ಮೇಲೆ ಶುಂಠಿ, ಕೆಳಗೆ ಬೀಟೆ ನಾಟ : ಕುಟ್ಟದಲ್ಲಿ ಮಾಲು ಸಹಿತ ವಾಹನ ವಶ : ಚಾಲಕ ಪರಾರಿ

02/09/2020

ಮಡಿಕೇರಿ ಸೆ.2 : ಯಾರಿಗೂ ಸಂಶಯ ಬಾರದಂತೆ ಪಿಕ್ ಅಪ್ ವಾಹನದಲ್ಲಿ ಶುಂಠಿಯೊಂದಿಗೆ ಬೀಟೆ ನಾಟಗಳನ್ನು ಜೋಡಿಸಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿದೆ. ಸುಮಾರು 2 ಲಕ್ಷ ರೂ. ಮೌಲ್ಯದ ಮರ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಚಾಲಕ ಪರಾರಿಯಾಗಿದ್ದಾನೆ.
ಕೊಡಗು, ಕೇರಳ ಗಡಿಭಾಗದ ಕುಟ್ಟ ವ್ಯಾಪ್ತಿಯ ಅರಣ್ಯ ತಪಾಸಣಾ ಕೇಂದ್ರದಲ್ಲಿ ವಾಹನಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭ ಬೀಟೆ ಮರ ಇರುವುದು ದೃಢಪಟ್ಟಿದ್ದು, ವಿಚಾರಣೆ ನಡೆಸುತ್ತಿದ್ದಾಗಲೇ ಸ್ಥಳದಿಂದ ಚಾಲಕ ಕಾಲ್ಕಿತ್ತಿದ್ದಾನೆ.
ಪೊಲೀಸ್ ತಪಾಸಣಾ ಕೇಂದ್ರದ ಸಿಬ್ಬಂದಿಗಳ ಕಣ್ತಪ್ಪಿಸಿ ಮುಂದೆ ಸಾಗಿದ ಪಿಕ್ ಅಪ್ ವಾಹನವನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ವಾಹನದಲ್ಲಿದ್ದ ಒಟ್ಟು 7 ಬೀಟೆ ಮರದ ನಾಟಗಳನ್ನು ಕೇರಳಕ್ಕೆ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ತರಕಾರಿ ವಾಹನದಲ್ಲಿ ಬೀಟೆ ಸಾಗಾಟವಾದ ಪ್ರಕರಣವನ್ನು ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದರು.
ವಲಯ ಅರಣ್ಯಾಧಿಕಾರಿ (ಪ್ರಬಾರ) ಅರುಣ್ ಪಿ.ಎನ್., ಉಪ ವಲಯ ಅರಣ್ಯಾಧಿಕಾರಿಗಳಾದ ಉಮೇಶ್ ಹೆಚ್.ಬಿ., ಅರಣ್ಯ ವೀಕ್ಷಕರುಗಳಾದ ರಮೇಶ್ ಹಾಗೂ ರಾಘವೇಂದ್ರ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.