ಮಂಜಿನ ನಗರಿಯಲ್ಲಿ ಅಜರಾಮರವಾದ ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ಪ್ರತಿಮೆ

September 5, 2020

ಐದುವರೆ ದಶಕದ ಹಿಂದೆ(1965) ಭಾರತ-ಪಾಕ್ ನಡುವೆ ನಡೆದ ಯುದ್ಧದಲ್ಲಿ ಶತ್ರು ವಿಮಾನವನ್ನು ಹೊಡೆದರುಳಿಸಿ ಬಲಿದಾನಗೈದ ಕೊಡಗಿನ ಅಮರ ವೀರಯೋಧ ಸ್ಕ್ವಾಡ್ರನ್‍ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆಯನ್ನು ಮಂಜಿನ ನಗರಿ ಮಡಿಕೇರಿಯ ಸ್ಕ್ವಾ.ಲೀ.ಅಜ್ಜಮಾಡದೇವಯ್ಯ ವೃತ್ತದಲ್ಲಿ ಪ್ರತಿಷ್ಠಾಪಿಸುವುದರ ಮೂಲಕ ವೀರಯೋಧನ ಕೀರ್ತಿ ಅಜರಾಮರವಾಗಲೆಂದು ಕೊಡವ ಮಕ್ಕಡ ಕೂಟದ ಸಂಸ್ಥಾಪಕ ಬೊಳ್ಳಜಿರ ಬಿ.ಅಯ್ಯಪ್ಪನವರ ಎಂಟು ವರ್ಷಗಳ ಪರಿಶ್ರಮಕ್ಕೆ ಫಲಸಿಕ್ಕಂತಾಗಲಿದೆ.
ಕೊಡಗಿನ ವೀರಸೇನಾ ಪರಂಪರೆಯ ಇತಿಹಾಸದಲ್ಲಿ ಎರಡನೆಯ ಅತ್ಯುನ್ನತ ಶೌರ್ಯಪ್ರಶಸ್ತಿಯಾದ ಮಹಾವೀರ ಚಕ್ರಪ್ರಶಸ್ತಿ ಮರಣೋತ್ತರವಾಗಿ ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯನವರಿಗೆ ಹಾಗೂ ಪ್ರಸ್ತುತ ಬೆಂಗಳೂರಿನಲ್ಲಿ ತಮ್ಮ ನಿವೃತ್ತಿ ನಡೆಸುತ್ತಿರುವ ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಎಸ್.ಗಣಪತಿ ಅವರು ಈ ಗೌರವಯುತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೊಡವ ಮಕ್ಕಡಕೂಟ, ಅಜ್ಜಮಾಡ ದೇವಯ್ಯ ಮೆಮೋರಿಯಲ್ ಟ್ರಸ್ಟ್, ಅಜ್ಜಮಾಡ ಕುಟುಂಬದ ಜಂಟಿ ಆಶ್ರಯದಲ್ಲಿ ಈ ಪ್ರತಿಮೆ ಸ್ಥಾಪನೆಯ ಶ್ರಮದ ಕನಸು ನನಸಾಯಿತು.
ಕೊಡಗಿನ ಕೇಂದ್ರಸ್ಥಾನ ಮಡಿಕೇರಿಗೆ ಮೈಸೂರಿನಿಂದ ಬರುವಾಗ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪನವರ ಪ್ರತಿಮೆ, ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆ, ವೀರಸೇನಾನಿ ಜನರಲ್ ತಿಮ್ಮಯ್ಯನವರ ಪ್ರತಿಮೆ, ಹುತಾತ್ಮ ಯೋಧ ಮಂಗೇರಿರ ಮುತ್ತಣ್ಣ ಪ್ರತಿಮೆಯ ಜೊತೆಗೆ ಮಹಾವೀರಚಕ್ರ ಸೇನಾಬಿರುದು ಪಡೆದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯನವರ ಕಂಚಿನಪ್ರತಿಮೆ ಮಡಿಕೇರಿಯ ಹೃದಯ ಭಾಗದಲ್ಲಿ ಅಜರಾಮರಗೊಳ್ಳಲಿದೆ.
