖರಿಯಿಂದ ಜನ ಬೇಸತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ವೀಣಾಅಚ್ಚಯ್ಯ ಆರೋಪಿಸಿದರು. ಕೇವಲ ಭಾಷಣದಿಂದ ಮತ್ತು ಪ್ರಚಾರದಿಂದ ಜನಸಾಮಾನ್ಯರ ಕಷ್ಟಗಳು ಪರಿಹಾರವಾಗುವುದಿಲ್ಲವೆಂದು ತಿಳಿಸಿದರು.

::: ಬ್ರೋಕರ್ ಗಳ ಹಾವಳಿ :::
ಕಂದಾಯ ಇಲಾಖೆಗೆ ಸಂಬಂಧಿಸಿದ ಯಾವುದೇ ಕಡತಗಳು ವಿಲೇವಾರಿಯಾಗುತ್ತಿಲ್ಲ, ಜನಪ್ರತಿನಿದಿಗಳ ಅರ್ಜಿಗಳು ಕೂಡ ನಿರ್ಲಕ್ಷಿಸಲ್ಪಡುತ್ತಿದೆ. ಆದರೆ ಬ್ರೋಕರ್ ಗಳಿಂದ ಎಲ್ಲಾ ಕೆಲಸ, ಕಾರ್ಯಗಳು ಸುಲಲಿತವಾಗಿ ನಡೆಯುತ್ತಿದೆ ಎಂದು ವೀಣಾಅಚ್ಚಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಜನರು ಅರ್ಜಿ ವಿಲೇವಾರಿಗಾಗಿ ಅಲೆದು ಅಲೆದು ಬೇಸರಗೊಂಡಿದ್ದಾರೆ. ಬ್ರೋಕರ್ ಗಳ ಹಾವಳಿ ತಪ್ಪಿಸಲು ಜಿಲ್ಲಾಧಿಕಾರಿಗಳು ಹೋಬಳಿ ಮಟ್ಟದಲ್ಲಿ ಕಂದಾಯ ಅದಾಲತ್ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
::: ಅವ್ಯವಹಾರ ನಡೆದಿದೆ :::
ಮಡಿಕೇರಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಆಗದೆ ಇರುವ ಕಾಮಗಾರಿಗಳಿಗೆ ಕೂಡ ಬಿಲ್ ಪಾಸ್ ಮಾಡಲಾಗಿದೆ ಎಂದು ನಗರಸಭಾ ಮಾಜಿ ಅಧ್ಯಕ್ಷ ಹೆಚ್.ಎಂ.ನಂದಕುಮಾರ್ ಆರೋಪಿಸಿದರು.
ಅವ್ಯವಹಾರ ನಡೆದಿರುವ ಬಗ್ಗೆ ಶಂಕೆ ಇದ್ದು, ಎಸಿಬಿಗೆ ದೂರು ನೀಡುವುದಾಗಿ ತಿಳಿಸಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ನಗರಸಭೆಗೆ 35 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರು. ಆದರೆ ಇದನ್ನು ಸದ್ಬಳಕೆ ಮಾಡಿಕೊಂಡಿಲ್ಲವೆಂದು ಅವರು ಟೀಕಿಸಿದರು.
ಮಡಿಕೇರಿಯಿಂದಲೇ ಹೆಚ್ಚು ಮತಗಳನ್ನು ಗಳಿಸಿ ಗೆದ್ದು ಬರುತ್ತಿರುವ ಶಾಸಕ ಅಪ್ಪಚ್ಚುರಂಜನ್ ಅವರಿಗೆ ನಗರದ ಬಗ್ಗೆ ಯಾವುದೇ ಕಾಳಜಿ ಇಲ್ಲವೆಂದು ಅವರು ಆರೋಪಿಸಿದರು.
::: ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಣವಿಲ್ಲ :::
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊಡಗು ಜಿಲ್ಲೆಯ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗೆ ಅನುದಾನವೇ ಬಿಡುಗಡೆಯಾಗುತ್ತಿಲ್ಲವೆಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎ.ಯಾಕುಬ್ ಅವರು ಆರೋಪಿಸಿದರು.
ಶಾದಿಭಾಗ್ಯದ ಅನೇಕ ಅರ್ಜಿಗಳು ಬಾಕಿ ಉಳಿದಿದ್ದು, ಅನುದಾನವೇ ಬಿಡುಗಡೆಯಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಆಪ್ತ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಉಪಸ್ಥಿತರಿದ್ದರು.

error: Content is protected !!