ಸರ್ಕಾರದ ನಿರ್ಲಕ್ಷ್ಯದಿಂದ ಶಿಕ್ಷಣ ಕ್ಷೇತ್ರಕ್ಕೆ ಸಂಕಷ್ಟ : ಕೊಡಗು ಕಾಂಗ್ರೆಸ್ ಆರೋಪ

05/09/2020

ಮಡಿಕೇರಿ ಸೆ.5 : ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿರುವ ಪರಿಣಾಮ ಶೈಕ್ಷಣಿಕ ಕ್ಷೇತ್ರ ಜಟಿಲ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಡೀ ಶಿಕ್ಷಣ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿದ್ದು, ಖಾಸಗಿ ಶಾಲೆಗಳ ಹಾಗೂ ಶಿಕ್ಷಕರ ಪರಿಸ್ಥಿತಿ ಹೀನಾಯವಾಗಿದೆ. ಉಳ್ಳವರ ಮಕ್ಕಳು ಆನ್‍ಲೈನ್ ಶಿಕ್ಷಣ, ತಾಂತ್ರಿಕ ಜ್ಞಾನದ ಮೂಲಕ ಶಿಕ್ಷಣ ಪಡೆಯುವತ್ತ ಹೆಜ್ಜೆ ಹಾಕಿದ್ದಾರೆ. ಆದರೆ ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ಒದಗಿಸಲು ಯಾವುದೇ ಯೋಜನೆಯನ್ನು ರೂಪಿಸದ ಸರ್ಕಾರ ಕೈಚೆಲ್ಲಿ ಕುಳಿತ್ತಿದೆ ಎಂದು ಟೀಕಿಸಿದರು.
ಸರ್ಕಾರದ ತಪ್ಪು ನಡೆ ಮತ್ತು ಬೇಜವಬ್ದಾರಿತನದಿಂದಾಗಿ ಕೇವಲ ವಿದ್ಯಾಥಿಗಳಿಗೆ ಮಾತ್ರವಲ್ಲದೆ, ಶಾಲಾ ಶಿಕ್ಷಕರ, ಶಾಲಾಡಳಿತ ವರ್ಗ, ಸಿಬ್ಬಂದಿಗಳು, ಕಾರ್ಮಿಕರುÀ ಹಾಗೂ ಪೋಷಕರ ಮೇಲೂ ಸಾಕಷ್ಟು ದುಷ್ಪರಿಣಾಮಗಳು ಉಂಟಾಗಿದೆ. ಅಸಂಖ್ಯಾತ ಶಿಕ್ಷಕರು ಕೆಲಸವಿಲ್ಲದೆ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 49,883 ಸರ್ಕಾರಿ ಶಾಲೆಗಳು, 7,377 ಅನುದಾನಿತ ಶಾಲೆಗಳು, 18,760 ಖಾಸಗಿ ಶಾಲೆಗಳಿದ್ದು, ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ವರದಿಯನ್ವಯ ರಾಜ್ಯದ ಪ್ರತಿ ನಾಲ್ಕು ಸರ್ಕಾರಿ ಶಾಲೆಗಳ ಪೈಕಿ ಮೂರು ಶಾಲೆಗಳಲ್ಲಿ ಕಂಪ್ಯೂಟರ್ ಸೌಕರ್ಯದ ಕೊರತೆಯಿದೆ.
ಶೇ.72.74 ಶಾಲೆಗಳಲ್ಲಿ ಕಂಪ್ಯೂಟರ್‍ಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿ ಇಲ್ಲ. ನರ್ಸರಿ ಶಾಲೆಗಳ ಮಾಲೀಕರು ಬಾಡಿಗೆ ಕಟ್ಟಲು, ಶಿಕ್ಷಕರಿಗೆ ಸಂಬಳ ನೀಡಲು ಹಣವಿಲ್ಲ ಎಂದು ಶಾಲೆಗಳನ್ನೇ ಮಾರಾಟಕ್ಕಿಟ್ಟಿದ್ದಾರೆ. ಬೆಂಗಳೂರಿನ 11 ಸಾವಿರ ಶಾಲಾ ಬಸ್‍ಗಳು ಸೇರಿದಂತೆ ರಾಜ್ಯಾದ್ಯಂತ ಸುಮಾರು 15 ಸಾವಿರ ಶಾಲಾ ಬಸ್‍ಗಳು ನಿಂತಲ್ಲೆ ನಿಂತಿದ್ದು, ಬಸ್ ಸಿಬ್ಬಂದಿಗಳು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸರ್ವ ಶಿಕ್ಷಣ ಅಭಿಯಾನದ ಮಾಹಿತಿಯನ್ವಯ ರಾಯದ ವಿಜಯಪುರ, ಬೀದರ್, ಕಲ್ಬುರ್ಗಿ, ಕೊಪ್ಪಳ, ಬಳ್ಳಾರಿ ಹಾಗೂ ಧಾರಾವಾಡ ಜಿಲ್ಲೆಗಳಲ್ಲಿ ಸುಮಾರು 13,500ಕ್ಕೂ ಹೆಚ್ಚು ಮಕ್ಕಳು ಶಾಲೆಗಳನ್ನು ತ್ಯಜಿಸಿದ್ದಾರೆ.