ಇದೇ ಸೆ. 7ರಂದು ಸೋಮವಾರ ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯನವರ 55ನೇ ಹುತಾತ್ಮ ದಿನ. ಸುಮಾರು 15 ರಿಂದ 20 ಲಕ್ಷವೆಚ್ಚದಲ್ಲಿ ನಿರ್ಮಾಣವಾದ ಆರು ಮುಕ್ಕಾಲು ಅಡಿಎತ್ತರದ ಕಂಚಿನಪ್ರತಿಮೆ ಅನಾವರಣಗೊಳ್ಳಲಿದೆ. ಪೂರ್ವಾಹ್ನ 11 ಗಂಟೆಗೆ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ, ದೇವಯ್ಯನವರು ಪುತ್ತಳಿಯನ್ನು ಉದ್ಘಾಟಿಸಲಿದ್ದು, ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯನವರ ಪತ್ನಿಸುಂದರಿ ದೇವಯ್ಯ, ಪುತ್ರಿಯರಾದ ಸ್ಮಿತಾ ಹಾಗೂ ಪ್ರೀತಾ, ಜಿಲ್ಲೆ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ, ಎಂ.ಪಿ ಸುನಿಲ್‍ಸುಬ್ರಮಣಿ, ಜಿಲ್ಲಾಪಂಚಾಯಿತಿ ಅಧ್ಯಕ್ಷರಾದ ಬಿ.ಎ.ಹರೀಶ್, ಅಜ್ಜಮಾಡ ಕುಟುಂಬ ಸಮಿತಿಯ ಅಧ್ಯಕ್ಷ ಅಜ್ಜಮಾಡ ಲವ ಕುಶಾಲಪ್ಪ, ಪ್ರತಿಮೆ ನಿರ್ಮಾಣ ಸಮಿತಿಯ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ, ಅಜ್ಜಮಾಡ ಚಂಗಪ್ಪ, ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷರಾದ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಕೊಡಗು ಪ್ರೆಸ್ ಕ್ಲಬ್ಬಿನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡವ ಮಕ್ಕಡ ಕೂಟದ ಸಂಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಜಿಲ್ಲಾಧಿಕಾರಿಗಳು, ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಅಜ್ಜಮಾಡ ಕುಟುಂಬಸ್ಥರು, ನಿವೃತ್ತ ಸೇನಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕ್ಷೇತ್ರ ಪರಂಪರೆಯ ಇತಿಹಾಸ ಹೊಂದಿರುವ ಕೊಡಗಿನ ಮಣ್ಣಿನಲ್ಲಿ ಭಾರತೀಯ ವಾಯುಸೇನಾ ಪಡೆಯ ಸ್ಕ್ವಾಡ್ರನ್‍ಲೀಡರ್ ಹುದ್ದೆಯನ್ನೇರಿ ತನ್ನ ಜೀವದ ಹಂಗನ್ನೆಲ್ಲ ತೊರೆದು ಶತ್ರುಗಳೊಂದಿಗೆ ಹೋರಾಡಿ ಕೀರ್ತಿಮೆರೆಯುತಲೇ ವೀರ ಮರಣವನಪ್ಪಿ ಇಂದಿಗೆ 55ವರ್ಷಗಳೇ ಕಳೆದು ಹೋದ ವೀರಪರಂಪರೆಯ ವೀರಸೇನಾನಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡದೇವಯ್ಯ.
