ದಶಮಂಟಪ ಸಮಿತಿ ಸಭೆ : ಸಂಪ್ರದಾಯದಂತೆ ದಸರಾ ಆಚರಿಸಲು ನಿರ್ಧಾರ

05/09/2020

ಮಡಿಕೇರಿ ಸೆ.5 : ಮಡಿಕೇರಿ ದಸರಾ ದಶಮಂಟಪ ಸಮಿತಿ ಸಭೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಿತು.
ಸಮಿತಿಯ ಅಧ್ಯಕ್ಷ ರಂಜಿತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಾರಿಯ ದಸರಾ ಜನೋತ್ಸವವನ್ನು ಯಾವ ರೀತಿ ನಡೆಸಬೇಕೆನ್ನುವ ಬಗ್ಗೆ ಚರ್ಚಿಸಲಾಯಿತು. ಕೋವಿಡ್ ಮತ್ತು ಅತಿವೃಷ್ಟಿಯ ಸಂಕಷ್ಟವನ್ನು ಜಿಲ್ಲೆ ಅನುಭವಿಸುತ್ತಿರುವುದರಿಂದ ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಮಂಟಪ ಸಮಿತಿಗಳ ಪದಾಧಿಕಾರಿಗಳು ಒಲವು ವ್ಯಕ್ತಪಡಸಿದರು. ದಶಮಂಟಪಗಳ ಶೋಭಾ ಯಾತ್ರೆ ನಡೆಸಬೇಕೆ ಬೇಡವೇ ಎನ್ನುವ ಬಗ್ಗೆ ಜಿಲ್ಲಾಡಳಿತದ ಸೂಚನೆಯಂತೆ ನಡೆದುಕೊಳ್ಳಬೇಕಾಗುತ್ತದೆ. ಆದರೆ ಐತಿಹಾಸಿಕವಾದ ಸಾಂಪ್ರದಾಯಿಕ ದಸರಾವನ್ನು ನಿಲ್ಲಿಸಲು ಸಾಧ್ಯವಿಲ್ಲ, ಸರಳವಾಗಿಯಾದರೂ ಆಚರಿಸಲೇಬೇಕು. ಅಂತಿಮ ತೀರ್ಮಾನ ಕೈಗೊಳ್ಳಲು ಮತ್ತೊಂದು ಸಭೆ ನಡೆಸುವ ಕುರಿತು ನಿರ್ಧರಿಸಲಾಯಿತು.
ಶ್ರೀದಂಡಿನ ಮಾರಿಯಮ್ಮ ದೇವಾಲಯ ಸಮಿತಿಯ ಬಳಿ ಇದ್ದ ದಶಮಂಟಪ ಸಮಿತಿಯ ಅಧಿಕಾರವನ್ನು ಶ್ರೀಚೌಡೇಶ್ವರಿ ದೇವಾಲಯ ಸಮಿತಿಗೆ ಇದೇ ಸಂದರ್ಭ ಹಸ್ತಾಂತರಿಸಲಾಯಿತು. ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಸತೀಶ್ ಹಾಗೂ ದಶ ದೇವಾಲಯಗಳ ಪದಾಧಿಕಾರಿಗಳು ಹಾಜರಿದ್ದರು.