ರಾಜ್ಯಾದ್ಯಂತ 40 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಪೂರ್ಣ ಶುಲ್ಕವನ್ನು ಪಾವತಿಸಿದರೂ ಶಿಕ್ಷಕರ ವೇತನವನ್ನು ಶೇ.35 ರಿಂದ 50 ರಷ್ಟು ಕಡಿಮೆ ಮಾಡಲು ಖಾಸಗಿ ಶಾಲೆಗಳು ಮುಂದಾಗಿವೆ ಎಂದು ಮಂಜುನಾಥ್ ಕುಮಾರ್ ತಿಳಿಸಿದರು.
ಸರ್ಕಾರವು ‘ವಿದ್ಯಾಗಮ ಯೋಜನೆ’ ಯಡಿ ವಿದ್ಯಾರ್ಥಿಗಳ ಮನೆಮನೆಗಳಿಗೆ ಭೇಟಿ ನೀಡಿ ತರಗತಿ ನಡೆಸುವಂತೆ ಶಿಕ್ಷಕರ ಮೇಲೆ ಒತ್ತಡ ಹೇರುವ ಮೂಲಕ ಅವರ ಜೀವವನ್ನು ಅಪಾಯಕ್ಕೆ ಒಡ್ಡುತ್ತಿದೆ ಎಂದು ಅವರು ಆರೋಪಿಸಿದರು.
ಮಧ್ಯಾಹ್ನದ ಬಿಸಿಯೂಟವನ್ನು ವಿದ್ಯಾರ್ಥಿಗಳ ಮನೆಗಳಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡುವುದರ ಮೂಲಕ ಅವರ ಪೌಷ್ಟಿಕತೆಯನ್ನು ಕಾಪಾಡಬೇಕು, ಶಾಲೆ ಬಿಟ್ಟ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಿ ಪೋಷಕರ ಮನವೊಲಿಸಿ ಅವರನ್ನು ಮರಳಿ ಶಾಲೆಗೆ ಕರೆತರುವ ಯೋಜನೆ ರೂಪಿಸಬೇಕು, ಶಿಕ್ಷಣ ಕ್ಷೇತ್ರದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗದಲ್ಲಿರುವವರಿಗೆ ಆರ್ಥಿಕ ಪರಿಹಾರ ಪ್ಯಾಕೇಜ್ ಒದಗಿಸಬೇಕು, ಕೋವಿಡ್ ವಿರುದ್ಧ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಶಿಕ್ಷಕರಿಗೆ ಪರಿಹಾರ ನೀಡಬೇಕು, ಬಡ್ಡಿ ರಹಿತ ಸಾಲಗಳನ್ನು ನೀಡುವ ಮೂಲಕ ಶಾಲೆಗಳ ಆರ್ಥಿಕ ಸಾಮಥ್ರ್ಯವನ್ನು ವೃದ್ಧಿಸುವತ್ತ ಗಮನ ಹರಿಸಬೇಕು, ಖಾಸಗಿ ಶಾಲೆಗಳಿಗೆ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು, ಆದ್ಯತೆ ಮೇರೆಗೆ ತಂತ್ರಜ್ಞಾನ ಬಳಸಿಕೊಳ್ಳುವ ಅಂತರವನ್ನು ಕಡಿಮೆಗೊಳಿಸಬೇಕು, ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಗಾಗಿ ಮಾರ್ಗಸೂಚಿಗಳನ್ನು ಹೊರಡಿಸಬೇಕು, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗ ಕ್ಷೇಮವನ್ನು ಆದ್ಯತೆಯಾಗಿ ಪರಿಗಣಿಸಬೇಕು ಎಂದು ಮಂಜುನಾಥ್ ಕುಮಾರ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ವಿ.ಪಿ.ಸುರೇಶ್, ಅಬ್ದುಲ್ ರೆಹಮಾನ್ ಬಾಪು, ಖಜಾಂಚಿ ಹೆಚ್.ಎಂ.ನಂದಕುಮಾರ್, ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಜ್ಜಳ್ಳಿ ರವಿ ಹಾಗೂ ಡಿಸಿಸಿ ಸದಸ್ಯರಾದ ಗೀತಾಧರ್ಮಪ್ಪ ಉಪಸ್ಥಿತರಿದ್ದರು.