ಭಾರತ, ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ

05/09/2020

ಲೇಹ್ ಸೆ.5 : ಭಾರತ ಹಾಗೂ ಚೀನಾ ನಡುವಿನ ವಾಸ್ತವಿಕ ಗಡಿ ಅಥವಾ ಎಲ್‍ಎಸಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ ಎಂದು ಭಾರತೀಯ ಸೇನಾಪಡೆಯ ಮುಖ್ಯಸ್ಥ ಎಂ.ಎಂ.ನರವಾಣೆಯವರು ಶುಕ್ರವಾರ ಹೇಳಿದ್ದಾರೆ.
ಸೇನಾಪಡೆಗಳನ್ನು ಹಿಂತೆಗೆದುಕೊಳ್ಳುವ ಬಣ್ಣದ ಮಾತುಗಳನ್ನು ಆಡಿ, ಭಾರತದ ಭೂ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಚೀನಾ ಎರಡು ಬಾರಿ ಯತ್ನಿಸಿದ್ದು, ಇದೀಗ ಗಡಿಯಲ್ಲಿ ಯುದ್ಧದ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಲಡಾಖ್’ಗೆ ಭೇಟಿ ನೀಡಿದ ನರವಾಣೆಯವರು ಗಡಿ ಪರಿಸ್ಥಿತಿ ಪರಿಶೀಲನೆ ನಡೆಸಿದರು.
ಗಡಿ ಪರಿಸ್ಥಿತಿ ಕುರಿತಂತೆ ಹೇಳಿಕೆ ನೀಡಿರುವ ಅವರು, ನಿನ್ನೆಯಷ್ಟೇ ಲೇಹ್’ಗೆ ಭೇಟಿ ನೀಡಿದ್ದೆ. ಸಾಕಷ್ಟು ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳು ಹಾಗೂ ಜೆಸಿಒಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಗಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ಯೋಧರ ನೈತಿಕ ಸ್ಥೈರ್ಯ ಹೆಚ್ಚಾಗಿದೆ. ಯಾವುದೇ ರೀತಿಯ ಸವಾಲುಗಳು ಎದುರಾದರೂ ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ನಮ್ಮ ಯೋಧರು ಅತ್ಯುತ್ತಮರು. ನಮ್ಮ ಸುರಕ್ಷತೆ ಹಾಗೂ ಭದ್ರತೆಗಾಗಿ ನಾವು ಕೆಲವು ಮುನ್ನೆಚ್ಚರಿಕೆ ನಿಯೋಜನೆಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ಪ್ರಸ್ತುತ ಗಡಿ ನಿಯಂತ್ರಣ ರೇಖೆ ಬಳಿಕ ವಾತಾವರಣ ಗಂಭೀರವಾಗಿದ್ದು, ಈ ಬಗ್ಗೆ ಗಂಭೀರವಾಗಿ ಚಿಂತನೆಗಳನ್ನು ನಡೆಸಲಾಗುತ್ತಿದೆ. ನಮ್ಮ ಭದ್ರತಾಪಡೆಗಳೂ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಪರಿಸ್ಥಿತಿ ಬದಲಾಗುವ ಲಕ್ಷಣಗಳಿಲ್ಲ. ಹೀಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.