ಖಾಸಗಿ ಶಾಲೆಗಳ ಕಡೆಗಣನೆ : ಆಡಳಿತ ಮಂಡಳಿ, ಶಿಕ್ಷಕರ ಪ್ರತಿಭಟನೆ

September 5, 2020

ಮಡಿಕೇರಿ ಸೆ.5 : ಕೋವಿಡ್ ಲಾಕ್‍ಡೌನ್ ಪರಿಣಾಮ ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳು ಹಾಗೂ ಖಾಸಗಿ ಶಿಕ್ಷಕರನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿತು.
ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗÀಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಝರುಗಣಪತಿ ಮಾತನಾಡಿ, ಅನುದಾನ ರಹಿತ ಶಾಲೆಗಳ ಶಿಕ್ಷಕರು ಸರ್ಕಾರದಿಂದ ಯಾವುದೇ ನೆರವು ದೊರೆಯದೆ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಖಾಸಗಿ ಶಾಲೆಗಳ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು.
2019-20ನೇ ಸಾಲಿನ ಆರ್‍ಟಿಇ ಅನುದಾನವನ್ನು ನೀಡದೆ ಶಿಕ್ಷಣ ಇಲಾಖೆ ಸತಾಯಿಸುತ್ತಿದೆ. ಯಾವುದೇ ಕಾರಣವನ್ನು ನೀಡದೆÀ ಪಾವತಿಸಬೇಕಾದ ಮೊತ್ತವನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸಿರುವುದು ಖಂಡನೀಯ ಎಂದರು.
2017 ಕ್ಕೂ ಮೊದಲು ಪ್ರಾರಂಭವಾಗಿರುವ ಶಿಕ್ಷಣ ಸಂಸ್ಥೆಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ನೀಡುವ ಬದಲು, ಹೊಸ ಶಾಲೆಗಳ ಷರತ್ತುಗಳನ್ನು ಹಾಕುವ ಮೂಲಕ ಕಿರುಕುಳ ನೀಡಲಾಗುತ್ತಿದೆ. ಅಲ್ಲದೆ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡಲಾಗಿದೆ ಎಂದು ಆರೋಪಿಸಿದರು.
::: ಬೇಡಿಕೆಗಳು :::
ಆರ್‍ಟಿಇ ಹಣವನ್ನು ತಕ್ಷಣ ಜಾರಿಗೊಳಿಸಬೇಕು, ಶಿಕ್ಷಕರ ಕಲ್ಯಾಣ ನಿಧಿಯಿಂದ ಗೌರವಧನ ನೀಡುವ ಬಗ್ಗೆ ಮತ್ತೊಮ್ಮೆ ಚರ್ಚಿಸಿ ಖಾಸಗಿ ಶಿಕ್ಷಕರಿಗೂ ಸರ್ಕಾದಿಂದ ವಿಶೇಷ ಗೌರವಧನ ನೀಡಬೇಕು, ಎಸ್‍ಎಟಿಎಸ್ ತಂತ್ರಾಂಶದಲ್ಲಿ 2020-21ರ ದಾಖಲಾತಿ ಪ್ರಕ್ರಿಯೆ ಪಾಲಕ-ಪೋಷಕರು ಮಾಡದೆ ಇದ್ದರೂ, ಬಿಇಓ ಕಚೇರಿಗಳು ಬಲವಂತವಾಗಿ ದಾಖಲಾತಿ ಪ್ರಕ್ರಿಯೆ ಮುಗಿಸಿ ಎಂದು ಒತ್ತಡ ಹೇರುತ್ತಿರುವುದು ಅವೈಜ್ಞಾನಿಕ ಕ್ರಮವಾಗಿದ್ದು, ಸರ್ಕಾರವೇ ಪೋಕಷರಿಗೆ ದಾಖಲಾತಿ ಮಾಡಲು ಸ್ಪಷ್ಟ ಆದೇಶ ನೀಡಬೇಕು.
ಮಕ್ಕಳ ಸುರಕ್ಷತೆಯನ್ನು ಪರಿಗಣಿಸಿ ತಕ್ಷಣ ಕನಿಷ್ಠ ಮೂಲಭೂತ ಸೌಕರ್ಯ ನೀಡುವುದರೊಂದಿಗೆ ಆರ್.ಆರ್. ಪ್ರಕ್ರಿಯೆಯನ್ನು ನೆರವೇರಿಸಲು ಆದೇಶಿಸಬೇಕು. ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು ಮತ್ತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ಕೊಟ್ರಂಗಡ ತಿಮ್ಮಯ್ಯ, ಸಲಹೆಗಾರ ಎಂ.ಎಸ್. ಪೂವಯ್ಯ, ಸದಸ್ಯರಾದ ಸಚಿನ್ ವಾಸುದೇವ್, ಲಿಖಿತ್ ಕುಮಾರ್, ಶಿಕ್ಷಕರಾದ ಬಿಂದುಸಾರ, ಗೌರಮ್ಮ ಮತ್ತಿತತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!