ಸಹಕಾರಿ ಕ್ಷೇತ್ರ ವ್ಯಕ್ತಿಗಳಿಗೆ ಸೀಮಿತವಾಗಬಾರದು : ಹಿರಿಯ ಪತ್ರಕರ್ತ ಜಿ.ಚಿದ್ವಿಲಾಸ್ ಅಭಿಪ್ರಾಯ

02/09/2020

ಮಡಿಕೇರಿ ಸೆ.2 : ಸಹಕಾರಿ ಕ್ಷೇತ್ರ ಯಾವುದೇ ವರ್ಗ, ವ್ಯಕ್ತಿಗಳಿಗೆ ಸೀಮಿತವಾಗಬಾರದು ಎಂದು ಹಿರಿಯ ಪತ್ರಕರ್ತ ಜಿ.ಚಿದ್ವಿಲಾಸ್ ತಿಳಿಸಿದ್ದಾರೆ.
ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಬಡ ಸದಸ್ಯರ ಶಾಲಾ ಮಕ್ಕಳಿಗೆ ಉಚಿತವಾಗಿ ಲೇಖನ ಸಾಮಾಗ್ರಿ ಮತ್ತಿತರ ವಸ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಹಕಾರ ಸಂಘದ ಸಹಕಾರದೊಂದಿಗೆ ಮಿಶ್ರತಳಿ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಮಾತನಾಡಿ, ಜಿಲ್ಲಾ ಸಹಕಾರ ಬ್ಯಾಂಕ್ ಮೂಲಕ ಸಂತ್ರಸ್ಥರಿಗೆ ಕಲ್ಪಿಸುವ ನೆರವು ಸರಕಾರದ ಮೂಲಕ ಸಮರ್ಪಕವಾಗಿ ಬಳಕೆಯಾಗದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಈ ಹಿಂದೆ ಜಿಲ್ಲೆಯಲ್ಲಿ ಬ್ಯಾಂಕ್ ಮೂಲಕ ಮೂರು ಕೋಟಿ ರು ವೆಚ್ಚದಲ್ಲಿ ಸಂಘದ ಸಂತ್ರಸ್ಥ ಸದಸ್ಯ ಕುಟುಂಬಗಳಿಗೆ ಮನೆ ಕಟ್ಟಿಕೊಡುವ ಚಿಂತನೆ ಹೊಂದಿದ್ದ ಬ್ಯಾಂಕ್ ಪ್ರಸ್ತಾವನೆಗೆ ಸರಕಾರದಿಂದ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ. ಯಾವುದೇ ರೀತಿಯ ಸಹಕಾರ ದೊರಕದ ಕಾರಣ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದರಲ್ಲದೆ ಈ ಬಾರಿ ಕೊರೋನ ಅವಧಿಯಲ್ಲಿ ಎರಡು ವೆಂಟಿಲೇಟರ್‍ಗಳ ಖರೀದಿಗೆ ಸಂಘದ ವತಿಯಿಂದ 6.5 ಲಕ್ಷ ರು ದೇಣಿಗೆ ನೀಡಲಾಗಿತ್ತು. ವೆಂಟಿಲೇಟರ್ ಖರೀದಿ ಮಾಡುವಲ್ಲಿ ವಿಳಂಭ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಕುಶಾಲನಗರ ಸಹಕಾರಿ ಸಂಘದ ಆಡಳಿತ ಉತ್ತಮ ಕಾರ್ಯ ಯೋಜನೆ ಹಮ್ಮಿಕೊಂಡಿದ್ದು ಇತರ ಸಂಘಗಳಿಗೆ ಮಾದರಿಯಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷರಾದ ಟಿ.ಆರ್.ಶರವಣಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಸಾಂಕೇತಿಕವಾಗಿ ಲೇಖನ ಸಾಮಗ್ರಿ ಕಿಟ್ ವಿತರಿಸಲಾಯಿತು. ಒಟ್ಟು 275 ಮಕ್ಕಳು ಈ ಯೋಜನೆಯ ಸದುಪಯೋಗ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದ ಶರವಣಕುಮಾರ್, ಸಹಕಾರ ಸಂಘದ ಲಾಭಾಂಶದಲ್ಲಿ ಈ ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು.
ಸಂಘದ ಉಪಾಧ್ಯಕ್ಷರಾದ ವಿ.ಎಸ್.ಆನಂದಕುಮಾರ್, ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ನಿರ್ದೇಶಕರುಗಳಾದ ಅಬ್ದುಲ್ ಖಾದರ್, ಪಿ.ಬಿ.ಯತೀಶ್, ಮಧುಸೂದನ್, ರಾಮಕೃಷ್ಣ, ಕವಿತಾ ಮೋಹನ್, ನೇತ್ರಾವತಿ, ಗಣೇಶ್, ಮಧುಕುಮಾರ್ ಸಂಘದ ವ್ಯವಸ್ಥಾಪಕ ಲೋಕೇಶ್, ಸಿಬ್ಬಂದಿಗಳು ಹಾಜರಿದ್ದರು.