ಮಳೆಹಾನಿ ಅಗತ್ಯ ಪರಿಹಾರಕ್ಕೆ ಮುಖ್ಯಮಂತ್ರಿಗಳಿಗೆ ಕೊಡಗು ಉಸ್ತುವಾರಿ ಸಚಿವ ವಿ. ಸೋಮಣ್ಣ ಮನವಿ

04/09/2020

ಮಡಿಕೇರಿ ಸೆ. 4 : ಇತ್ತೀಚೆಗೆ ಜಲಪ್ರಳಯದಿಂದ ನಲುಗಿರುವ ಕೊಡಗು ಜಿಲ್ಲೆಗೆ ಅತಿವೃಷ್ಟಿಯಿಂದ ಶಾಶ್ವತ ಪರಿಹಾರ, ಬೆಳೆ ಹಾನಿ ಮತ್ತು ಮೂಲ ಸೌಕರ್ಯದ ಹಾನಿಗೆ ಸಂಬಂಧಿಸಿದಂತೆ ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಸೋಮಣ್ಣ ಅವರು ಪತ್ರ ಮುಖೇನ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ವಿವರವಾಗಿ ಪತ್ರ ಬರೆದ ಸಚಿವ ಸೋಮಣ್ಣ ಅವರು ಜಿಲ್ಲೆಯಲ್ಲಿ 91 ಗ್ರಾಮಗಳು ಮಳೆಯಿಂದ ಉಂಟಾದ ಪ್ರವಾಹಕ್ಕೆ ತುತ್ತಾಗಿದ್ದು, ಒಟ್ಟಾರೆ ಜಿಲ್ಲೆಯಲ್ಲಿ ಸುಮಾರು 41,026 ಹೆಕ್ಟೇರ್ ಬೆಳೆಹಾನಿ, ಅಂದಾಜು ರೂ.415.00 ಕೋಟಿಗಳ ಮೂಲಸೌಕರ್ಯ ಹಾನಿಯಾಗಿದ್ದು, ಹಾನಿಗೀಡಾದ ರಸ್ತೆ, ಸೇತುವೆ ಮತ್ತಿತರ ಮೂಲ ಸೌಕರ್ಯಗಳ ದುರಸ್ತಿ ಹಾಗೂ ಪುನರ್ ನಿರ್ಮಾಣ ಸಮರೋಪಾದಿಯಲ್ಲಿ ಮಾಡಬೇಕು.
ಜೊತೆಗೆ ರೈತರ ಜಮೀನಿನಲ್ಲಿ ಸಂಗ್ರಹವಾದ ಮರಳನ್ನು ರಾಯಲ್ಟಿ ಇಲ್ಲದೇ ಮಾರಾಟ ಮಾಡಲು ಭೂಮಾಲೀಕ ರೈತರಿಗೆ ಅವಕಾಶ ನೀಡಬೇಕು ಹಾಗೂ ಕಾಫಿ ಬೆಳೆಗಾರರ ತೋಟದಲ್ಲಿ ಬಿದ್ದಿರುವ ಬೆಲೆ ಬಾಳುವ ಮರಗಳನ್ನು ಹೊರತುಪಡಿಸಿ ಇತರೆ ಮರಗಳನ್ನು ಮಾರಾಟ ಮಾಡಲು ಅದೇ ರೈತರಿಗೆ ಅವಕಾಶ ನೀಡಬೇಕು. ಅಲ್ಲದೇ, ಹಿಂದಿನ ಸಾಲಿನಲ್ಲಿ ಘೋಷಣೆಯಾದ ಪ್ರವಾಹ ಪ್ಯಾಕೇಜ್ ರೂ.536 ಕೋಟಿಗಳ ಪೈಕಿ ಬಿಡುಗಡೆಗೆ ಬಾಕಿ ಇರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸಹ ಪತ್ರದಲ್ಲಿ ವಿವರಿಸಿದ್ದಾರೆ. ಮುಂದುವರೆದು, ಜಿಲ್ಲೆಯು ಪದೇ ಪದೇ ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಮೂರು ತಾಲ್ಲೂಕುಗಳನ್ನು ಅತಿವೃಷ್ಠಿಪೀಡಿತವೆಂದು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಚಿವ ಸೋಮಣ್ಣನವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಮುಖ್ಯ ಮಂತ್ರಿಯವರು ಈ ಬಗ್ಗೆ ಕೂಡಲೇ ಸೂಕ್ತ ಆದೇಶವನ್ನು ಸರ್ಕಾರದಿಂದ ಹೊರಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.