ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಆಟಕ್ಕುಂಟು ಲೆಕ್ಕಕ್ಕಿಲ್ಲ : ಕೊಡಗು ಜೆಡಿಎಸ್ ಆರೋಪ

04/09/2020

ಮಡಿಕೇರಿ ಸೆ.4 : ಕೊಡಗು ಜಿಲ್ಲಾ ಜಾತ್ಯತೀತ ಜನತಾ ದಳದ ಪ್ರಮುಖರು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಚೇರಿಗೆ ಭೇಟಿ ನೀಡಿ ಅಲ್ಪಸಂಖ್ಯಾತ ಫಲಾನುಭವಿಗಳು ಸಲ್ಲಿಸಿರುವ ವಿವಿಧ ಯೋಜನೆಗಳ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಒತ್ತಾಯಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೂಲಕ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ ಯೋಜನೆಗಳು ಯೋಜನೆಗಳಾಗಿಯೇ ಉಳಿದುಕೊಂಡಿದ್ದು, ಫಲಾನುಭವಿಗಳು ಸಲ್ಲಿಸಿರುವ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ ಮತ್ತು ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ದೂರದ ಊರುಗಳಿಂದ ಫಲಾನುಭವಿಗಳು ನಿಗಮದ ಕಚೇರಿಗೆ ಆಗಮಿಸಿ ಅಧಿಕಾರಿಗಳ ಗೈರು ಹಾಜರಿಯಿಂದ ಬೇಸತ್ತು ವಾಪಾಸ್ಸಾಗುತ್ತಿದ್ದಾರೆ. ಆರ್ಥಿಕ ಹಿನ್ನಡೆಯ ನಡುವೆ ಪ್ರತಿದಿನ ಕಚೇರಿಗೆ ಅಲೆದಾಡಬೇಕಾದ ದುಸ್ಥಿತಿ ಬಡವರ್ಗಕ್ಕೆ ಬಂದೊದಗಿದೆ. ಇಂದು ಸಂತೆ ದಿನವಾದ ಶುಕ್ರವಾರವಾಗಿದ್ದರೂ ವಿವಿಧ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಗೈರು ಹಾಜರಾಗಿದ್ದಾರೆ. ಜಿಲ್ಲಾಧಿಕಾರಿಗಳು ಅಧಿಕಾರಿಗಳ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ ಎಂದು ಗಣೇಶ ಆರೋಪಿಸಿದರು.
ಕೊಡಗು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರ್ಕಾರ ನೀಡಿರುವ ಯೋಜನೆಯ ಗುರಿಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದ ಅವರು ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವವನ್ನು ಮುಂದುವರೆಸಿದರೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಅಭಿವೃದ್ಧಿ ನಿಗಮ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತ್ತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಜನಸಾಮಾನ್ಯರ ಕಣ್ಣೊರೆಸುವ ತಂತ್ರವಾಗಿದೆ ಎಂದು ಟೀಕಿಸಿದರು. ಚುನಾವಣೆ ಸಂದರ್ಭ ಯೋಜನೆಗಳು, ಘೋಷಣೆಗಳು ದೊಡ್ಡದಾಗಿತ್ತು, ಆದರೆ ಅಧಿಕಾರಕ್ಕೆ ಬಂದ ನಂತರ ಫಲಾನುಭವಿಗಳಿಗೆ ಅದನ್ನು ತಲುಪಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷರಿಗೆ ಸರ್ಕಾರದ ಅನುದಾನವನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ನೀಡಲು ಸಾಧ್ಯವಾಗದೇ ಇದ್ದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಮಡಿಕೇರಿ ತಾಲ್ಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಷೀರ್, ಜಿಲ್ಲಾ ಕಾರ್ಯದರ್ಶಿ ಎನ್.ಸಿ.ಸುನೀಲ್, ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಲೀಲ್ ಬಾದ್ ಶಾ, ನಗರ ಎಸ್.ಸಿ ಘಟಕ ಅಧ್ಯಕ್ಷ ರವಿಕುಮಾರ್, ನಗರ ಯುವ ಘಟಕ ಪ್ರಧಾನ ಕಾರ್ಯದರ್ಶಿ ಉಮೇಶ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.