ಕೊಡವರಿಗೆ ಎಸ್‍ಟಿ ಟ್ಯಾಗ್ ಬೇಡ : ವಕೀಲ ಮಾಚಯ್ಯ ಅಸಮಾಧಾನ

September 4, 2020

ಮಡಿಕೇರಿ ಸೆ.4 : ಕೊಡವರನ್ನು ಬುಡಕಟ್ಟು ಜನಾಂಗವೆಂದು ಘೋಷಿಸಲು ಕೆಲವರು ಒತ್ತಡ ಹೇರುತ್ತಿದ್ದು, ಒಂದು ವೇಳೆ ಈ ರೀತಿ ಘೋಷಣೆಯಾದರೆ ನ್ಯಾಯಾಲಯದ ಮೆಟ್ಟಿಲೆÉೀರಿ ತಡೆಯಾಜ್ಞೆ ತರುವುದಾಗಿ ವಕೀಲ ಬಿ.ಎ.ಮಾಚಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲ ಕೊಡವರಾಗಿ ಹುಟ್ಟಿದ ನಮಗೆ ಎಸ್‍ಟಿ ಟ್ಯಾಗ್ ಹಾಕುವ ಅಗತ್ಯವಿಲ್ಲ. ಯಾರಿಗೆ ಬುಡಕಟ್ಟು ಸಮುದಾಯವೆಂದು ಗುರುತಿಸಿಕೊಳ್ಳಲು ಇಚ್ಛೆ ಇದೆಯೋ ಅಂತಹವರು ಆ ರೀತಿ ಗುರುತಿಸಿಕೊಳ್ಳಲಿ. ಬಲವಂತದಿಂದ ಜಾತಿ ಬದಲಾಯಿಸಿ ಇತರರಿಗೆ ಟ್ಯಾಗ್ ಹಾಕುವ ಅಗತ್ಯವಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಹುಟ್ಟಿದ ಜಾತಿಯಲ್ಲಿ ನಾವು ಬದುಕುವ ಹಕ್ಕಿದೆ. ಸಾಕ್ಷಿ ಇರುವ ಇತಿಹಾಸವನ್ನು ಹೇಗೆ ಬಿಡಲು ಸಾಧ್ಯವೆಂದು ಪ್ರಶ್ನಿಸಿದ ಅವರು ಯಾರೂ ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡಬಾರದು ಎಂದರು. ಕಾವೇರಿ ತಾಯಿ ತಲಕಾವೇರಿಯಲ್ಲಿ ಜನಿಸಿ ಲೋಕಕಲ್ಯಾಣಕ್ಕಾಗಿ ಹರಿದಾಗ, ಬಲಮುರಿಯಲ್ಲಿ ಅಗಸ್ತ್ಯ ಮುನಿಗಳು ತಡೆದರು. ನಿಲ್ಲಲು ಸಾಧ್ಯವಿಲ್ಲವೆಂದು ತಿಳಿಸಿದ ಕಾವೇರಿ ಮಾತೆ ಮುಂದೆ ಹರಿಯುತ್ತಾಳೆ. ಇಂದಿಗೂ ಕೊಡವ ಮಹಿಳೆಯರ ಸೆರಗು ಹಿಂಬದಿ ಇರುವುದು ಇಲ್ಲಿನ ಘಟನಾವಳಿಗೆ ಮತ್ತು ಸಂಸ್ಕøತಿಗೆ ಸಾಕ್ಷಿಯಾಗಿದೆ. ಇದನ್ನೆಲ್ಲ ಬದಲಿಸಲು ಸಾಧ್ಯವೇ ಎಂದು ಮಾಚಯ್ಯ ಪ್ರಶ್ನಿಸಿದರು.
ಕೊಡವರನ್ನು ಕೊಡವರ ವಿರುದ್ಧವೇ ಎತ್ತಿಕಟ್ಟುತ್ತಿರುವ ಕೆಲವರು ಬುಡಕಟ್ಟು ವಿವಾದದ ಷಡ್ಯಂತ್ರವನ್ನು ನಡೆಸಿದ್ದಾರೆ. ಸರ್ಕಾರದ ಸೌಲಭ್ಯಕ್ಕಾಗಿ ಹುಟ್ಟಿದ ಜಾತಿಯನ್ನು ತ್ಯಜಿಸಿದರೆ ಸೌಲಭ್ಯ ನೀಡುವುದನ್ನು ಸ್ಥಗಿತಗೊಳಿಸಿದ ತಕ್ಷಣದಿಂದಲೇ ಸೌಲಭ್ಯದೊಂದಿಗೆ ಜಾತಿಯನ್ನೂ ಕಳೆದುಕೊಂಡ ಅತಂತ್ರ ಅನುಭವವನ್ನು ಅನುಭವಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾನೂನಿನ ಪ್ರಕಾರ ಪ್ರತಿಯೊಬ್ಬರಿಗೂ ಆಯಾಯ ಜಾತಿಯಲ್ಲಿ ಬದುಕಲು ಅವಕಾಶವಿದೆ. ಯಾರನ್ನೂ ಬಲವಂತ ಮಾಡಲು ಸಾಧ್ಯವಿಲ್ಲ. ಬೇಕಾದವರು ಅವರವರ ಕುಟುಂಬವನ್ನು ಪರಿವರ್ತನೆ ಮಾಡಿಕೊಳ್ಳಲಿ. ಬಲವಂತದಿಂದ ಬುಡಕಟ್ಟು ಜನಾಂಗವೆಂದು ಕೊಡವರನ್ನು ಬದಲಾಯಿಸಲು ಮುಂದಾದರೆ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತರಬೇಕಾಗುತ್ತದೆ ಎಂದು ಮಾಚಯ್ಯ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿವೇಕ್ ಗಣಪತಿ ಉಪಸ್ಥಿತರಿದ್ದರು.

error: Content is protected !!