ಘೋಷಣೆಯಾದ ಪರಿಹಾರ ಸಿಗಲೇ ಇಲ್ಲ : ಸರ್ಕಾರದ ವಿರುದ್ಧ ಚಾಲಕರ ಸಂಘ ಅಸಮಾಧಾನ : ಐಎನ್‍ಟಿಯುಸಿ ಪ್ರತಿಭಟನೆ

ಮಡಿಕೇರಿ ಸೆ.5 : ಕೊರೋನಾ ಲಾಕ್‍ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ಆಟೋ, ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪರಿಹಾರದ ಹಣವನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ನೀಡುವಂತೆ ಒತ್ತಾಯಿಸಿ ಐಎನ್‍ಟಿಯುಸಿ ನೇತೃತ್ವದಲ್ಲಿ ಕೊಡಗು ಜಿಲ್ಲಾ ವಾಹನ ಚಾಲಕರು ಹಾಗೂ ಮಾಲೀಕರ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ವಾಹನ ಮಾಲೀಕರು ಹಾಗೂ ಚಾಲಕರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಸಂಪತ್ ಕೊರೋನಾ ಸಂದರ್ಭ ರಾಜ್ಯ ಸರ್ಕಾರ ಟ್ಯಾಕ್ಸಿ ಚಾಲಕರಿಗೆ ತಲಾ 5 ಸಾವಿರ ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಎಲ್ಲಾ ಫಲಾನುಭವಿಗಳಿಗೆ ಇಲ್ಲಿಯವರೆಗೆ ಪರಿಹಾರ ದೊರೆತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಕಷ್ಟದಲ್ಲಿರುವ ಚಾಲಕರ ಹಿತ ಕಾಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡನೀಯ ಎಂದರು.
ಕೊಡಗಿನ ವಾಹನ ಚಾಲಕರು ಪ್ರವಾಸೋದ್ಯಮವನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಆದರೆ ಕಳೆದ ಆರು ತಿಂಗಳುಗಳಿಂದ ಪ್ರವಾಸಿಗರಿಲ್ಲದ ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ತೆರಿಗೆ ಪಾವತಿ ಮತ್ತು ಜೀವನ ನಿರ್ವಹಣೆ ಮಾಡಲು ಅಸಾಧ್ಯವಾದ ಪರಿಸ್ಥಿತಿ ಎದುರಾಗಿದ್ದು, ಘೋಷಿಸಿರುವ ಪರಿಹಾರದ ಹಣವನ್ನು ತಕ್ಷಣ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿ ಹಾಗೂ ಕೋವಿಡ್ ಸಂಕಷ್ಟದಿಂದ ಜನ ಸ್ವಯಂಘೋಷಿತ ಬಂದ್ ಗೆ ಒಳಗಾದ ಪರಿಣಾಮ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ಅತಂತ್ರ ಸ್ಥಿತಿಯಲ್ಲೇ ದಿನ ಕಳೆದಿದ್ದಾರೆ. ಕಷ್ಟದಲ್ಲಿರುವ ಚಾಲಕರಿಗೆ ಆರ್ಥಿಕ ನೆರವು ನೀಡುವ ಸರ್ಕಾರದ ಭರವಸೆ ಹುಸಿಯಾಗಿದೆ ಎಂದು ಟೀಕಿಸಿದರು.
ಇದೀಗ ಟ್ಯಾಕ್ಸಿಗಳ ಸಂಚಾರ ಆರಂಭವಾಗಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿರುವುದರಿಂದ ಲಾಭ ರಹಿತ ಜೀವನವನ್ನು ನಡೆಸಬೇಕಾಗಿದೆ. ಕಾರ್ಮಿಕ ಇಲಾಖೆಯ ಮೂಲಕ ಎಲ್ಲಾ ಟ್ಯಾಕ್ಸಿ ಮತ್ತು ಆಟೋ ಚಾಲಕರಿಂದ ಅರ್ಜಿಯನ್ನು ಪುನರ್ ಸ್ವೀಕರಿಸಿ ಪರಿಹಾರ ದೊರೆಯದೆ ಇರುವ ಅರ್ಜಿದಾರರಿಗೆ ತಲಾ 5 ಸಾವಿರ ರೂ.ಗಳನ್ನು ಬಿಡುಗಡೆ ಮಾಡಬೇಕೆಂದು ನಾಪಂಡ ಮುತ್ತಪ್ಪ ಒತ್ತಾಯಿಸಿದರು.
ಐಎನ್‍ಟಿಯುಸಿ ಯುವ ಘಟಕದ ಜಿಲ್ಲಾ ಕಾರ್ಯದರ್ಶಿ ನಾಪಂಡ ರವಿ, ಕಾರ್ಮಿಕರ ಘಟಕದ ರಾಜ್ಯ ಕಾರ್ಯದರ್ಶಿ ಅಜ್ಜಳ್ಳಿ ರವಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರ ಮೈನಾ, ಪ್ರಮುಖರಾದ ಕಾಂತರಾಜು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

