ನಾಗರಹೊಳೆ ಹುಲಿ ಹತ್ಯೆ ಪ್ರಕರಣ : ಲಾಡ್ಜ್ ಕಟ್ಟಡದಿಂದ ಹಾರಿದ ಆರೋಪಿ

02/09/2020

ಮಡಿಕೇರಿ ಸೆ.2 : ರಾಷ್ಟ್ರೀಯ ಉದ್ಯಾನವನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಳೆಲೆ ಗ್ರಾಮದ ಆರೋಪಿಯೊಬ್ಬನನ್ನು ಶನಿವಾರಸಂತೆಯ ಕಾಫಿ ತೋಟವೊಂದರಲ್ಲಿ ಬುಧವಾರ ಬೆಳಗಿನ ಜಾವ ಬಂಧಿಸಲಾಗಿದೆ.
ನಾಗರಹೊಳೆ ವಲಯದ ಅರಣ್ಯ ಸಿಬ್ಬಂದಿಗಳು ಹಾಗೂ ಶನಿವಾರಸಂತೆ ವಲಯ ಅರಣ್ಯಾಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಕಾಫಿ ತೋಟವೊಂದರಲ್ಲಿ ಅಡಗಿದ್ದ ಬಾಳೆಲೆ ಗ್ರಾಮದ ಕಾಂಡೇರ ಶಶಿ ಎಂಬಾತನನ್ನು ಬಂಧಿಸಿದ್ದು, ಶನಿವಾರಸಂತೆಯ ಲಾಡ್ಜ್ ನಲ್ಲಿದ್ದ ಮತ್ತೋರ್ವ ಆರೋಪಿ ಶರಣು ಅಲಿಯಾಸ್ ಉತ್ತಪ್ಪ ಲಾಡ್ಜ್ ಕಟ್ಟಡದಿಂದ ಹಾರಿ ಪರಾರಿಯಾಗಿದ್ದಾನೆ.
ನಾಗರಹೊಳೆ ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಭೇಟಿಯಾಡಿ ಹತ್ಯೆ ಮಾಡಿದ ಆರೋಪಿಗಳು ಪರಾರಿಯಾಗಿ ಶನಿವಾರಸಂತೆ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ನಾಗರಹೊಳೆ ವನ್ಯಜೀವಿ ವಲಯದ ಸಂರಕ್ಷಣಾಧಿಕಾರಿಗಳ ತಂಡ, ಶನಿವಾರಸಂತೆ ವಲಯ ಅರಣ್ಯಧಿಕಾರಿಗಳ ತಂಡದÀ ಜೊತೆಗೂಡಿ ಮಂಗಳವಾರ ರಾತ್ರಿಯಿಂದ ಕಾರ್ಯಾಚರಣೆ ನಡೆಸಿತ್ತು.
ಈ ಸಂದರ್ಭ ಸಮೀಪದ ಕಾಫಿ ತೋಟವೊಂದರಲ್ಲಿ ಅವಿತಿದ್ದ ಆರೋಪಿ ಶಶಿಯನ್ನು ಅರಣ್ಯಾಧಿಕಾರಿಗಳ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ, ಮತ್ತೊಬ್ಬ ಆರೋಪಿ ಶರಣು ಅಲಿಯಾಸ್ ಉತ್ತಪ್ಪ ಎಂಬಾತ ಪಟ್ಟಣದ ಲಾಡ್ಜ್‍ವೊಂದರಲ್ಲಿ ತಂಗಿರುವ ಮಾಹಿತಿ ಮೇರೆಗೆÉ ಅಲ್ಲಿಗೆ ದಾಳಿ ನಡೆಸಿತಾದರೂ, ಆರೋಪಿ ಶರಣು ಲಾಡ್ಜ್‍ನಿಂದ ಹಾರಿ ಪರಾರಿಯಾಗಿದ್ದಾನೆ.
ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವÀ ಆರೋಪಿ ಶರಣು ಅಲಿಯಾಸ್ ಉತ್ತಪ್ಪನನ್ನು ಬಂಧಿಸಲು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಶನಿವಾರಸಂತೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮುಂದುವರೆಸಿದೆ.