ಕೋವಿಡ್ ಗೊಂದಲ : ಜಿಲ್ಲಾ ಮಟ್ಟದಲ್ಲಿ ವಸ್ತುಗಳನ್ನು ಖರೀದಿಸುತ್ತಿಲ್ಲ : ಆರೋಗ್ಯ ಇಲಾಖೆ ಸ್ಪಷ್ಟನೆ

September 4, 2020

ಮಡಿಕೇರಿ ಸೆ.4 : ಕೋವಿಡ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಿಪಿಇ ಕಿಟ್, ಇಂಜೆಕ್ಷನ್, ಮಾತ್ರೆ, ಸ್ಯಾನಿಟೈಸರ್, ಮಾಸ್ಕ್ ಮತ್ತಿತರವನ್ನು ಸರ್ಕಾರ ಒದಗಿಸುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಯಾವುದೇ ವಸ್ತುಗಳನ್ನು ಖರೀದಿ ಮಾಡುತ್ತಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಹಾಗೂ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಕಾರ್ಯಪ್ಪ ಅವರು ಸ್ಪಷ್ಟಪಡಿಸಿದ್ದಾರೆ.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಕೋವಿಡ್ ಪಾಸಿಟಿವ್‍ನಿಂದ ಆಸ್ಪತ್ರೆಯಲ್ಲಿ ದಾಖಲಾಗಿರುವವರಿಗೆ ಊಟೋಪಚಾರಕ್ಕೆ ಒಬ್ಬರಿಗೆ ಒಂದು ದಿನಕ್ಕೆ 250 ರೂ. ಬಳಸಲು ಅವಕಾಶವಿದೆ. ಆದರೆ ಜಿಲ್ಲೆಯಲ್ಲಿ ಟೆಂಡರ್ ಆಹ್ವಾನಿಸಲಾಗಿದ್ದು, ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ 170 ರೂ. ಖರ್ಚು ಮಾಡಲಾಗುತ್ತದೆ. ಕೋವಿಡ್-19 ಸಂಬಂಧಿಸಿದಂತೆ ಆರೋಗ್ಯ ತಪಾಸಣೆಯಿಂದ ಹಿಡಿದು ಎಲ್ಲಾ ರೀತಿಯ ಆರೋಗ್ಯ ಸೌಲಭ್ಯವು ಉಚಿತವಾಗಿದ್ದು, ಯಾರೂ ಸಹ ಒಂದು ರೂಪಾಯಿ ಖರ್ಚು ಮಾಡುವಂತಿಲ್ಲ ಎಂದು ಅವರು ಹೇಳಿದರು.
ಕೋವಿಡ್-19 ಸಂಬಂಧಿಸಿದಂತೆ ಹೆಚ್ಚಿನ ಜ್ವರ, ಕೆಮ್ಮು ಇದ್ದವರನ್ನು ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಉಳಿದಂತೆ ಕೋವಿಡ್ ಪಾಸಿಟಿವ್ ಬಂದಿರುವ ಸುಸ್ಥಿರವಾಗಿರುವವರನ್ನು ಹೋಂ ಕ್ವಾರಂಟೈನ್‍ಗೆ ಕಳುಹಿಸಲಾಗುತ್ತದೆ ಎಂದು ಕೆ.ಮೋಹನ್ ಅವರು ಸ್ಪಷ್ಟಪಡಿಸಿದರು.
ಹೋಂ ಐಸೋಲೇಷನ್‍ನಲ್ಲಿ ಇರುವವರನ್ನು ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಪಿಡಿಒ ಗಳು ಗಮನಿಸುತ್ತಾರೆ ಎಂದು ಅವರು ವಿವರಿಸಿದರು.
ರೋಗ ಲಕ್ಷಣಗಳು ಕಂಡು ಬಂದಲ್ಲಿ ಪರೀಕ್ಷಿಸಿಕೊಳ್ಳಬೇಕು. ನಿಧಾನ ಮಾಡಿದಷ್ಟು ತೊಂದರೆಗೆ ಸಿಲುಕಬೇಕಾಗುತ್ತದೆ ಎಂದು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಕಾರ್ಯಪ್ಪ ಹೇಳಿದರು.
ಕೋವಿಡ್-19 ಸಂಬಂಧ ಸರ್ಕಾರಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತವಾಗಿರುವುದರಿಂದ ಯಾರೂ ಸಹ ಹಿಂಜರಿಯದೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅವರು ಕೋರಿದರು.
ಕೋವಿಡ್-19 ಸಂಬಂಧ ಊಟೋಪಚಾರ ಹೊರತುಪಡಿಸಿ ಉಳಿದ ಯಾವುದನ್ನು ಸಹ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಖರೀದಿ ಮಾಡುತ್ತಿಲ್ಲ. ಎಲ್ಲವನ್ನು ಸರ್ಕಾರ ಒದಗಿಸುತ್ತದೆ ಎಂದು ಅವರು ಸ್ಪಷ್ಟ ಪಡಿಸಿದರು.
ಆರ್‍ಎಟಿ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಆರ್‍ಟಿಪಿಆರ್ ಪರೀಕ್ಷೆ ಮಾಡಲಾಗುತ್ತದೆ. ಇದರಲ್ಲಿ ಪಾಸಿಟಿವ್ ಬಂದಲ್ಲಿ ವ್ಯಕ್ತಿಯ ಸುಸ್ಥಿತಿ ಗಮನಿಸಿ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಬೇಕೇ, ಐಸೋಲೇಷನ್‍ಗೆ ಕಳುಹಿಸಬೇಕೇ ಎಂದು ವೈದ್ಯರು ನಿರ್ಧರಿಸಲಿದ್ದಾರೆ ಎಂದು ಅವರು ತಿಳಿಸಿದರು.

 ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸೂಪರಿಡೆಂಡಂಟ್ ಅವರು ಮಾತನಾಡಿ ಕೋವಿಡ್-19 ನಿರ್ವಹಣೆ ಸಂಬಂಧ ಹಲವು ಮಾಹಿತಿ ನೀಡಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ಹಾಜರಿದ್ದರು.