ಅಂದು 1965ನೇ ಇಸವಿ ಭಾರತ-ಪಾಕ್ ಯುದ್ಧದ ಸಂದರ್ಭ ವಿಂಗ್ ಕಮಾಂಡರ್ ಆಗಿದ್ದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಅವರಿಗೆ ಪಾಕ್‍ಭದ್ರ ಕೋಟೆಯಾಗಿದ್ದ ಸರಗೋಡ ವಾಯುನೆಲೆಯ ಮೇಲೆ ತಮ್ಮ ದಾಳಿನಡೆಸುವ ಜವಾಬ್ದಾರಿ ವಹಿಸಲಾಗಿತು. ತಮ್ಮಪಾಲಿನ ಹೊಣೆಗಾರಿಕೆಯನ್ನು ನಿಭಾಯಿಸುವ ಸಲುವಾಗಿ ಹೊರಟ ದೇವಯ್ಯನವರ ತಂಡಕ್ಕೆ ಶತ್ರುಗಳ ವಾಯುನೆಲೆಯನ್ನು ಧ್ವಂಸಗೊಳಿಸುವ ಮೂಲಕ ಗುರಿಸಾಧಿಸಿ ಹಿಂತಿರುಗಿ ಬರುವ ಎಲ್ಲಾ ಅವಕಾಶಗಳಿದ್ದರೂ ತಮ್ಮ ತಂಡದ ಇತರೆಯುದ್ಧ ವಿಮಾನಗಳ ಮೇಲೆ ದಾಳಿಯಾಗದಿರಲಿ ಎಂದು ಬೆಂಗಾವಲಾಗಿ ಸುರಕ್ಷಿತವಾಗಿ ಹಿಂತಿರುಗುತ್ತಿದ್ದಂತೆ ದಿಢೀರನೆ ಹಿಂಬಾಲಿಸಿದ ಶತ್ರು ವಿಮಾನದೊಂದಿಗೆ ಮತ್ತೆ ಹೋರಾಟ ನಡೆಸಬೇಕಾಗಿತ್ತು.
ಎದೆಗುಂದದ ದೇವಯ್ಯ ಪ್ರಾಣದ ಹಂಗುತೊರೆದು ತನ್ನದೇಯಾದ ವಿಮಾನದ ಹೋರಾಟದಲ್ಲಿ ರಣರಂಗದಲ್ಲಿ ಭೂಸೇನಾಸೈನಿಕರು ಮುಖಾಮುಖಿ ಹೇಗೆ ಹೋರಾಡುತಾರೋ ಅದೇರೀತಿ ವಾಯೂಸೇನೆಯಲ್ಲೂ ಮುಖಾಮುಖಿ ಹೋರಾಡುವ ಅಪಾಯಕಾರಿ ಯುದ್ಧವಾದ ಡಾಗ್‍ಫೈಟನ್ನು ಕೆಚ್ಚೆದೆಯಿಂದ ಎದುರಿಸಬೇಕಿತ್ತು. ಯುದ್ಧ ವಿಮಾನಗಳು ಪರಸ್ಪರ ಡೈ ಹೊಡೆಯುತ್ತಾ ಬಹುಹೊತ್ತಿನವರೆಗೆ ದಾಳಿ ಮುಂದುವರಿಯಿತು. ದೇವಯ್ಯ ತನ್ನ ವಿಮಾನದಿಂದ ಸ್ಟಾರ್‍ಫೈಟರ್‍ಗೆ ತೀವ್ರ ಹಾನಿಮಾಡಿದರು. ಶತ್ರುಗಳ ಬಲಿಷ್ಠವಾದ ಸೂಪರ್ ಸಾನಿಕ್ ವಿಮಾನವನ್ನು ಹೊಡೆದು ಉರುಳಿಸುವ ಮೂಲಕ ಭಾರತೀಯ ವಾಯುಪಡೆಯಲ್ಲಿ ಸಾಹಸದ ಒಂದು ದಾಖಲೆ ನಿರ್ಮಿಸಿದರು. ಕಾಳಗದ ಕೊನೆಯಲ್ಲಿ ತನ್ನ ದೇವಯ್ಯನವರ ವಿಮಾನಕ್ಕೂ ದಕ್ಕೆಯಾಯಿತು. ಆ ಸಂದರ್ಭ ತಾನೂಕೂಡ ಪ್ಯಾರಚೂಟ್ನನಲ್ಲಿ ಹಾರುವ ಅವಕಾಶವಿತ್ತು. ಆದರೆ ತಾನಿರುವ ಶತ್ರುವಿನ ನೆಲದಲ್ಲಿ ಇಳಿದರೆ ಸೆರೆಯಾಗಿ ತಲೆತಗ್ಗಿಸಲು