ವೈದ್ಯರ ಯಶಸ್ವಿ ಶಸ್ತ್ರ ಚಿಕಿತ್ಸೆ : ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೋವಿಡ್ ಸೋಂಕಿತ ಮಹಿಳೆ

03/09/2020

ಮಡಿಕೇರಿ ಸೆ. 3 : ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮಡಿಕೇರಿ ತಾಲೂಕಿನ ಮೂರ್ನಾಡುವಿನ 23 ವರ್ಷದ ಕೋವಿಡ್-19 ಸೋಂಕಿತ ಗರ್ಭಿಣಿ ಮಹಿಳೆ ಗುರುವಾರ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಸೆಪ್ಟೆಂಬರ್ 2 ರಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಕೋವಿಡ್-೧೯ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿತ್ತು. ಅಲ್ಲದೆ ಸಹಜ ರೀತಿಯ ಹೆರಿಗೆ ಸಾಧ್ಯವಿಲ್ಲದ ಪರಿಸ್ಥಿತಿ ಇತ್ತು. ಈ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಯ ಪ್ರಸೂತಿ ಮತ್ತು ಸ್ರೀ ರೋಗ ವಿಭಾಗ, ಮಕ್ಕಳ ವಿಭಾಗ ಮತ್ತು ಅರವಳಿಕೆ ವಿಭಾಗದ ತಜ್ಞ ವೈದ್ಯರು ಮಹಿಳೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದು, 2 ಹೆಣ್ಣು ಮಕ್ಕಳಿಗೆ ಸೋಂಕಿತ ಮಹಿಳೆ ಜನ್ಮ ನೀಡಿದ್ದಾರೆ.
ಅಲ್ಲದೆ ತಾಯಿ ಮತ್ತು ಅವಳಿ ಮಕ್ಕಳು ಆರೋಗ್ಯದಿಂದ ಇದ್ದು ಸಾಕಷ್ಟು ಮುತುವರ್ಜಿಯಿಂದ ತಾಯಿ ಮತ್ತು ಮಕ್ಕಳ ಆರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.