ಕೊಡಗಿನ ಖಾಸಗಿ ಬಸ್ ಗಳು ಸಧ್ಯಕ್ಕೆ ರಸ್ತೆಗಿಳಿಯಲ್ಲ : ಡೀಸೆಲ್ ಬೆಲೆ ಏರಿಕೆಯೂ ಕಾರಣ

06/09/2020

ಮಡಿಕೇರಿ ಸೆ.6 : ಕೋವಿಡ್ ಕಾರಣದಿಂದ ಕಳೆದ ಐದು ತಿಂಗಳುಗಳಿಂದ ರಸ್ತೆಗಿಳಿಯದ ಕೊಡಗಿನ ಖಾಸಗಿ ಬಸ್ ಗಳು ಸಧ್ಯಕ್ಕೆ ಸಂಚಾರ ಆರಂಭಿಸುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಕಳೆದ ಕೆಲವು ದಿನಗಳಿಂದ ಕೇವಲ 20 ರಿಂದ 25 ಬಸ್ ಗಳು ಮಾತ್ರ ಸಂಚರಿಸುತ್ತಿದ್ದು, ಸರ್ಕಾರ ಅಗತ್ಯ ನೆರವು ನೀಡಿದರೆ ಉಳಿದ ಬಸ್ ಗಳ ಸಂಚಾರ ಅಕ್ಟೋಬರ್ ಅಥವಾ ನವೆಂಬರ್ ತಿಂಗಳ ನಂತರವೇ ಎಂದು ಕೊಡಗು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 150 ಖಾಸಗಿ ಬಸ್ ಗಳಿದ್ದು, ಇವುಗಳನ್ನೇ ಅವಲಂಬಿಸಿ ಬದುಕು ಸಾಗಿಸುತ್ತಿದ್ದ ಸಾವಿರಕ್ಕೂ ಅಧಿಕ ಕುಟುಂಬಗಳು ಅತಂತ್ರವಾಗಿವೆ. ಬಸ್ ಮಾಲೀಕರುಗಳು ತಮ್ಮದೇ ಆದ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಸಂಚಾರವನ್ನು ಆರಂಭಿಸಲು ಆಸಕ್ತಿ ತೋರುತ್ತಿಲ್ಲ. ಖಾಸಗಿ ಬಸ್ ಗಳ ಸಂಚಾರ ಸ್ಥಗಿತಗೊಳಿಸುವ ಸಂದರ್ಭ ಡೀಸೆಲ್ ಬೆಲೆ 63 ರಿಂದ 64 ರೂಪಾಯಿಗಳಷ್ಟಿತ್ತು, ಈಗ 78 ರೂ.ಗಳಿಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ ರೂ.58 ಇದ್ದಾಗ ಪ್ರಯಾಣ ದರವನ್ನು ನಿಗಧಿ ಪಡಿಸಿದ್ದು, ಇದೇ ದರದಲ್ಲಿ ಬಸ್ ಸಂಚಾರ ಅಸಾಧ್ಯವಾಗಿದೆ. ಅಲ್ಲದೆ ಕೋವಿಡ್ ಆತಂಕ ಇನ್ನೂ ಜೀವಂತವಾಗಿರುವುದರಿಂದ ಪ್ರಯಾಣಿಕರ ಕೊರತೆಯೂ ಎದುರಾಗಲಿದೆ. ನಷ್ಟ ಮಾಡಿಕೊಂಡು ಸಂಚಾರವನ್ನು ಆರಂಭಿಸಲು ಮಾಲೀಕರು ಸಿದ್ಧರಿಲ್ಲ.
::: ತೆರಿಗೆ ವಿನಾಯಿತಿ ನೀಡಲಿ :::
ಇತ್ತೀಚೆಗೆ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘ ಬೆಂಗಳೂರಿನಲ್ಲಿ ಧರಣಿ ನಡೆಸಿ ಬಸ್ ಗಳ ಸಂಚಾರವನ್ನು ಆರಂಭಿಸಬೇಕಾದರೆ ಮುಂದಿನ ಆರು ತಿಂಗಳ ಅವಧಿಯ ತೆರಿಗೆ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿದೆ. ರಾಜ್ಯದಲ್ಲಿ 9 ಸಾವಿರ ಖಾಸಗಿ ಬಸ್ ಗಳಿದ್ದು, ಸರ್ಕಾರ ತೆರಿಗೆ ವಿನಾಯಿತಿ ನೀಡಿದರೆ ಮತ್ತು ಡೀಸೆಲ್ ದರ ಇಳಿಕೆ ಮಾಡಿದರೆ ಬಸ್ ಸಂಚಾರ ಆರಂಭಿಸಬಹುದಾಗಿದೆ. ಈ ರೀತಿಯ ಕ್ರಮದಿಂದ ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದು ರಮೇಶ್ ಜೋಯಪ್ಪ ತಿಳಿಸಿದ್ದಾರೆ.
ತೆರಿಗೆ ವಿನಾಯಿತಿಯಿಂದ ಬಸ್ ಸಂಚಾರ ಆರಂಭಗೊಂಡರೆ ಮತ್ತಿತರ ಮೂಲಗಳಿಂದ ತೆರಿಗೆ ರೂಪದ ಆದಾಯ ಸಂಗ್ರಹವಾಗುತ್ತದೆ ಎನ್ನುವುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
::: ಬೇರೆ ಕೆಲಸ ನೋಡಿಕೊಂಡಿದ್ದಾರೆ :::
ಮಾಲೀಕರುಗಳ ಸಮಸ್ಯೆ ಒಂದೆಡೆಯಾದರೆ ಬಸ್ ಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಚಾಲಕರು, ನಿರ್ವಾಹಕರು ಮತ್ತಿತರ ಸಿಬ್ಬಂದಿಗಳು ಪರ್ಯಾಯ ಕೆಲಸಗಳನ್ನು ನೋಡಿಕೊಂಡಿದ್ದಾರೆ. ತೋಟ, ಕಟ್ಟಡ ಕಾಮಗಾರಿ, ಆಟೋರಿಕ್ಷಾ ಚಾಲನೆ ಸೇರಿದಂತೆ ಇತರ ಕೆಲಸ, ಕಾರ್ಯಗಳಲ್ಲಿ ತೊಡಗಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ.
ಕೋವಿಡ್ ಪರಿಸ್ಥಿತಿ ಮತ್ತು ಏರಿಕೆಯಾಗಿರುವ ಡೀಸೆಲ್ ದರ ಖಾಸಗಿ ಬಸ್ ಮಾಲೀಕರುಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರೆ, ಬಸ್ ಗಳನ್ನೇ ಅವಲಂಬಿಸಿ ಬದುಕು ಆರಂಭಿಸಿದ ಮಂದಿ ಸಂಕಷ್ಟದ ಹಾದಿಯಲ್ಲಿದ್ದಾರೆ. ಬೆಟ್ಟ, ಗುಡ್ಡಗಳ ಪ್ರದೇಶ ಕೊಡಗಿನ ಗ್ರಾಮೀಣ ಜನರು ಬಸ್ ಸಂಚಾರವಿಲ್ಲದೆ ತಮ್ಮದೇ ಆದ ಕಷ್ಟ, ನಷ್ಟಗಳನ್ನು ಅನುಭವಿಸುತ್ತಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ಹರಿಸುವ ಅಗತ್ಯವಿದೆ.