ಕೊಡಗಿನ ಮಹಾವೀರನಿಗೆ ಮನಸಾಗಿಲಿಕಿಲ್ಲವೋ ಅಥವಾ ಅದಾಗಲೇ ಹೊತ್ತಿ ಉರಿಯುತಿದ್ದ ವಿಮಾನದಿಂದ ಹೊರಜಿಗಿಯಲು ಸಾಧ್ಯವಾಗಿಲ್ಲವೋ ತಾನಿದ್ದ ಯುದ್ಧವಿಮಾನ ಪತನಗೊಂಡು ಸುಟ್ಟು ಕರಕಲಾದ ಪರಿಣಾಮ ದೇವಯ್ಯ ತಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಅಮರದಾದರು. 1965ರ ಸೆಪ್ಟಂಬರ್ 7 ರಂದು ನಡೆದ ಈ ಘಟನೆಯಲ್ಲಿ ದೇವಯ್ಯ ತನ್ನ ಸೇನಾ ಜೀವನದಲ್ಲಿ ಸಾಹಸ ಮೇರೆದು ತನ್ನ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿಯೇ ಬಿಟ್ಟಾಗ ದೇವಯ್ಯ ಅಮರ್ ರಹೇ… ಅಮರ್ ರಹೇ.. ಎಂಬ ಕೂಗು ಮುಗಿಲೆತ್ತರಕ್ಕೆ ತಲುಪಿದರೂ ಜಗತ್ತಿಗೆ ತಿಳಿಯಲು ಸಾಕಷ್ಟು ವರ್ಷಗಳೇ ಕಳೆದುಹೋಯಿತು. 23ವರ್ಷಗಳ ನಂತರ ಅವರ ಹೋರಾಟದ ಪರಿಯನ್ನು ಶತ್ರುದೇಶದ ಪೈಲೇಟ್ ಒಬ್ಬ ವಿವರಿಸಿದ್ದು, ಬ್ರಿಟೀಷ್ ಪತ್ರಕರ್ತನೊಬ್ಬ ಭಾರತ-ಪಾಕಿಸ್ತಾನಯುದ್ಧದ ಕುರಿತು ರಚಿಸಿದ ಕೃತಿಯಲ್ಲೂ ಸ್ಕ್ವಾಡ್ರನ್‍ಲೀಡರ್ ಅಜ್ಜಮಾಡ ದೇವಯ್ಯನವರ ಸಾಧನೆ ಹಾಗೂ ಹೋರಾಟ ಅಪ್ರತಿಮವಾದದೆಂದು ದಾಖಲಾಗಿದ ಘಲವೇ ಇಡೀ ಜಗತ್ತಿಗೆ ತಿಳಿಯಿತು.
ಕೊಡಗಿನ ಶ್ರೀಮಂಗಲದ ಕುರ್ಚಿ ಗ್ರಾಮದ ಅಜ್ಜಮಾಡ ಬೋಪಯ್ಯ ನೀಲಮ್ಮ ದಂಪತಿಗಳ ಪುತ್ರ ದೇವಯ್ಯ 1954ರ ತನ್ನ 22ರ ಹರೆಯದಲ್ಲಿ ಸೇನೆಗೆ ಸೇರಿ ತಮ್ಮ 11 ವರ್ಷದ ಸೇನಾ ಜೀವನದಲ್ಲಿ ದೇಶ ಸೇವೆಯಲ್ಲಿ ಅಸಾಮಾನ್ಯ ಸಾಹಸ, ಎದೆಗಾರಿಕೆ ತ್ಯಾಗ-ಬಲಿದಾನಗಳನ್ನು ಪರಿಗಣಿಸಿ ಭಾರತ ಸರ್ಕಾರ ಮರಣೋತ್ತರವಾಗಿ ದೇವಯ್ಯರವರಿಗೆ 1988ರಲ್ಲಿ ವiಹಾವೀರಚಕ್ರ ಪ್ರಶಸ್ತಿಯನ್ನು ಅಂದಿನ ರಾಷ್ಟ್ರಪತಿ ಆರ್ ವೆಂಕಟರಾಮನ್‍ರವರು ದಿ.ದೇವಯ್ಯರವರ ಪತ್ನಿ ಸುಂದರಿದೇವಯ್ಯರವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿತು.
