ಕೊಡಗಿನಲ್ಲಿ ಕೋವಿಡ್ ಮೃತರ ಸಂಖ್ಯೆ 22 ಕ್ಕೆ ಏರಿಕೆ

05/09/2020

ಮಡಿಕೇರಿ ಸೆ.5 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಶನಿವಾರ ಮತ್ತೊಂದು ಸಾವು ಸಂಭವಿಸಿದ್ದು, ಇದರೊಂದಿಗೆ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಸೋಮವಾರಪೇಟೆ ತಾಲೂಕು ಕುಸುಬೂರು ನಿವಾಸಿ 70 ವರ್ಷದ ಪುರುಷ ಸಾವಿಗೀಡಾದವರು.
ಕಳೆದ 15 ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಜ್ವರ ಕಡಿಮೆಯಾಗದ ಕಾರಣ ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದು, ಅವರಿಗೆ ತುಂಬಾ ಸುಸ್ತು ಇದ್ದ ಕಾರಣ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ತೆರಳುವಂತೆ ವೈದ್ಯರು ಸಲಹೆ ಮಾಡಿದ್ದರು.
ಅದರಂತೆ ಆ.30ರಂದು ಅವರು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಕೋವಿಡ್ ಪರೀಕ್ಷೆ ನಡೆಸಿದಾಗ ಅವರಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಅವರ ದೇಹದಲ್ಲಿ ಆಮ್ಲಜನಕ ಕಡಿಮೆಯಿದ್ದ ಕಾರಣ ಐಸಿಯುನಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ಮುಂದುವರಿಸಲಾಗಿದ್ದರೂ, ಶನಿವಾರ ಅವರು ಸಾವಿಗೀಡಾಗಿದ್ದಾರೆ. ಅವರ ಮೃತದೇಹದ ಅಂತ್ಯ ಸಂಸ್ಕಾರವನ್ನು ಸರಕಾರದ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.