ಕೆ.ಬಾಡಗದಲ್ಲಿ ಕಲುಷಿತ ನೀರು ಶುದ್ಧೀಕರಣ ಘಟಕ : ಕೊರವೇ ವಿರೋಧ

ಮಡಿಕೇರಿ ಸೆ.5 : ಕೊಡಗಿನ ಹಲವಾರು ಜ್ವಲಂತ ಸಮಸ್ಯೆಗಳಿಗೆ ಕೊಡಗಿನ ಜನಪ್ರತಿನಿಧಿಗಳ ಬೇಜವಬ್ದಾರಿತನ ಮತ್ತು ಸರ್ಕಾರದ ಮಲತಾಯಿ ಧೋರಣೆಯೇ ಕಾರಣ ಎಂದು ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ವರ್ಷಗಳಿಂದ ಅತ್ಯಂತ ಅವೈಜ್ಞಾನಿಕವಾಗಿ ನಡೆಸಲಾಗುತ್ತಿರುವ ಯುಜಿಡಿ ಕಾಮಗಾರಿಯಿಂದ ಮಡಿಕೇರಿ ನಗರದ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರಿಗೆ ಹಾಗೂ ಪಾದಾಚಾರಿಗಳ ಸಂಚಾರಕ್ಕೆ ಅಡ್ಡಿಯಾಗಿದೆ.
ಈ ರೀತಿಯ ಯೋಜನೆಗಳು ಬೆಟ್ಟಗುಡ್ಡ ಪ್ರದೇಶವಾದ ಕೊಡಗಿಗೆ ಸರಿಹೊಂದುವುದಿಲ್ಲ ಎಂದು ರಕ್ಷಣಾ ವೇದಿಕೆ ಆರಂಭದಿಂದಲೇ ಹೇಳಿಕೊಂಡು ಬಂದಿದೆ. ಆದರೆ ಜನಪ್ರತಿನಿಧಿಗಳ ಅಸಡ್ಡೆ ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಇದೀಗ ಯುಜಿಡಿ ಕಾಮಗಾರಿ ನೆನೆಗುದಿಗೆ ಬಿದ್ದು, ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ಹಣ ನೀರುಪಾಲಾಗಿದೆ ಎಂದು ಆರೋಪಿಸಿದರು.
ಕಲುಷಿತ ನೀರು ಶುದ್ಧೀಕರಣ ಘಟಕವನ್ನು ಕೆ.ಬಾಡಗ ಗ್ರಾಮದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಇದರಿಂದ ಅಪಾಯಗಳು ಎದುರಾಗಲಿದೆ ಎಂದು ಪವನ್ ಪೆಮ್ಮಯ್ಯ ಆತಂಕ ವ್ಯಕ್ತಪಡಿಸಿದರು. ಈ ಪ್ರದೇಶದ ಒಂದು ಬದಿಯಲ್ಲಿ ಗಾಲ್ಫ್ ಮೈದಾನ, ಮತ್ತೊಂದು ಬದಿಯಲ್ಲಿ ಸ್ಟೋನ್ ಹಿಲ್‍ನ ಅರಣ್ಯ ಪ್ರದೇಶವಿದೆ. ಅಲ್ಲದೆ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣ, ಕೊಡವ ಹೆರಿಟೇಜ್ ಸೆಂಟರ್, ಜಿಲ್ಲಾ ಪಂಚಾಯತ್ ಕಚೇರಿ, ಕೇಂದ್ರಿಯ ವಿದ್ಯಾಲಯ ಹಾಗೂ ಎಫ್‍ಎಂಕೆಎಂಸಿ ಕಾಲೇಜು ಇದ್ದು, ಈ ಭಾಗದಲ್ಲಿ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪನೆಯಾದರೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾನಗರ, ಸುಬ್ರಮಣ್ಯ ನಗರ, ರೈಫಲ್ ರೆಂಜ್ ಬಡಾವಣೆಗಳ ಜಲ ಮೂಲಗಳು ಕಲುಷಿತಗೊಳ್ಳಲಿದೆ ಎಂದರು.
ಸ್ಟೋನ್ ಹಿಲ್ ಬೆಟ್ಟದ ಮೇಲೆ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ನಿವಾಸಿಗಳಿಗೆ ಮತ್ತೊಂದು ಯೋಜನೆ ಗಾಯದ ಮೇಲೆ ಬರೆ ಎಳೆದಂತಾಗಲಿದೆ. ಈ ಪ್ರದೇಶ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪಿಸಲು ಯೋಗ್ಯವಲ್ಲದಿದ್ದರೂ ಕಾಮಗಾರಿಯನ್ನು ಆರಂಭಿಸಲು ಸಿದ್ಧತೆ ನಡೆದಿದೆ. ಜನರ ಹಣವನ್ನು ದುರುಪಯೋಗ ಪಡಿಸುವ ಉದ್ದೇಶ ಇದರ ಹಿಂದೆ ಅಡಗಿದೆ ಎಂದು ಪವನ್ ಪೆಮ್ಮಯ್ಯ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಿ.ಎಂ.ಹರೀಶ್, ಖಜಾಂಚಿ ಉಮೇಶ್ ಗೌಡ, ನಿರ್ದೇಶಕರುಗಳಾದ ಪಾಪುರವಿ, ಸುಲೇಮಾನ್ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಶೆಟ್ಟಿ ಉಪಸ್ಥಿತರಿದ್ದರು.