ಅಂದೊಂದು ದಿನ ಪತ್ನಿಮಕ್ಕಳೊಂದಿಗೆ ಇದ್ದ ಸಮಯ ವಾಯುಪಡೆಯ ಸಂದೇಶ ರವಾನಿಸುವ ಯೋಧನೊಬ್ಬ ಬಂದು ನೀಡಿದ ಟೆಲಿಗ್ರಾಂನಲ್ಲಿ ಗಡಿಯಲ್ಲಿ ಪಾಕಿಸ್ತಾನದ ಸೈನ್ಯವು ಅಟ್ಟಹಾಸ ಮೆರೆಯುತ್ತಿದ್ದು ಯುದ್ಧ ಘೋಷಣೆಗೆ ಸಿದ್ಧರಾಗುವ ಬಗ್ಗೆ ತಿಳಿದು ಪತ್ನಿ ಹಾಗೂ ಪುಟ್ಟ ಕಂದಮ್ಮನಿಗೆಲ್ಲ ಧೈರ್ಯತುಂಬಿ ಯುದ್ಧಕ್ಕೆ ಹೊರಟರು. ಪ್ರತಿಯೊಬ್ಬ ಯೋಧನ ಪತ್ನಿಗೂಗೊತ್ತು ರಣರಂಗದಿಂದ ಹಿಂದಿರುಗಿದರೆ ವೀರಬಂದ ಹೆಮ್ಮೆ. ಇಲ್ಲದಿದ್ದರೆ ಹುತಾತ್ಮಪತಿ ಎಂಬ ಪಟ್ಟ. ಅದೇ ರೀತಿ ಕೊಡವರಿಗೆ ಯುದ್ಧ ಎನ್ನುವುದು ಸಾಮಾನ್ಯ. ಗಂಡು ಯುದ್ಧಭೂಮಿಯಲ್ಲಿ ಹೋರಾಡಿ ಸಾಯಬೇಕು. ಹೆಣ್ಣು ಮಕ್ಕಳನ್ನು ಹೆತ್ತುಸಾಯಬೇಕೆನ್ನುವುದು ಕೊಡವರ ರಕ್ತಗತವಾಗಿಬಂದ ಗಾದೆಮಾತು. ಅನಾಧಿಕಾಲದಿಂದಲೂ ಸೈನ್ಯದಲ್ಲಿ ಹೋರಾಡಿದವರಿದ್ದಾರೆ. ವಿವಾಹದ ದಿನದಂದೇ ಯುದ್ಧಕ್ಕೆ ತೆರಳಿ ವೀರಮರಣ ವನ್ನಪ್ಪಿದವರಿದ್ದಾರೆ. ಕೈಕಾಲು ಕಳೆಕೊಂಡವರು, ಕಣ್ಮರೆಯಾದವರಿದ್ದಾರೆ ಅದರಂತೆ ತಂದೆ, ಸಹೋದರ, ಪತಿ ಮಗನ್ನು ಕಳಕೊಂಡು ಇಡೀ ಬಾಳನ್ನು ದೇಶ ರಕ್ಷಣೆಗಾಗಿ ಮಡುಪಿಟ್ಟವರರಲ್ಲಿ ವೀರಮರಣವನಪ್ಪಿದ ಹತಾತ್ಮಯೋಧನ ಪತ್ನಿ ಎಂಬಪಟ್ಟದೊಂದಿಗೆ ಸ್ಕ್ವಾಡ್ರನ್ ಲೀಡರ್.ದಿ. ಅಜ್ಜಮಾಡದೇವಯ್ಯ ಧರ್ಮ ಪತ್ನಿ ಸುಂದರಿ ದೇವಯ್ಯ. ತಮ್ಮ ಇಬ್ಬರು ಪುತ್ರಿಯರೊಂದಿಗೆ ದೇಶಕ್ಕಾಗಿ ಪ್ರ್ರಾಣತೆತ್ತ ತನ್ನ ಪತ್ನಿಯ ನೆನಪಿನೊಂದಿಗೆ ಬದುಕು ಕಳೆಯುತ್ತಿದ್ದಾರೆ.
