ಜಾತಿ ನಿಂದನೆ ಆರೋಪ : ಕ್ರಮಕ್ಕೆ ದಲಿತ ಒಕ್ಕೂಟ ಒತ್ತಾಯ

ಮಡಿಕೇರಿ ಸೆ.3 : ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನು ಜಾತಿ ಹೆಸರು ಹೇಳಿ ನಿಂದಿಸಿದ ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಸೋಮವಾರಪೇಟೆ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಆಲೂರು ಸಿದ್ದಾಪುರದ ಕಣಗಾಲು ಗ್ರಾಮದ ನಿವಾಸಿ ಮನೋಜ್ ಕುಮಾರ್ ಎಂಬುವವರಿಗೆ ಸ್ಥಳೀಯ ವ್ಯಕ್ತಿ ರೋಹನ್ ಎಂಬುವವರು ಜಾತಿ ನಿಂದನೆ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಒಕ್ಕೂಟದ ಅಧ್ಯಕ್ಷ ಟಿ.ಈ.ಸುರೇಶ್ ಆರೋಪಿಸಿದ್ದಾರೆ.
ಒಕ್ಕೂಟದ ಪದಾಧಿಕಾರಿಗಳು ಶನಿವಾರಸಂತೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಆರಕ್ಷಕ ಉಪ ನಿರೀಕ್ಷಕರೊಂದಿಗೆ ಚರ್ಚಿಸಿದ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ತೀವ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಒಕ್ಕೂಟದ ಜಿಲ್ಲಾ ಸಂಚಾಲಕ ಜೆ.ಆರ್.ಪಾಲಾಕ್ಷ, ಪ್ರಧಾನ ಕಾರ್ಯದರ್ಶಿ ಜೆ.ಎಲ್.ಜನಾರ್ಧನ, ಖಜಾಂಚಿ ಎಸ್.ಎ.ಪ್ರತಾಪ್, ದಲಿತ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ನಿರ್ವಾಣಪ್ಪ, ಮುಖಂಡ ಈರಪ್ಪ, ಪದಾದಿಕಾರಿಗಳಾದ ಸಂದೀಪ್, ಗಿರೀಶ್ ಶಾಂತಳ್ಳಿ, ಇಂದ್ರೇಶ್ ಕೊಡ್ಲಿಪೇಟೆ ಮತ್ತಿತರರು ಈ ಸಂದರ್ಭ ಹಾಜರಿದ್ದರು.
