ನಾಗರಹೊಳೆ ಹುಲಿ ಹತ್ಯೆ ಪ್ರಕರಣ : ಮತ್ತೋರ್ವ ಆರೋಪಿ ಬಂಧನ

ಮಡಿಕೇರಿ ಸೆ.3 : ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ಹುಲಿ ಬೇಟೆಯಾಡಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹುಲಿ ಬೇಟೆಯಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಈ ಹಿಂದೆಯೇ ಬಂಧಿಸಲಾಗಿದ್ದರೆ, ಇನ್ನಿಬ್ಬರು ಆರೋಪಿಗಳು ಶನಿವಾರಸಂತೆಯ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿರುವುದಾಗಿ ದೊರೆತ ಸುಳಿವಿನ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬುಧವಾರ ಕಾರ್ಯಾಚರಣೆ ನಡೆಸಿದ್ದರು.
ಈ ಸಂದರ್ಭ ಆರೋಪಿಗಳಾದ ಕಾಂಡೇರ ಶಶಿ ಹಾಗೂ ಶರಣು ಅಲಿಯಾಸ್ ಬಿದ್ದಪ್ಪ ಎಂಬವರುಗಳು ಲಾಡ್ಜ್‌ನಿಂದ ಹಾರಿ ಪರಾರಿಯಾಗಿದ್ದರು. ಆದರೆ ಅಲ್ಲಿಂದ ಪರಾರಿಯಾಗಿ ಸಮೀಪದ ಕಾಫಿ ತೋಟವೊಂದರಲ್ಲಿ ಅವಿತಿದ್ದ ಶಶಿಯನ್ನು ಬುಧವಾರ ಬಂಧಿಸಲಾಗಿತ್ತು.
ಮತ್ತೋರ್ವ ಆರೋಪಿ ಶರಣು ಅಲಿಯಾಸ್ ಬಿದ್ದಪ್ಪನಿಗಾಗಿ ಕಾರ್ಯಾಚರಣೆ ಮುಂದುವರಿಸಿದ್ದ ನಾಗರಹೊಳೆ ಹಾಗೂ ಶನಿವಾರಸಂತೆ ವಲಯದ ಅರಣ್ಯ ಸಿಬ್ಬಂದಿಗಳ ತಂಡ, ಶನಿವಾರಸಂತೆಯ ಕಾವೇರಿ ಕಾಲೇಜು ಬಳಿ ಗುರುವಾರ ಬೆಳಗ್ಗೆ ೧೦ ಗಂಟೆ ಸುಮಾರಿಗೆ ಬಂಧಿಸಿದೆ.
ಕಾರ್ಯಾಚರಣೆಯಲ್ಲಿ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ, ಅರಣ್ಯ ರಕ್ಷಕರ ತಂಡ ಹಾಗೂ ನಾಗರಹೊಳೆ ವನ್ಯಜೀವಿ ವಲಯ ರಕ್ಷಕರು ಪಾಲ್ಗೊಂಡಿದ್ದರು.