1965ಯುದ್ಧ ಹಾಗೂ ಕೊಡಗಿನಮಹಾವೀರ ಕೃತಿ..
ಬದುಕನ್ನು ದೇಶಕ್ಕಾಗಿ ಮುಡುಪಾಗಿಟ್ಟ ಮಹಾವೀರ ಸ್ಕ್ವಾಡ್ರನ್ ಲೀಡರ್ ದಿ. ಅಜ್ಜಮಾಡ ದೇವಯ್ಯ ನೆನಪು ದಾಖಲೆ ಮಾಡಬೇಕೆನ್ನುವುದು ಕೊಡವ ಮಕ್ಕಡಕೂಟದ ಆಶಯವಾಗಿತ್ತು. ಸಾಹಿತಿ ಹಾಗೂ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ದೇವಯ್ಯನವರ ಪರಿಚಯ, ದೇಶಪ್ರೇಮ, ಹೋರಾಟದ ಬಗ್ಗೆ ಅಧ್ಯಯನ ನಡೆಸಿ ಸಾಕಷ್ಟು ಮಾಹಿತಿ ಸಂಗ್ರಹಿಸಿ 1965ರ ಯುದ್ದ ಹಾಗೂ ಕೊಡಗಿನ ಮಹಾವೀರ ಎಂಬ ಕೃತಿಯನ್ನು ರಚಿಸಿ ಸ್ಕ್ವಾಡ್ರನ್ ಲೀಡರ್ ದಿ. ಅಜ್ಜಮಾಡ ದೇವಯ್ಯನವರ ಜೀವನ ಸಾಧನೆಯ ಮೆಟ್ಟಿಲನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಕೊಡವ ಮಕ್ಕಡ ಕೂಟ ಹಾಗೂ ಅಜ್ಜಮಾಡ ಕುಟುಂಬ ಕೃತಿಯನ್ನು 2017ರ ಸೆಪ್ಟಂಬರ್ 7ರಂದು ಅನಾವರಣಗೊಳಿಸಿತ್ತು. 2018ಫೆಬ್ರವರಿ 15 ರಂದು ದ್ವಿತೀಯ ಮುದ್ರಣ ಮಾಡಲಾಗಿದೆ.
ಎಂಟು ವರ್ಷಗಳ ಹಿಂದೆ ಮಡಿಕೇರಿಯ ಕೇಂದ್ರಬಿಂದುವಾದ ಹಳೆಯ ಬಸ್ಸ್ ನಿಲ್ದಾಣದ ಮುಂದಿರುವ ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯನವರ ವೃತ್ತಕ್ಕೆ ವಾಹನವೊಂದು ಅಪ್ಪಳಿಸಿ ಹಾನಿಮಾಡಿತ್ತು. ಆ ಸಮಯದಲ್ಲಿ ಕೊಡವ ಮಕ್ಕಡ ಕೂಟದ ಸಂಸ್ಥಾಪಕ ಬೊಳ್ಳಜಿರ ಬಿ.ಅಯ್ಯಪ್ಪ ತನ್ನ ತಂಡದೊಂದಿಗೆ ವೃತ್ತವನ್ನು ದುರಸ್ಥಿಗೊಳಿಸಿತು. ಅಲ್ಲಿಂದ ಪ್ರತೀ ವರ್ಷ ವೀರಮರಣವನಪ್ಪಿದ ಸೆಪ್ಟಂಬರ್ 7ರ ದಿನವನ್ನು ಕೊಡವ ಮಕ್ಕಡ ಕೂಟ ಹಾಗೂ ಅಜ್ಜಮಾಡ ಕುಟುಂಬದ ಸಹಯೋಗದಲ್ಲಿ ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ಸ್ಮರಣಾದಿನವನ್ನು ಆಚರಿಸುವ ಮೂಲಕ ವೀರಯೋಧನಿಗೆ ಗೌರವಸಲ್ಲಿಸುತ್ತ ಬರುತ್ತಿದ್ದಾರೆ. ದೇವಯ್ಯನವರ ವೃತ್ತದಲ್ಲಿ ಕಂಚಿನ ಪ್ರತಿಮೆಯನ್ನು ಸ್ಥಾಪಿಸಬೇಕೆನ್ನುವುದು ಕೊಡವ ಮಕ್ಕಡ ಕೂಟದ ಸಂಸ್ಥಾಪಕ ಬೊಳ್ಳಜಿರ ಬಿ.