ಕೊಡಗಿನ ವೈಶಿಷ್ಟ್ಯಪೂರ್ಣ ಹಬ್ಬ ಕೈಲು ಮುಹೂರ್ತ

03/09/2020

ಕೈಲ್‌ಪೊಳ್ದ್ ಎನ್ನುವದು ಕೊಡವರು ಮತ್ತು ಕೊಡಗಿನ ಕೆಲವು ಜನಾಂಗದವರು ಆಚರಿಸುವ ಆಯುಧಪೂಜೆ. ಇದಕ್ಕೆ ಮೊದಲು ಕೈದುಪೊಳ್ದ್ ಎನ್ನುತ್ತಿದ್ದದಿದೆ . ಕೈದು ಎಂದರೆ ಆಯುಧ ಎಂದರ್ಥ. ಪೊಳ್ದ್ ಎಂದರೆ ಹಳೆಗನ್ನಡದ ಪೊಳ್ತು, ಹೊಸಗನ್ನಡದ ಹೊತ್ತು ಎಂದರ್ಥ. ಇದಕ್ಕೆ ಸಮಯ, ಮುಹೂರ್ತ ಎಂಬ ಅರ್ಥಗಳೂ ಇವೆ. ಈ ಕಾರಣದಿಂದ ಈ ಹಬ್ಬಕ್ಕೆ ಕೈಲ್ ಮುಹೂರ್ತ ಎನ್ನುವ ಹೆಸರೂ ಇದೆ. ಪ್ರತಿ ವರ್ಷವೂ ಸೆಪ್ಟೆಂಬರ್ ತಿಂಗಳ ೩ನೇ ದಿನಾಂಕಕ್ಕೆ ಸರಿಯಾಗುವ ಸೌರಮಾನದ ಸಿಂಹ ತಿಂಗಳ ೧೮ರಂದು ಆಚರಿಸುತ್ತಾರೆ. ಆದರೆ ಕೊಡಗಿನ ನಾಲ್ಕುನಾಡು, ಮುತ್ತುನಾಡ್ (ನಾಪೋಕ್ಲು,ಗಾಳಿಬೀಡು) ಮುಂತಾದ ಕಡೆಗಳಲ್ಲಿ ಆಗಸ್ಟ್ ಕೊನೆಯ ವಾರದಲ್ಲಿ ಆಚರಿಸುತ್ತಾರೆ.

ಪ್ರಕೃತಿ ರಮಣೀಯಯ ತಾಣವಾದ ಕೊಡಗು ತನ್ನದೇ ಆದ ವಿಶಿಷ್ಠ ಸಂಸ್ಕೃತಿ, ಉಡುಗೆ-ತೊಡುಗೆ ಆಚಾರಗಳನ್ನು ಹೊಂದಿದೆ. ಇಲ್ಲಿಯ ಪದ್ಧತಿ, ಆಚಾರ, ಆಚರಿಸುವ ಹಬ್ಬಗಳು ದೇಶದ ಇತರ ರಾಜ್ಯಗಳಿಗಿಂತ, ಅಷ್ಟೇ ಏಕೆ ಕರ್ನಾಟಕದ ಇತರ ಭಾಗಗಳಿಗಿಂತ ಭಿನ್ನವಾಗಿದೆ.

ಸಂಕ್ರಾತಿ, ಹುತ್ತರಿ, ಕೈಲ್ ಪೋದ್, ಇವು ಕೊಡಗಿನ ಪ್ರಮುಖ ಹಬ್ಬಗಳಾಗಿವೆ. ಕೊಡಗಿನಲ್ಲಿ ಎಲ್ಲಾ ಧರ್ಮದವರಿದ್ದರೂ ಕೊಡವರು ಮತ್ತು ಗೌಡರು ಅಧಿಕ ಸಂಖ್ಯೆಯಲ್ಲಿದ್ದಾರೆ. ಕೊಡಗಿನಲ್ಲಿ ಕಾವೇರಿ ಮಾತೆಯನ್ನು ಪೂಜಿಸುತ್ತಾರೆ. ಕೋವಿ, ಕತ್ತಿ ಆಯುಧಗಳನ್ನು ಹಬ್ಬದ ಸಮಯದಲ್ಲಿ ಪೂಜಿಸುತ್ತಾರೆ. ಕೈಲ್ ಪೋದ್ ಹಬ್ಬದಂದು ಆಯುಧಗಳನ್ನು ಪೂಜೆ ಮಾಡಲಾಗುವುದು. ಈ ಹಬ್ಬವನ್ನು ಪ್ರತಿ ವರ್ಷ ಸೆಪ್ಟಂಬರ್ 3 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಕೈಲ್ ಮೂಹರ್ತ ಎಂದು ಕೂಡ ಕರೆಯಲಾಗುತ್ತದೆ. ನಾಟಿ ಕೆಲಸ, ತೋಟದ ಕೆಲಸವೆಲ್ಲಾ ಮುಗಿಸಿ ಅದರ ಸಂಭ್ರಮವನ್ನು ಆಚರಿಸಿಕೊಳ್ಳಲು ಈ ಕೈಲ್ ಪೋದ್ ಹಬ್ಬವನ್ನು ಆಚರಿಸುತ್ತಾರೆ. ಉಳಿದೆರಡು ಹಬ್ಬದಲ್ಲಿ ಹೋಳಿಗೆ, ತಂಬಿಟ್ಟು, ಪಾಯಸ, ಚಕ್ಕುಲಿ ಅಂತ ಹಬ್ಬದ ಅಡುಗೆಯನ್ನು ಮಾಡಿದರೆ ಕೈಲ್ ಪೋದ್ ಹಬ್ಬದ ವಿಶೇಷವೆಂದರೆ ಮಾಂಸಾಹಾರವನ್ನು ತಯಾರಿಸಲಾಗುತ್ತದೆ. ಕೈಲ್ ಪೋದ್ ಗೆ ಪಂದಿ ಕರಿ(ಪೋರ್ಕ್) ಪ್ರಮುಖವಾಗಿರುತ್ತದೆ. ಕಡುಬು ಮತ್ತು ಪೋರ್ಕ್ ಕರಿ ತಯಾರಿಸಿ ಅದನ್ನು ಆಯುಧಗಳು ಪೂಜೆ ಮಾಡುವ ಜಾಗದಲ್ಲಿ ಇಡಲಾಗುತ್ತದೆ. ಹಿಂದೆಯೆಲ್ಲಾ ಭೇಟೆಯಾಡಿ ಮಾಂಸ ತಂದು ಈ ದಿನವನ್ನು ಆಚರಿಸಲಾಗುತ್ತಿತ್ತು. ಈಗ ಭೇಟೆ ನಿಷಿದ್ಧವಾದ್ದರಿಂದ ಕೋಳಿ, ಹಂದಿಗಳನ್ನು ಚೌಂಡಿ ಕಲ್ಲಿನ (ಚೌಂಡಿ ದೇವರು) ಹತ್ತಿರ ತಂದು ಕಡೆದು ಆ ಮಾಂಸದಿಂದ ಸಾರು ಮಾಡಲಾಗುವುದು.