ಅಯ್ಯಪ್ಪನವರ ಕನಸಾಗಿತ್ತು. ನಂತರದಲ್ಲಿ ಜಿಲ್ಲಾಧಿಕಾರಿ, ಪೋಲಿಸ್ ಹಾಗೂ ಮಡಿಕೇರಿ ನಗರಸಭೆಗೆ ವೀರಯೋಧ ದೇವಯ್ಯನವರ ಪುತ್ತಳಿ ಪ್ರತಿಷ್ಠಾಪನೆಗಾಗಿ ಅರ್ಜಿ ಹಿಡಿದು ಹೊರಟ ಅಯ್ಯಪ್ಪ. ಆ ಸಮಯದಲ್ಲಿ ಅಜ್ಜಮಾಡ ಕುಟುಂಬಸ್ಥರು ಪುತ್ತಳಿ ಸ್ಥಾಪನೆಗೆ ಕೈಜೋಡಿಸಿ ಸ್ಕ್ವಾ.ಲೀ.ಅಜ್ಜಮಾಡದೇವಯ್ಯ ಮೇಮೋರಿಯಲ್ ಟ್ರಸ್ಟ್ ಸ್ಥಾಪಿಸಿ ಪುತ್ತಳಿ ನಿರ್ಮಾಣಕ್ಕೆ ಹಾಗೂ ಕೊಡವ ಮಕ್ಕಡ ಕೂಟಕ್ಕೆ ಸಂರ್ಪೂಣ ಬೆಂಬಲ ನೀಡತೊಡಗಿದರು. ಬಿಡದಿಯಲ್ಲಿ ಕಂಚಿನಪ್ರತಿಮೆ ಸಿದ್ದವಾಗುತ್ತಿದ್ದರೂ ಸಂಬಂಧ ಪಟ್ಟಇಲಾಖೆಗಳ ಅನುಮತಿ ಹೈಮಾಸ್ಕ್ ವರ್ಗಾವಣೆ ಹೀಗೆ ಹತ್ತು ಹಲವು ಕಾರಣದಿಂದ ಪುತ್ತಳಿ ಪ್ರತಿಷ್ಠಾಪನಾ ಕನಸು ಹಲವು ವರ್ಷ ತಡವಾಗತೊಡಗಿತು. ಬೊಳ್ಳಜಿರ ಬಿ.ಅಯ್ಯಪ್ಪನವರು ಇಲಾಖಾಅಧಿಕಾರಿಗಳ ಜೊತೆ, ಹಿರಿಯರೊಂದಿಗೆ, ರಾಜಕೀಯ ಮುಖಂಡರ ಜೊತೆ ಹಲವುಬಾರಿ ಚರ್ಚಿಸಿ ಹಗಲಿರುಳು ಶ್ರಮಿಸಿ ಪುತ್ತಳಿ ನಿರ್ಮಾಣಕ್ಕೆ ಅನುಮತಿ ಪಡೆದರು. ಈಗಾಗಲೇ ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯನವರ ಪುತ್ತಳಿ ಪ್ರತಿಷ್ಠಾಪನಾ ಕಾರ್ಯ ಮುಗಿದಿದ್ದು, ಸೆಪ್ಟಂಬರ್ 7ರಂದು ಅನಾವರಣಗೊಂಡಾಗ ಯುದ್ದದಲ್ಲಿ ಪ್ರಾಣತ್ಯಾಗಮಾಡಿದ ಕೊಡಗಿನ ವೀರಯೋಧನಿಗೆ ದೇಶವೇ ಗೌರವಸಲ್ಲಿಸುವ ಆ ಕ್ಷಣವಾಗಲಿದೆ.

                                     -ಪುತ್ತರಿರ ಕರುಣ್ ಕಾಳಯ್ಯ